ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನ ಉಮಿಕಲ್ಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಕುರಿತು ಮತ್ತೆ ಚರ್ಚೆಗಳು ಪ್ರಾರಂಭವಾಗಿದೆ. 2023ರ ವಿಧಾನಸಭೆ ಚುನಾವಣಾ ಸಮಯದಲ್ಲಿ ಆರಂಭಗೊಂಡ ಪಾರ್ಕ್‌ನಲ್ಲಿನ ಪರಶುರಾಮನ ವಿಗ್ರಹದ ವಿಚಾರ ಕಾಂಗ್ರೆಸ್, ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿತ್ತು.
ಮಂಗಳವಾರ ಬಿಜೆಪಿ ನಾಯಕ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, “ಅಭಿವೃದ್ಧಿಯನ್ನು ಸಹಿಸಲಾಗದ ಕಾಂಗ್ರೆಸ್, ನನ್ನ ಕನಸಿನ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ತಡೆಹಿಡಿಯುವ ಮೂಲಕ ಕಾರ್ಕಳ ಪ್ರವಾಸೋದ್ಯಮವನ್ನು ಹಾಳುಗೆಡವಿದೆ” ಎಂದು ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಇಲ್ಲದ ಅಪಪ್ರಚಾರದಲ್ಲಿ ತೊಡಗಿದ್ದು, ಅದನ್ನು ನಂಬಿದ ರಾಜ್ಯ ಕಾಂಗ್ರೆಸ್ ತನಿಖೆ ನೆಪದಲ್ಲಿ ಕಳೆದ ಎರಡೂವರೆ ವರ್ಷ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಹಾಳು ಮಾಡಿತು” ಎಂದರು.
“ಪರಶುರಾಮ ಮೂರ್ತಿ ಪ್ಲಾಸ್ಟಿಕ್‌ನದ್ದು ಎಂದು ಮೊದಲು ಹೇಳಿ ಬಳಿಕ ಫೈಬರ್‌ನದ್ದು ಎಂದೆಲ್ಲ ಹೇಳಿತು. ಆಮೇಲೆ ಜಿಎಸ್‌ಟಿ ಬಗ್ಗೆ ತಗಾದೆ ತೆಗೆದು ಶಿಲ್ಪಿಯ ಗೋಡೌನ್‌ವರೆಗೂ ಹೋಯಿತು. ಇದೀಗ ಮೂರ್ತಿ ಹಿತ್ತಾಳೆಯದು ಎಂದು ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುವ ಮೂಲಕ ಪರಶುರಾಮ ಮೂರ್ತಿ ಫೈಬರ್‌ನದ್ದಲ್ಲ ಎಂಬುದು ಸಾಬೀತಾಗಿದೆ. ಆ ಮೂಲಕ ಕಾಂಗ್ರೆಸ್ ಆರೋಪಕ್ಕೆ ಸೋಲಾಗಿದೆ” ಎಂದು ತಿಳಿಸಿದರು.
“ಮುಂದಿನ ಚುನಾವಣೆವರೆಗೆ ಪರಶುರಾಮ ಥೀಮ್ ಪಾರ್ಕ್ ವಿಚಾರವನ್ನು ಜೀವಂತವಾಗಿಡಬೇಕೆಂಬ ಹುನ್ನಾರದಿಂದ ಕಾಂಗ್ರೆಸ್ ಇನ್ನಾದರೂ ಹೊರಬಂದು ಮೀಸಲಿಟ್ಟಿದ್ದ ಅನುದಾನ ಬಿಡುಗಡೆ ಮಾಡಿ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿ ಕಾರ್ಕಳದ ಪ್ರವಾಸೋದ್ಯಮದ ಜೊತೆಗೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕರಿಸಬೇಕು.” ಎಂದು ಆಗ್ರಹಿಸಿದರು.
“ಯೋಜನೆ ಸಂಬಂಧದ ತನಿಖೆ ಬಾಕಿ ಇದ್ದರೆ ಅದನ್ನೂ ಪೂರೈಸಲಿ, ಅಗತ್ಯ ಸಹಕಾರ ನೀಡುತ್ತೇವೆ. ಮೂರ್ತಿಯ ಲೋಹ ಪತ್ತೆಗೆ ಎರಡೂವರೆ ವರ್ಷ ಬೇಕಾಯಿತೇ?. ಪರಶುರಾಮ ಥೀಮ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ನಾವು ಭಿಕ್ಷೆ ಬೇಡಿಯಾದರೂ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ” ಎಂದು ಶಾಸಕರು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023ರ ಜ. 17ರಂದು ಈ ಥೀಮ್ ಪಾರ್ಕ್ ಉದ್ಘಾಟಿಸಿದ್ದರು. ಇಡೀ ಥೀಮ್ ಪಾರ್ಕ್ ಅನ್ನು ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಪರಶುರಾಮ ಮೂರ್ತಿ ನಿರ್ಮಾಣದ ಕುರಿತು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಕಾರ್ಕಳ ಟೌನ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. ಬಳಿಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸಿನ ಅನ್ವಯ ಈ ಕುರಿತು ಸಿಐಡಿ ತನಿಖೆಗೆಗೂ ಆದೇಶಿಸಲಾಗಿತ್ತು.