ಕೊಪ್ಪಳ: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಕೊಪ್ಪಳ ಪ್ರವಾಸವನ್ನು ಕೈಗೊಂಡಿದ್ದರು. ಕುಟುಂಬ ಸದಸ್ಯರೊಂದಿಗೆ ಅವರು ಹನುಮಂತನ ಜನ್ಮಸ್ಥಳವೆಂದು ಪ್ರಸಿದ್ದಿ ಪಡೆದ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟವೇರಿ ಶ್ರೀ ಆಂಜನೇಯ ಸ್ಚಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
77 ವರ್ಷದ ಥಾವರ್ ಚಂದ್ ಗೆಹ್ಲೋಟ್ ಮೊದಲು ಅಂಜನಾದ್ರಿ ಪಾದಗಟ್ಟಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಭಕ್ತಿ ಮತ್ತು ದೃಢಸಂಕಲ್ಪದೊಂದಿಗೆ 30 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟವೇರಿದರು.
ಕುಟುಂಬ ಸದಸ್ಯರ ಜೊತೆಗೆ ರಾಜ್ಯಪಾಲರು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 30 ನಿಮಿಷದಲ್ಲಿ ಏರಿದರು. ನಂತರ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕೊಪ್ಪಳ ಜಿಲ್ಲಾಡಳಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿತು. ಜಿಲ್ಲಾಡಳಿತದ ವತಿಯಿಂದ ರಾಜ್ಯಪಾಲರನ್ನು ದೇವಾಲಯದಲ್ಲಿ ಸನ್ಮಾನಿಸಲಾಯಿತು. ಬೆಟ್ಟದಿಂದ ರಾಜ್ಯಪಾಲರು 20 ನಿಮಿಷದಲ್ಲಿ ಇಳಿದು ಬಂದರು.
ಆಂಜನೇಯನ ಜನ್ಮಸ್ಥಳ: ಕೊಪ್ಪಳ ಜಿಲ್ಲೆಯಲ್ಲಿ ಆನೆಗುಂಡಿಗೆ ಸಮೀಪದಲ್ಲಿರುವ ಅಂಜನಾದ್ರಿ ಬೆಟ್ಟ ಹಿಂದೂಗಳ ಪವಿತ್ರ ಸ್ಥಳ. ವಾಯುಪುತ್ರ ಹನುಮಂತನ ಜನ್ಮಸ್ಥಳವಿದು ಎಂಬ ನಂಬಿಕೆ ಇದೆ. ಪ್ರತಿದಿನ ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ಆಂಜನೇಯನ ದರ್ಶವನ್ನು ಪಡೆಯುತ್ತಾರೆ.
ಅಂಜನಾದ್ರಿ ದೇವಾಲಯ ನೋಡಲು ಆಕರ್ಷಕವಾಗಿದೆ. ಆದರೆ ಆಂಜನೇಯನ ದರ್ಶನ ಪಡೆಯಲು ಬೆಟ್ಟ ಏರಬೇಕಿದೆ. 575 ಮೆಟ್ಟಿಲುಗಳನ್ನು ಏರಿ ಮೇಲೆ ತೆರಳಿ ಜನರು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಆಂಜನೇಯನ ದೇವಾಲಯದ ಒಳಗೆ ಹನುಮನ ಇಷ್ಟದೇವತೆಗಳಾದ ಶ್ರೀ ರಾಮ, ಸೀತೆ ಮಾತೆಯನ್ನು ಪೂಜಿಸಲಾಗುತ್ತದೆ. ಅಂಜನಾದ್ರಿ ಬೆಟ್ಟದ ಮೇಲೆ ಹತ್ತಿದ ತಕ್ಷಣ ಕಾಣಿಸುವ ದೇವರ ಮೂರ್ತಿ, ಸುತ್ತಲಿನ ಸುಂದರ ನೋಟ ಬೆಟ್ಟ ಹತ್ತಿ ಬಂದ ಎಲ್ಲಾ ಆಯಾಸವನ್ನು ದೂರ ಮಾಡುತ್ತದೆ.
ಬೆರಗುಗೊಳಿಸುವ ಸೂರ್ಯಾಸ್ತ, ಸುತ್ತಲಿನ ಪರ್ವತಗಳು ಮತ್ತು ಬಂಡೆಗಳ ನಡುವೆ ಹರಿಯುವ ತುಂಗಭದ್ರಾ ನದಿಯ ರಮಣೀಯ ದೃಶ್ಯವನ್ನು ನೋಡಲು ಅಂಜನಾದ್ರಿ ಬೆಟ್ಟವನ್ನು ಹತ್ತಲೇ ಬೇಕಿದೆ. ಇಲ್ಲಿಂದ ಹಂಪಿಯ ಅವಶೇಷಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳನ್ನು ಸಹ ವೀಕ್ಷಣೆ ಮಾಡಬಹುದು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯನ್ನು ಮಾಡುವುದಾಗಿ ಘೋಷಣೆ ಮಾಡಿದರು. ಅಂಜನಾದ್ರಿಯು ಆಂಜನೇಯನ ಜನ್ಮಸ್ಥಳವಾಗಿದೆ, ಇದಕ್ಕೆ ಯಾವುದೇ ಪುರಾವೆ ಅಗತ್ಯವಿಲ್ಲ. ಆದಾಗ್ಯೂ ಸಾಕಷ್ಟು ಪುರಾವೆಗಳು ನಮ್ಮ ಪುರಾಣಗಳು ಮತ್ತು ಧರ್ಮಗ್ರಂಥಗಳಲ್ಲಿ ಲಭ್ಯವಿದೆ ಎಂದು ಕರ್ನಾಟಕ ಸರ್ಕಾರವೇ ಹೇಳಿದೆ.
ಹನುಮ ಮಾಲೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಮಾಲೆ ತೊಟ್ಟು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಅಂಜನಾದ್ರಿ ಬೆಟ್ಟದಿಂದ ಅಯೋಧ್ಯೆಯ ಶ್ರೀರಾಮ ದರ್ಶನ ಮಾಡಲು ನೇರ ರೈಲು ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯೂ ಇದೆ.
ಅಂಜನಾದ್ರಿಗೆ ಭೇಟಿ ನೀಡಲು ಸದ್ಯಕ್ಕೆ ರಸ್ತೆ ಮಾರ್ಗ ಉತ್ತಮ. ಕೊಪ್ಪಳ ಅಥವ ಮುನಿರಾಬಾದ್‌ಗೆ ರೈಲಿನಲ್ಲಿ ಬಂದು ಅಲ್ಲಿಂದಲೂ ತೆರೆಳಬಹುದು. ಸದ್ಯಕ್ಕೆ ವಿಮಾನದ ಸಂಪರ್ಕವಿಲ್ಲ. ಹಂಪಿ ಕಡೆಯಿಂದ ಕೊರಕಲ್ ಬೋಟ್ ಮೂಲಕ ತುಂಗಭದ್ರಾ ನದಿಯನ್ನು ದಾಟಿ ಬೆಟ್ಟ ತಲುಪಬಹುದು.