“ಸಿಎಂ ಸ್ಥಾನದ ಅಧಿಕಾರ ಹಸ್ತಾಂತರ ಸಂಬಂಧ ಯಾವುದೇ ಒಪ್ಪಂದ ಆಗಿಲ್ಲ. 5 ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಡಿಸಿಎಂ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿಯೇ ಇದನ್ನು ಸ್ಪಷ್ಟಪಡಿಸಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಹಾಗೂ ಶಿವಕುಮಾರ್ ಬದ್ಧವಾಗಿರುತ್ತೇವೆ” ಎನ್ನುವುದು ಸೇರಿದಂತೆ ರಾಜ್ಯ ರಾಜಕಾರಣದ ಬಗ್ಗೆ ಹತ್ತು ಹಲವು ವಿಷಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ರಾಷ್ಟ್ರೀಯ ಸುದ್ದಿವಾಹಿನಿ ಸೇರಿದಂತೆ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದ ವಿವರ ಇಲ್ಲಿದೆ.
ಈ ಮೂಲಕ ಕರ್ನಾಟಕದಲ್ಲಿನ ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಬಿದ್ದಂತೆ ಆಗಿದೆ. ಹಾಗಾದರೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಅವರನ್ನು ಬೆಂಬಲಿಸುವ ಶಾಸಕರ ಮುಂದಿನ ನಡೆ ಏನು? ಎಂಬುದು ಚರ್ಚೆಗೆ ಕಾರಣವಾಗಿದೆ.
ಪ್ರಶ್ನೆ: ನೀವು ಪೂರ್ಣಾವಧಿ ಮುಖ್ಯಮಂತ್ರಿ ಆಗಿರ್ತೀರಾ?
ಸಿಎಂ: ಈ ಬಗ್ಗೆ ಈಗಾಗಲೇ ಹೇಳಿದ್ದೇವೆ. ನಾನು 5 ವರ್ಷಕ್ಕೆ ಮುಖ್ಯಮಂತ್ರಿ ಆಗಿದ್ದೇನೆ. ಅವಧಿ ಕಂಪ್ಲೀಟ್ ಮಾಡ್ತೇನೆ. ಇತ್ತೀಚೆಗಷ್ಟೇ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿಯೇ `ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯಲಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದೇನೆ. ಡಿಸಿಎಂ ಶಿವಕುಮಾರ್ ಕೂಡಾ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಹೈಕಮಾಂಡ್ನೋರು ಏನೇ ಡಿಷಿಯನ್ ತಗೊಂಡ್ರೂ ಇಬ್ಬರೂ ಅಬೈಡ್ ಆಗಿರ್ತೀವಿ.
ಪ್ರಶ್ನೆ: ಅಧಿಕಾರ ಹಸ್ತಾಂತರ ಅನ್ನೋದರ ಬಗ್ಗೆ ಕರ್ನಾಟದಲ್ಲಿ ವ್ಯಾಪಕ ಚರ್ಚೆ ಆಗ್ತಿದೆ?
ಸುರ್ಜೇವಾಲಾ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅಭಿಪ್ರಾಯ ಸಂಗ್ರಹ ನಾಯಕತ್ವಕ್ಕೆ ಸಂಬಂಧಿಸಿದ್ದಲ್ಲ. ಲೀಡರ್ಶಿಪ್ ವಿಷಯದ ಕುರಿತು ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ. ಮತ್ತೆ ಸ್ಪೆಕ್ಯುಲೇಷನ್ ಯಾಕೆ? ಅವರು ಕರ್ನಾಟಕ ಇನ್ಜಾರ್ಜ್. ಇದು ಪಾರ್ಟಿನಲ್ಲೂ ಚರ್ಚೆ ಆಗ್ತಿಲ್ಲ.
ಪ್ರಶ್ನೆ: ಹಲವು ಶಾಸಕರಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ಅಭಿಪ್ರಾಯ ಇದ್ದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ?
ಹೌದು. ಆದರೆ ಹಾಗೆ ಹೇಳಿರುವುದು ಕೆಲವೇ ಶಾಸಕರು. ಅಂತಹವರ ಸಂಖ್ಯೆ ದೊಡ್ಡದಿಲ್ಲ.
ಪ್ರಶ್ನೆ: ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತಾ?
ಈ ವಿಷಯದ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹಮತಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ವರಿಷ್ಠರ ತೀರ್ಮಾನಕ್ಕೆ ತಲೆಬಾಗುವುದಾಗಿ ನಾವಿಬ್ಬರೂ ಹಲವು ಬಾರಿ ತಿಳಿಸಿದ್ದೇವೆ. ಸರ್ಕಾರಕ್ಕೆ ಎರಡೂವರೆ ವರ್ಷವಾಗಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ವಿಷಯವೇಳುವುದು ಸಹಜ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ.
ಪ್ರಶ್ನೆ: ಪಕ್ಷದ ಶಾಸಕರಲ್ಲೇ ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆಯಲ್ವಾ?
