ಉತ್ತರ ಕನ್ನಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜೋಗ ಮತ್ತು ಸಿಗಂದೂರು ಪ್ರವಾಸಿಗರಿಗೆ ಸಿಹಿಸುದ್ದಿಯನ್ನು ನೀಡಿದೆ. ವಾರಾಂತ್ಯದಲ್ಲಿ ಸರ್ಕಾರಿ ರಜೆ ದಿನಗಳಲ್ಲಿ ಪ್ರವಾಸ ಹೋಗುವ ಜನರಿಗಾಗಿ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಈಗಾಗಲೇ ಸಿಗಂದೂರು ಕೇಬಲ್ ಬ್ರಿಡ್ಜ್ ಲೋಕಾರ್ಪಣೆ ಬಳಿಕ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಿಂದ ಜೋಗ ಮತ್ತು ಸಿಗಂದೂರು ಟೂರ್ ಪ್ಯಾಕೇಜ್ ಬಸ್ ಸಂಚಾರವನ್ನು ನಡೆಸಲಿದೆ. ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರದಿಂದ ಸಿಗಂದೂರು ಮತ್ತು ಜೋಗ ಜಲಪಾತಕ್ಕೆ ವಿಶೇಷ ಸಾರಿಗೆಯ ಟೂರ್ ಪ್ಯಾಕೇಜ್ ಆರಂಭಿಸಲಾಗಿದೆ.
ಈ ವಿಶೇಷ ಟೂರ್ ಪ್ಯಾಕೇಜ್ ಜುಲೈ 27ರಿಂದ ಪ್ರತಿ ಭಾನುವಾರ ಸಂಚಾರವನ್ನು ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ. ಇದು ವಿಶೇಷ ಟೂರ್ ಪ್ಯಾಕೇಜ್ ಆದ ಕಾರಣ ‘ಶಕ್ತಿ’ ಯೋಜನೆಯ ಉಚಿತ ಬಸ್ ಪ್ರಯಾಣ ಅನ್ವಯವಾಗುವುದಿಲ್ಲ. 6 ವರ್ಷ ಮೇಲ್ಪಟ್ಟವರಿಗೆ ಪ್ರಯಾಣ ದರ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಟೂರ್ ಪ್ಯಾಕೇಜ್ ದರ, ಮಾರ್ಗ: ಯಲ್ಲಾಪುರ, ಶಿರಸಿ, ಸಿದ್ದಾಪುರದಿಂದ ಸಿಗಂದೂರು & ಜೋಗ ಪ್ರವಾಸಿ ಪ್ಯಾಕೇಜ್ ದರ 400 ರೂ.ಗಳು (ಯಲ್ಲಾಪುರಿಂದ ಹೋಗಿ ಬರುವುದು ಸೇರಿ), ಶಿರಸಿ-ಸಿದ್ದಾಪುರದಿಂದ 350 ರೂ.ಗಳು (ಹೋಗಿ ಬರುವುದು ಸೇರಿ).
ಈ ಬಸ್ ಯಲ್ಲಾಪುರದಿಂದ 7 ಗಂಟೆಗೆ, ಶಿರಸಿಯಿಂದ 8.15, ಸಿದ್ದಾಪುರ 9 ಗಂಟೆಗೆ ಹೊರಡಲಿದೆ. ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯವನ್ನು 13:00 ಬಿಡಲಿದ್ದು, ಜೋಗ ಜಲಪಾತಕ್ಕೆ 14:30ಕ್ಕೆ ತಲುಪುತ್ತದೆ.
ಪ್ರವಾಸಿ ಪ್ಯಾಕೇಜ್ ಬಸ್ ಜೋಗ ಜಲಪಾತದಿಂದ 16:30ಕ್ಕೆ ಹೊರಡಲಿದ್ದು, ಸಿದ್ದಾಪುರ 17:00, ಶಿರಸಿ 17:45, ಯಲ್ಲಾಪುರ 19:00 ತಲುಪಲಿದೆ. ಜೋಗ, ಸಿಗಂದೂರು ಪ್ರವಾಸ ಕೈಗೊಳ್ಳುವ ಜನರು ಈ ಬಸ್ ಸೇವೆ ಉಪಯೋಗ ಪಡೆದುಕೊಳ್ಳಬಹುದು.
