ಯೆಮೆನ್: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಯೆಮನ್ ಸರ್ಕಾರ ರದ್ದುಗೊಳಿಸಿದೆ. ಹಲವು ದಿನಗಳಿಂದ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಲು ಭಾರತ-ಯೆಮೆನ್ ಅಧಿಕಾರಿಗಳ ನಡುವೆ ಮಾತುಕತೆಗಳು ನಡೆದಿತ್ತು.
ಹಲವಾರು ದಿನಗಳ ಭಾರತ ಮತ್ತು ಯೆಮನ್‌ನ ಅಧಿಕಾರಿಗಳ ಮಾತುಕತೆಯ ಫಲವಾಗಿ ಕೊಲೆ ಅಪರಾಧಿ, ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಯೆಮೆನ್ ಸರ್ಕಾರ ರದ್ದುಗೊಳಿಸಿದೆ.
ಈ ಕುರಿತು ಗ್ಲೋಬಲ್ ಪೀಸ್ ಇನ್‌ಷಿಯೇಟಿವ್ ಸಂಸ್ಥಾಪಕ ಮತ್ತು ಧಾರ್ಮಿಕ ಗುರು ಡಾ.ಕೆ.ಎ.ಪೌಲ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಅವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ನಿಮಿಷಾ ಪ್ರಿಯಾಗೆ ಜುಲೈ 16ರಂದು ಮರಣದಂಡನೆ ಶಿಕ್ಷೆ ಜಾರಿಗೊಳಿಸಬೇಕಾಗಿತ್ತು. ಆದರೆ ಭಾರತದ ಮಾತುಕತೆಯ ಕಾರಣ ಅದನ್ನು ಮುಂದೂಡಿಕೆ ಮಾಡಲಾಗಿತ್ತು.
ಸಂದೇಶದಲ್ಲಿ ಹೇಳಿದ್ದೇನು?; ಡಾ.ಕೆ.ಎ.ಪೌಲ್ ತಮ್ಮ ವಿಡಿಯೋದಲ್ಲಿ, ’10 ದಿನಗಳಿಂದ ನಿಮಿಷಾ ಪ್ರಿಯಾ ಅವರ ಜೀವ ಉಳಿಸಲು ನಾಯಕರು ಅಪಾರವಾದ ಶ್ರಮವಹಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲಾ ನಾಯಕರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.
“ಯೆಮೆನ್ ನಾಯಕರ ಪರಿಣಾಮಕಾರಿ ಮತ್ತು ಪ್ರಾರ್ಥನಾ ಪೂರ್ವಕ ಪ್ರಯತ್ನಗಳ ಫಲದಿಂದ ಇದು ಸಾಧ್ಯವಾಗಿದೆ. ಇದರಲ್ಲಿ ಭಾರತದ ಪ್ರಯತ್ನವೂ ಸಾಕಷ್ಟಿದೆ. ನಿಮಿಷಾ ಬಿಡುಗಡೆಯಾಗಲಿದ್ದು, ಅವರನ್ನು ಕಾನೂನು ಪ್ರಕ್ರಿಯೆ ಮೂಲಕ ಭಾರತಕ್ಕೆ ಕರೆದುಕೊಂಡು ಹೋಗಬಹುದು” ಎಂದು ತಿಳಿಸಿದ್ದಾರೆ.
ಸದ್ಯ ಸನಾ ಜೈಲಿನಲ್ಲಿ ನಿಮಿಷಾ ಪ್ರಿಯಾ ಇದ್ದಾರೆ. ಅವರನ್ನು ಭಾರತಕ್ಕೆ ಕರೆದುಕೊಂಡು ಹೋಗುವ ಮೊದಲು ಜೈಲಿನಿಂದ ಈಜಿಪ್ಟ್, ಇರಾನ್ ಅಥವ ಟರ್ಕಿಗೆ ಕರೆದುಕೊಂಡು ಹೋಗಲಾಗುತ್ತದೆ. ಬಳಿಕ ಭಾರತಕ್ಕೆ ಕರೆತರಲಾಗುತ್ತದೆ. ಇದಕ್ಕಾಗಿ ಭಾರತ ಸಿದ್ಧತೆಗಳನ್ನು ಆರಂಭಿಸಲಿದೆ.
