ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕ ಜೆಡಿಎಸ್ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿತು. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿತು. ಲೋಕಸಭೆ ಚುನಾವಣೆ 2024, ವಿಧಾನ ಪರಿಷತ್ ಚುನಾವಣೆಗಳನ್ನು ಸೀಟು ಹಂಚಿಕೆ ಮಾಡಿಕೊಂಡು ಎದುರಿಸಲಾಯಿತು. ಆದರೆ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಮರಿದು ಬಿದ್ದಿದೆಯೇ?.
ಕರ್ನಾಟಕದಲ್ಲಿ 2028ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಚುನಾವಣೆಗೆ ಮೂರು ವರ್ಷ ಮೊದಲೇ ಬೆಂಗಳೂರು ನಗರದ ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಜೆಡಿಎಸ್ ಒಪ್ಪಿಗೆ ಪಡೆಯಲಾಗಿಲ್ಲ ಎಂಬದು ಈಗ ಚರ್ಚೆಯ ವಿಚಾರ.
ಯಾರು ಅಭ್ಯರ್ಥಿ?; ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ 2028ರ ವಿಧಾನಸಭೆ ಚುನಾವಣೆಗೆ ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆರ್. ರುದ್ರೇಶ್ ಎಂದು ಘೋಷಣೆ ಮಾಡಿದ್ದಾರೆ. ಇದು ಕ್ಷೇತ್ರದ ಜೆಡಿಎಸ್ ನಾಯಕ, ಎಂಎಲ್‌ಸಿ ಟಿ.ಎನ್.ಜವರಾಯಿ ಗೌಡ ಅಸಮಾಧಾನಕ್ಕೆ ಕಾರಣವಾಗಿದೆ.
ಎಸ್.ಟಿ.ಸೋಮಶೇಖರ್ ಯಶವಂತಪುರ ಕ್ಷೇತ್ರದ ಹಾಲಿ ಶಾಸಕರು. ಬಿಜೆಪಿಯ ಎಸ್.ಟಿ.ಸೋಮಶೇಖರ್ ಪಕ್ಷದಿಂದ ದೂರವಾಗಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದ್ದರಿಂದ ಬಿಜೆಪಿಯಿಂದ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಅದಕ್ಕಾಗಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹುಡುಕುವುದು ಅನಿವಾರ್ಯವಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ 169,149 ಮತಗಳನ್ನು ಪಡೆದು ಯಶವಂತಪುರದಲ್ಲಿ ಜಯಗಳಿಸಿದ್ದರು. ಟಿ.ಎನ್.ಜವರಾಯಿ ಗೌಡ ಜೆಡಿಎಸ್ ಅಭ್ಯರ್ಥಿಯಾಗಿದ್ದು, 154,031 ಮತ ಪಡೆದು ಸೋತಿದ್ದರು. ಕ್ಷೇತ್ರದಲ್ಲಿ ಹಲವು ಬಾರಿ ಸೋಲು ಕಂಡಿರುವ ಟಿ.ಎನ್.ಜವರಾಯಿ ಗೌಡರನ್ನು ಪಕ್ಷ ಎಂಎಲ್‌ಸಿ ಮಾಡಿದೆ.
ಆದರೆ ಈಗ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತರಾಗಿರುವ ಆರ್. ರುದ್ರೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಜೆಡಿಎಸ್ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ.
ಟಿ.ಎನ್.ಜವರಾಯಿ ಗೌಡ ಮಾತನಾಡಿ, “ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುಂದಿನ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ರುದ್ರೇಶ್ ಎಂದು ಯಡಿಯಯೂರಪ್ಪ ಘೋಷಣೆ ಮಾಡಿದ್ದಾರೆ. ಅನುಭವಿ ರಾಜಕಾರಣಿಯೊಬ್ಬರು ಹೀಗೆ ಏಕಾಏಕಿ ಅಭ್ಯರ್ಥಿ ಹೆಸರು ಘೋಷಿಸಿರುವುದು, ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ” ಎಂದು ಹೇಳಿದ್ದಾರೆ.
“ಯಡಿಯೂರಪ್ಪ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿಯುತ್ತಿಲ್ಲ. ಈ ಹೇಳಿಕೆ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಅರ್ಥವನ್ನು ಮೂಡಿಸುವಂತಿದೆ. ಇದರಿಂದಾಗಿ ಕಾರ್ಯಕರ್ತರಿಗೆ ನೋವಾಗಿದೆ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷದ ಮುಖಂಡರ ಸಭೆಯಲ್ಲಿ ತೀರ್ಮಾನ ಮಾಡುವ ಒಮ್ಮತದ ಅಭ್ಯರ್ಥಿಗೆ ನಮ್ಮ ಬೆಂಬಲ” ಎಂದು ಟಿ.ಎನ್.ಜವರಾಯಿ ಗೌಡ ಸ್ಪಷ್ಟಪಡಿಸಿದರು.
ಆರ್. ರುದ್ರೇಶ್ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರು. ಸೋಮವಾರ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ರುದ್ರೇಶ್ ನಿವಾಸಕ್ಕೆ ಭೇಟಿ ನೀಡಿದ್ದರು. ಆಗ ಮುಂದಿನ ವಿಧಾನಸಭೆ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಎಂ. ರುದ್ರೇಶ್ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇರುತ್ತದೆ ಎಂದು ಹೇಳಿದ್ದರು.