ಗದಗದಿಂದಲೂ ಬಸ್ ಸೌಲಭ್ಯ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ-ಜೋಗ ಜಲಪಾತ ವಿಶೇಷ ಸಾರಿಗೆ ಸೌಲಭ್ಯವನ್ನು ಘೋಷಣೆ ಮಾಡಿದೆ. ಈ ಬಸ್ ಸೇವೆ ದಿನಾಂಕ 27ರಿಂದ ಪ್ರತಿ ಭಾನುವಾರ ಸಂಚಾರವನ್ನು ನಡೆಸಲಿದೆ.
ಗದಗ-ಜೋಗ ಫಾಲ್ಸ್ ಬಸ್ ಪ್ರಯಾಣ ದರ 580 ರೂ.ಗಳು (ಹೋಗಿ ಬರುವುದು ಸೇರಿ). ಈ ಬಸ್ ಗದಗವನ್ನು ಬಿಡುವ ವೇಳೆ 7 ಗಂಟೆ, ಜೋಗ ಫಾಲ್ಸ್ ತಲುಪುವ ವೇಳೆ 11 ಗಂಟೆ. ಜೋಗ ಫಾಲ್ಸ್‌ನಿಂದ ಹೊರಡುವ ಸಮಯ 15:00 ಮತ್ತು ಗದಗ ತಲುಪುವ ವೇಳೆ 19:00.
ಹಾವೇರಿ-ಸಿಗಂದೂರ ಪ್ರವಾಸಿ ಪ್ಯಾಕೇಜ್ ಸಹ ಪ್ರಾರಂಭಿಸಲಾಗಿದೆ. ಈ ಪ್ಯಾಕೇಜ್ ಪ್ರಯಾಣ ದರ 455 ರೂ.ಗಳು. ಈ ಬಸ್ ಹಾವೇರಿಯಿಂದ 7.30ಕ್ಕೆ ಹೊರಟು, ಸಿಗಂದೂರು ದೇವಾಲಯಕ್ಕೆ 11.30ಕ್ಕೆ ತಲುಪಲಿದೆ. ಸಿಗಂದೂರುನಿಂದ ಬಸ್ 15:30ಕ್ಕೆ ಹೊರಟು, ಹಾವೇರಿಯನ್ನು 19:30ಕ್ಕೆ ವಾಪಸ್ ಆಗಲಿದೆ.
ರಾಣೆಬೆನ್ನೂರು-ಸಿಗಂದೂರು ವಿಶೇಷ ಬಸ್ ಸೌಲಭ್ಯವನ್ನು ಸಹ ಆರಂಭಿಸಲಾಗಿದೆ. ಈ ಬಸ್ ಪ್ರಯಾಣ ದರ 430 ರೂ.ಗಳು (ಹೋಗಿ ಬರುವುದು ಸೇರಿ). ರಾಣೆಬೆನ್ನೂರಿನಿಂದ ಬಸ್ 7.30ಕ್ಕೆ ಹೊರಡಲಿದ್ದು, ಸಿಗಂದೂರಿಗೆ 11 ಗಂಟೆಗೆ ಬಸ್ ತಲುಪಲಿದೆ. ಸಿಗಂದೂರಿನಿಂದ ಬಸ್ 15 ಗಂಟೆಗೆ ಹೊರಟು, ರಾಣೆಬೆನ್ನೂರಿಗೆ 18:30ಕ್ಕೆ ವಾಪಸ್ ಆಗಲಿದೆ.
ಈ ಎಲ್ಲಾ ಟೂರ್ ಪ್ಯಾಕೇಜ್‌ಗಾಗಿ ಆನ್‌ಲೈನ್ ಟಿಕೆಟ್ ಬುಕ್ ಮಾಡಲು ವಿಳಾಸ www.ksrtc.in.