‘ಮಗು ಭಾಗ್ಯ’ ಪ್ರಕರಣ ಪಕ್ಷಕ್ಕೆ ಮುಜುಗರ: ಕಾರಣ ಕೇಳಿ ನೋಟಿಸ್

ಪುತ್ತೂರು: ಬಾಲ್ಯದ ಗೆಳತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣದ ಆರೋಪಿ ಶ್ರೀಕೃಷ್ಣ ರಾವ್ ಎಂಬಾತನ ತಂದೆ ಬಿಜೆಪಿ ಮಾಜಿ ನಗರ ಮಂಡಲ ಅಧ್ಯಕ್ಷ ಹಾಗೂ ಹಾಲಿ ಪುತ್ತೂರು ನಗರಸಭಾ ಸದಸ್ಯ ಜಗನ್ನಿವಾಸ್ ರಾವ್‌ಗೆ ಪುತ್ತೂರು ಬಿಜೆಪಿಯಿಂದ ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ಮಾಡಿರುವ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದೆ.
ಪುತ್ತೂರಿನ ಬಿಜೆಪಿ ನಗರ ಮಂಡಲ ಅಧ್ಯಕ್ಷರು ನೋಟೀಸ್ ಜಾರಿಗೊಳಿಸಿದ್ದು, ನೋಟಿಸ್‌ನಲ್ಲಿ ನಗರ ಮಂಡಲದ ಮಾಜಿ ಅಧ್ಯಕ್ಷರು, ಪ್ರಸ್ತುತ ಪುತ್ತೂರು ನಗರಸಭಾ ಸದಸ್ಯರಾಗಿರುವ ಜಗನ್ನಿವಾಸ್ ರಾವ್ ಅವರೇ ನಿಮ್ಮ ಮಗ ಪುತ್ತೂರಿನ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿ ಯುವತಿಗೆ ವಂಚಿಸಿದ ಬಗ್ಗೆ ಸುದ್ದಿ ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಆಗುತ್ತಿರುವ ಪ್ರಚಾರದಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಈ ಘಟನೆ ಬಗ್ಗೆ ಈಗಾಗಲೇ ಸಂತ್ರಸ್ತೆಯ ಕುಟುಂಬದವರು ನೀವು ನ್ಯಾಯ ಸಮ್ಮತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ತಾವು ಪಕ್ಷದಲ್ಲಿ ಜವಾಬ್ದಾರಿಯುತವಾಗಿ, ನ್ಯಾಯಯುತವಾಗಿ ನಡೆದುಕೊಳ್ಳಬೇಕಾಗಿದ್ದು, ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ. ಇಲ್ಲದಿದ್ದಲ್ಲಿ ಪಕ್ಷದ ಹಿತದೃಷ್ಟಿಯಿಂದ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ತಕ್ಷಣವೇ ಉತ್ತರಿಸಬೇಕಾಗಿ ತಿಳಿಸಲಾಗಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷರ ಸೂಚನೆಯಂತೆ ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಅವರು ಜಗನ್ನಿವಾಸ್‌ರಾವ್ ಅವರ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್‌ನಲ್ಲಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಗನ್ನಿವಾಸ್‌ರಾವ್ ಅವರ ಪುತ್ರ ಶ್ರೀಕೃಷ್ಣ ಜೆ.ರಾವ್ ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದು, ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಂತ್ರಸ್ತೆಯ ದೂರಿನಂತೆ ಶ್ರೀಕೃಷ್ಣ ರಾವ್ ವಿರುದ್ಧ ದ.ಕ. ಜಿಲ್ಲಾ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ 10 ದಿನಗಳ ಕಾಲ ತಲೆಮರಿಸಿಕೊಂಡಿದ್ದ, ಬಳಿಕ ಆರೋಪಿಯನ್ನು ಪೊಲೀಸರು ಮೈಸೂರಿನ ಟಿ.ನರಸೀಪುರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯು ಅಡಗಿಕೊಳ್ಳಲು ಸಹಾಯ ಮಾಡಿದ ಆರೋಪದಲ್ಲಿ ಆತನ ತಂದೆ ಜಗನ್ನಿವಾಸ್‌ರಾವ್‌ನನ್ನು ಬಂಧನ ಮಾಡಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಪಕ್ಷವು ಜಗನ್ನಿವಾಸ್‌ರಾವ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.