ಬೆಂಗಳೂರು: ಕಾಯಬೇಕಾದ ಸರ್ಕಾರ ಕಿವುಡಾಗಿದೆ, ಭ್ರಷ್ಟಾಚಾರ, ಕಮಿಷನ್ ವ್ಯವಹಾರದಲ್ಲಿ ರಾಜ್ಯದ ಜನತೆಯನ್ನೇ ಮರೆತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಮಗಳೂರು ನಗರದ ಸ್ಲಂ ನಿವಾಸಿಗಳಿಗೆ ಮಂಜೂರಾಗಿದ್ದ 780 ಮನೆಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಹೊಸ ಸೂರು ದೊರಕುವ ಆಶಯದಲ್ಲಿ ಹಳೆಯ ಮನೆಗಳನ್ನು ಕಳೆದುಕೊಂಡು, ಈಗ ಸ್ವಂತ ಮನೆಯೂ ಇಲ್ಲದೆ, ಇರುವ ಬಾಡಿಗೆ ಮನೆಯಲ್ಲಿ ಬಾಡಿಗೆ ಕಟ್ಟಲು ಸಾಧ್ಯವಾಗದೆ ಪರದಾಡುತ್ತಿರುವ ಜನರು ಈ ಭ್ರಷ್ಟಾಚಾರಿ ಸರ್ಕಾರದ ವಿರುದ್ಧ ಆಕ್ರೋಶ ಮಡುಗಟ್ಟಿದೆ.
ಕಳೆದ ಬಿಜೆಪಿ ಸರ್ಕಾರವಿದ್ದಾಗ ಚಿಕ್ಕಮಗಳೂರು ನಗರದ ಸ್ಲಂ ನಿವಾಸಿಗಳಿಗಾಗಿ 780 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಫಲಾನುಭವಿಗಳು ಸರ್ಕಾರಕ್ಕೆ ₹10,000 ಡಿಡಿ ಕಟ್ಟಿದರೆ, ಹಳೆಯ ಮನೆಯನ್ನು ಕೆಡವಿ ಸ್ಲಂ ಬೋರ್ಡ್ ಅನುದಾನದಲ್ಲಿ ಹೊಸ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮನೆ ನಿರ್ಮಾಣದ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಕಳೆದ ಎರಡು ವರ್ಷಗಳಿಂದ ಮನೆಗಳಿಲ್ಲದೆ ಬಾಡಿಗೆ ಕಟ್ಟಲು ಪರದಾಡುತ್ತಿರುವ ಜನರು ಅಧಿಕಾರಿಗಳನ್ನು ಕೇಳಿದರೆ, “ಸರ್ಕಾರದಿಂದ ಅನುದಾನ ಬಂದಿಲ್ಲ” ಎಂಬ ಸಿದ್ಧ ಉತ್ತರ ಸಿಗುತ್ತಿದೆ. ಇನ್ನು ಗುತ್ತಿಗೆದಾರರನ್ನು ವಿಚಾರಿಸಿದರೆ, “ವಿಪರೀತ ಕಮಿಷನ್ ಕೇಳುತ್ತಿದ್ದಾರೆ” ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದಾಗಿ ಜನರು ಮನೆಗಳಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಕೂಡಲೇ ಸರ್ಕಾರ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಂಡು, ಮನೆ ಕಳೆದುಕೊಂಡು ಅತಂತ್ರರಾಗಿರುವ ಜನರಿಗೆ ಹೊಸ ಮನೆಗಳನ್ನು ಕಟ್ಟಿಸಿಕೊಡುವ ವ್ಯವಸ್ಥೆ ಮಾಡಬೇಕು. ಸರ್ಕಾರ ತನ್ನ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತು, ಯೋಜನೆಗೆ ಕೂಡಲೇ ಅನುದಾನ ಬಿಡುಗಡೆ ಮಾಡಿ, ಗುತ್ತಿಗೆದಾರರ ಬೇಡಿಕೆಗಳನ್ನು ಪರಿಶೀಲಿಸಿ, ಪ್ರಾಮಾಣಿಕವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಜನರೇ ಬೀದಿಗಿಳಿದು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದಿದ್ದಾರೆ.