ಅಭಿಮಾನ ಹಾಗೂ ಪ್ರೀತಿಯಿಂದ ಕೆಲವರು ಡಿ.ಕೆ.ಶಿವಕುಮಾರ್ ಚೀಫ್ ಮಿನಿಸ್ಟರ್ ಆಗ್ಬೇಕು ಅಂತ ಕೆಲವರು ಹೇಳ್ತಾರೆ ಸಿದ್ದರಾಮಯ್ಯ ಅವರೇ ಮುಂದುವರೀಬೇಕು ಅಂತಾನೂ ಸಾಕಷ್ಟು ಮಂದಿ ಹೇಳ್ತಾರೆ. ಅದು ಪಾರ್ಟಿ ಡಿಸೀಷನ್ ಅಲ್ಲ. ಅವರವರ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಹೈಕಮಾಂಡ್ ಈ ವಿಷಯದಲ್ಲಿ ಏನು ನಿರ್ಧಾರ ತಗೋತಾರೋ ಅದಕ್ಕೆ ನಾವಿಬ್ಬರೂ ಬದ್ಧ. ಹಾಗಾಗಿ ಅಧಿಕಾರ ಹಸ್ತಾಂತರದ ಊಹೆಗೆ ಯಾವುದೇ ಅರ್ಥವಿಲ್ಲ.
ಪ್ರಶ್ನೆ: 2028ಕ್ಕೆ ನಿಮ್ಮ ನೇತೃತ್ವದಲ್ಲೇ ಚುನಾವಣೆ ಆಗುತ್ತಾ?
2023ರ ಚುನಾವಣೆಯಲ್ಲಿ ಏನ್ ನಡೀತೋ 2028ಕ್ಕೂ ಅದೇ ರೀತಿ ಆಗ್ತದೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಹೈಕಮಾಂಡ್ ಏನ್ ತೀರ್ಮಾನ ಮಾಡ್ತಾರೋ ಅದಕ್ಕೆ ನಾನೂ ಬದ್ಧ ಡಿ.ಕೆ. ಶಿವಕುಮಾರ್ ಅವರೂ ಬದ್ಧವಾಗಿರ್ತಾರೆ.
ಪ್ರಶ್ನೆ: ನಾಯಕತ್ವ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆ ಆಗುತ್ತಿರುವುದೇಕೆ?
ನಾಯಕತ್ವ ನಿರ್ಧಾರ ಮಾಡುವುದು ಶಾಸಕರು ಮತ್ತು ಪಕ್ಷದ ಹೈಕಮಾಂಡ್.
ಪ್ರಶ್ನೆ: ಕರ್ನಾಟಕದಲ್ಲಿ ಇಡಿ ದಾಳಿ ಬಗ್ಗೆ ಏನೆನ್ನುವಿರಿ?
ಟಾರ್ಗೆಟ್ ಕಾಂಗ್ರೆಸ್ ಎನ್ನುವಂತೆ ಇಡಿ, ಐಟಿ ದಾಳಿ ಆಗ್ತಿದೆ. ಕಾಂಗ್ರೆಸ್ ಸಚಿವರು, ಶಾಸಕರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ. ನಮ್ಮ ಗೃಹಸಚಿವ ಪರಮೇಶ್ವರ್ ಅವರ ವಿದ್ಯಾಸಂಸ್ಥೆ ಮೇಲೆ ದಾಳಿ ನಡೆದಿದ್ದೇ ಇದಕ್ಕೆ ನಿದರ್ಶನ.
ಪ್ರಶ್ನೆ: ಬಿಜೆಪಿ 40% ಸರ್ಕಾರ ಎಂದು ಆರೋಪಿಸಿದ್ದಿರಿ. ಈಗ ನಿಮ್ಮದು 60% ಎನ್ನಲಾಗುತ್ತಿದೆ?
ನೋ. ನಾಟ್ ಕರೆಕ್ಟ್. ಅಷ್ಟಕ್ಕೂ 40% ಆರೋಪ ಮಾಡಿದ್ದು ನಾವಲ್ಲ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು. 60% ಕಮಿಷನ್ ಅನ್ನುವುದು ಬಿಜೆಪಿಯವರ ರಾಜಕೀಯ ಪ್ರೇರಿತ ಆರೋಪ.
ಪ್ರಶ್ನೆ: ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಹಳಿ ತಪ್ಪುತ್ತಿದೆ ಎನ್ನುವ ಆರೋಪ ಇದೆಯಲ್ಲ?
