ನವದೆಹಲಿ: ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) ವಾರ್ಷಿಕ ಉನ್ನತ ಮಟ್ಟದ ಅಧಿವೇಶದಲ್ಲಿ ಪಾಲ್ಗೊಳ್ಳಲು ಮೋದಿ ಈ ಭೇಟಿ ಕೈಗೊಂಡಿದ್ದಾರೆ.
ಅಮೆರಿಕ-ಭಾರತ ನಡುವಿನ ಸುಂಕ ಸಮರದ ಬಳಕ ಮೊದಲ ಬಾರಿಗೆ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದ್ದರಿಂದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಮೂರು ದಿನಗಳ ಕಾಲ ಮೋದಿ ಅಮೆರಿಕದಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.
ಅಮೆರಿಕದಲ್ಲಿ ಸೆಪ್ಟೆಂಬರ್ 9ರಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 23 ರಿಂದ 29ರ ತನಕ ಉನ್ನತ ಮಟ್ಟದ ಚರ್ಚೆಗಳು ನಡೆಯಲಿವೆ. ವಿಶ್ವದ ವಿವಿಧ ದೇಶಗಳ ಪ್ರಮುಖ ನಾಯಕರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಭೇಟಿಯಾಗುವ ಸಾಧ್ಯತೆ ಇದೆ. ಮೋದಿ ಭೇಟಿಯ ಕುರಿತು ಪ್ರಧಾನ ಮಂತ್ರಿಗಳ ಕಾರ್ಯಾಲಯ ಇನ್ನೂ ಅಧಿಕೃತ ದಿನಾಂಕ ಪ್ರಕಟಿಸಿಲ್ಲ.
ಸದ್ಯದ ಮಾಹಿತಿ ಪ್ರಕಾರ ಸೆಪ್ಟೆಂಬರ್ 23ರಂದು ಡೊನಾಲ್ಡ್ ಟ್ರಂಪ್, ಸೆಪ್ಟೆಂಬರ್ 26ರಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬ್ರೆಜಿಲ್, ಇಸ್ರೇಲ್, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರು ಸಹ ಅದೇ ದಿನ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈಗಾಗಲೇ ವಿಶ್ವಸಂಸ್ಥೆ ಭಾಷಣ ಮಾಡುವ ನಾಯಕರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.
ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅಧಿಕಾರವಹಿಸಿಕೊಂಡ ಬಳಿಕ ಈ ವರ್ಷದ ಫೆಬ್ರವರಿಯಲ್ಲಿ ಮೋದಿ ಟ್ರಂಪ್ ಭೇಟಿಯಾಗಿದ್ದರು. ದ್ವಿಪಕ್ಷೀಯ ಮಾತುಕತೆಯ ವೇಳೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು.
ರಷ್ಯಾ ಮತ್ತು ಭಾರತದ ನಡುವಿನ ತೈಲ ವ್ಯಾಪಾರದ ವಿಚಾರದಲ್ಲಿ ಅಮೆರಿಕ ಭಾರತದ ವಿರುದ್ಧ ಅಸಮಾಧಾನಗೊಂಡಿದೆ. ಆದ್ದರಿಂದ ಟ್ರಂಪ್ ಭಾರತದ ಮೇಲೆ ಶೇ 50ರಷ್ಟು ತೆರಿಗೆ ಭಾರ ಹಾಕಿದ್ದಾರೆ.
ಈ ತೆರಿಗೆ ಕದನದ ಬಳಿಕ ಮೊದಲ ಬಾರಿಗೆ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ರಷ್ಯಾದಿಂದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧ ಬೆಂಬಲಿಸುತ್ತಿದೆ ಎಂಬುದು ಅಮೆರಿಕ ಆರೋಪ.
ಭಾರತ ಅಮೆರಿಕ, ರಷ್ಯಾ ಮತ್ತು ಉಕ್ರೇನ್ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೇ ಮೂರು ದೇಶಗಳ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಅಮೆರಿಕ ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದೆ. ಆದರೆ ಭಾರತ ರಷ್ಯಾಕ್ಕೆ ಬೆಂಬಲ ನೀಡುತ್ತಿದೆ ಎಂಬುದು ಅಮೆರಿಕ ಅಧ್ಯಕ್ಷರ ದೂರು.
ಅಮೆರಿಕದ ಸುಂಕ ಏರಿಕೆ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಕಳೆದ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ದೂರವಾಣಿ ಕರೆಯಲ್ಲಿ ಮಾತುಕತೆ ನಡೆಸಿದ್ದರು. ಪುಟಿನ್ ಜೊತೆ ಮಾತುಕತೆ ನಡೆಸಿದ ಕುರಿತು ಮೋದಿ ಸಾಮಾಜಿನ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.