ಕಳೆದ ವಾರ ಭಾರತದ ವಿದೇಶಾಂಗ ಇಲಾಖೆ ನಿಮಿಷಾ ಪ್ರಿಯಾ ಬಿಡುಗಡೆಗೆ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿತ್ತು. ನಿಮಿಷಾ ಪ್ರಿಯಾ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಹ ಸಲ್ಲಿಕೆಯಾಗಿತ್ತು.
ಯೆಮೆನ್ ಸುಪ್ರೀಂಕೋರ್ಟ್‌ನಲ್ಲಿಯೂ ನಿಮಿಷಾ ಪ್ರಿಯಾ ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಜುಲೈ 16ರಂದು ಅವರ ಗಲ್ಲು ಶಿಕ್ಷೆ ಜಾರಿಗೆ ಸಿದ್ಧತೆಗಳು ನಡೆದಿತ್ತು. ಆಗ ಗ್ಲೋಬಲ್ ಪೀಸ್ ಇನ್‌ಷಿಯೇಟಿವ್ ಸಂಸ್ಥಾಪಕ ಮತ್ತು ಧಾರ್ಮಿಕ ಗುರು ಡಾ.ಕೆ.ಎ.ಪೌಲ್ ಯೆಮೆನ್ ಸರ್ಕಾರದ ಜೊತೆ ನಿರಂತರ ಮಾತುಕತೆ ಪ್ರಾರಂಭಿಸಿದ್ದರು.
ನಿಮಿಷಾ ಪ್ರಿಯಾ ಹತ್ಯೆ ಮಾಡಿದ ಯೆಮೆನ್ ಪ್ರಜೆ ತಲಾಲ್ ಅಬ್ದು ಮಹ್ದಿ ಕುಟುಂಬದ ಜೊತೆಗೂ ಮಾತುಕತೆ ನಡೆಸಲಾಗಿತ್ತು. ಬ್ಲಡ್ ಮನಿಯನ್ನು ಪರಿಹಾರ ರೂಪದಲ್ಲಿ ನೀಡಿ ನಿಮಿಷಾ ಕ್ಷಮಿಸುವಂತೆಯೂ ಮನವೊಲಿಕೆ ಮಾಡಲಾಗಿತ್ತು. ಆದರೆ ಇದಕ್ಕೆ ತಲಾಲ್ ಕುಟುಂಬದವರು ಒಪ್ಪಿರಲಿಲ್ಲ.
ಇಂಜೆಕ್ಷನ್ ನೀಡಿ ತಲಾಲ್ ಹತ್ಯೆ ಮಾಡಿದ್ದ ಆರೋಪ ನಿಮಿಷಾ ಪ್ರಿಯಾ ಮೇಲೆ ಕೇಳಿ ಬಂದಿತ್ತು. ಯೆಮೆನ್‌ನಲ್ಲಿ ತಲಾಲ್ ಜೊತೆ ಸೇರಿ ಕ್ಲಿನಿಕ್ ಆರಂಭಿಸಿದ್ದ ನಿಮಿಷಾ ಬಳಿಕ ವ್ಯವಹಾರದಲ್ಲಿನ ಭಿನ್ನಾಭಿಪ್ರಾಯದ ಕಾರಣ ತಲಾಲ್ ಜೊತೆ ಜಗಳವಾಡಿದ್ದರು. ಆಗ ತಲಾಲ್ ನಿಮಿಷಾ ಪಾಸ್‌ಪೋರ್ಟ್ ಇಟ್ಟುಕೊಂಡಿದ್ದ. ಪಾಸ್‌ಪೋರ್ಟ್ ವಾಪಸ್ ಪಡೆಯುವ ಹೋರಾಟದಲ್ಲಿ ತಲಾಲ್ ಹತ್ಯೆ ಮಾಡಲಾಗಿತ್ತು.
2017ರಲ್ಲಿ ನಿಮಿಷಾ ಬಂಧಿಸಲಾಗಿತ್ತು. ಸ್ಥಳೀಯ ಕೋರ್ಟ್ ನಿಮಿಷಾ ಮತ್ತು ಆಕೆಯ ಸ್ನೇಹಿತೆಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ನಿಮಿಷಾ ಗಲ್ಲು ಶಿಕ್ಷೆ ರದ್ದುಗೊಳಿಸುವಂತೆ ಯೆಮೆನ್ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಅರ್ಜಿ ಸಹ ವಜಾಗೊಂಡಿತ್ತು.