ಬಜೆಟ್ನಲ್ಲೇ ಅಗತ್ಯ ಅನುದಾನ ಕಾಯ್ದಿರಿಸಿದ್ದೇವೆ. ಅಭಿವೃದ್ಧಿ ಮೇಲೆ ಯಾವುದೇ ಪರಿಣಾಮ ಆಗುತ್ತಿಲ್ಲ. ವೇತನ ಸಂಬಂಧ ಒಂದೆರಡು ಸಮಸ್ಯೆ ಇದ್ದಿರಬಹುದು. ಒಟ್ಟಾರೆ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಗ್ಯಾರಂಟಿಗಳಿಂದ ಯಾರೂ ಸೋಮಾರಿಗಳಾಗುತ್ತಿಲ್ಲ. ಮಹಿಳೆಯರನ್ನು ಪುಕ್ಕಟ್ಟೆಯಾಗಿ ಬಸ್ನಲ್ಲಿ ಕರ್ಕೊಂಡು ಹೋದ್ರೆ ಸೋಮಾರಿಗಳಾಗಿಬಿಡ್ತಾರಾ? ರಾಜ್ಯದ 7 ಕೋಟಿ ಜನರಲ್ಲಿ ಮೂರೂವರೆ ಕೋಟಿ ಜನರು ಫ್ರೀಯಾಗಿ ಓಡಾಡಿದ್ರೆ ಆ ದುಡ್ಡು ಉಳಿತಾಯಾನೋ ಸೋಮಾರಿಗಳಾಗುತ್ತಾರೋ?
ಪ್ರಶ್ನೆ: ನಾವು ಅಧಿಕಾರಕ್ಕೆ ಬಂದ್ರೆ ಮಾತ್ರ ಮೇಕೆದಾಟು ಪ್ರಾಜೆಕ್ಟ್ ಆಗುತ್ತೆ ಎಂದು ಕುಮಾರಸ್ವಾಮಿ ಹೇಳ್ತಿದಾರೆ?
ನಾವು ಬಂದ ತಕ್ಷಣ ಮಾಡಿಸ್ತೇವೆ. ಅಂದಿದ್ರಲ್ವಾ ಲೋಕಸಭೆ ಎಲೆಕ್ಷನ್ ಟೈಮಲ್ಲಿ ಏನ್ ಹೇಳಿದ್ರೂ ಕೇಳಿ. ಕರ್ನಾಟಕದಲ್ಲಿ ಅವ್ರು ಅಧಿಕಾರಕ್ಕೆ ಬರೋದಿಲ್ಲ ಬಿಡಿ. ನಾನು ಜನತಾದಳದ ಅಧ್ಯಕ್ಷನಾಗಿದ್ದಾಗ 59 ಹೈಯೆಸ್ಟ್ ತಗೊಂಡಿದ್ದು 2004ರಲ್ಲಿ ಅದನ್ನು ಬಿಟ್ಮೇಲೆ ಚುನಾವಣೆಯಿಂದ ಚುನಾವಣೆಗೆ ಜಾಸ್ತಿ ಆಗಿದ್ಯೋ ಕಡಿಮೆ ಆಗಿದ್ಯೋ… ನಾನಿದ್ದಾಗ 59 ಇತ್ತು ಈಗೆಷ್ಟಾಗಿದಾರೆ 19.. ಮತ್ತೆ ಅಧಿಕಾರ ಅಧಿಕಾರ ಹಗಲುಗನಸು ಅಲ್ವಾ?
ಪ್ರಶ್ನೆ: ಡಿ.ಕೆ. ಶಿವಕುಮಾರ್ ಸಿಎಂ ಆಗ್ಬೇಕು ಅನ್ನೋ ಆಸೆ ಇಟ್ಕೊಂಡಿದಾರಲ್ವಾ?
ಅವ್ರು ಸಿಎಂ ಆಗ್ಬೇಕು ಅನ್ನೋ ಆಸೆ ಇಟ್ಕಂಡಿದ್ರೆ ನಥಿಂಗ್ ರಾಂಗ್. ಮತ್ತೊಬ್ಬರು ಶಾಸಕರಿಗೂ ಅದೇ ಆಸೆ ಇದ್ದರೂ ಅದು ತಪ್ಪಲ್ಲ. ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಕರ್ನಾಟಕದ ಮುಖ್ಯಮಂತ್ರಿ ನಾನೇ.
ಸೆಪ್ಟೆಂಬರ್ ಕ್ರಾಂತಿ ಅಂತಾರಲ್ಲ?
ಕ್ರಾಂತಿ ಅಂದ್ರೆನು? ಯಾಕೆ ಏನ್ ಬದಲಾವಣೆ ಅಂತ ಹೇಳಿದಾರೆ. ನೀವೇ ಊಹೆ ಮಾಡ್ಕೊಂಡ್ರೆ ಏನ್ ಹೇಳೋದು. ಅದಕ್ಕೆ ಅರ್ಥವಿಲ್ಲ. ನಾಯಕತ್ವದ ಬದಲಾವಣೆ ಬಗ್ಗೆ ಯಾರೋ ಒಬ್ರು ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ರೆ ಅದು ಪಾರ್ಟಿ ತೀರ್ಮಾನವಲ್ಲ. ಇದನ್ನು ಖರ್ಗೆ ಅವರು ಹೇಳ್ಬೇಕು. ರಾಹುಲ್ಗಾಂಧಿ ಹೇಳ್ಬೇಕು. ಕೆ.ಸಿ. ವೇಣುಗೋಪಾಲ್ ಹೇಳ್ಬೇಕು.