ಹುಬ್ಬಳ್ಳಿ-ಧಾರವಾಡದಲ್ಲಿ ಉದ್ಯಮ ಸ್ಥಾಪನೆಗೆ ಮುಂದಾದ ಜಿಂದಾಲ್

0
98

ಹುಬ್ಬಳ್ಳಿ: ಉತ್ತರ ಕರ್ನಾಟಕದ ಉದ್ಯೋಗ ಆಕಾಂಕ್ಷಿಗಳಿಗೆ ಜಿಂದಾಲ್‌ ಕಂಪನಿ ಸಿಹಿಸುದ್ದಿಯನ್ನು ನೀಡಿದೆ. ಉದ್ಯಮಗಳಿಗೆ ಉತ್ತರ ಕರ್ನಾಟಕ ಅತ್ಯಂತ ಸೂಕ್ತ ಸ್ಥಳ. ಜೆಎಸ್‌ಡಬ್ಲೂ ಸಂಸ್ಥೆಯು ತನ್ನ ಮುಂದಿನ ಬೃಹತ್ ಯೋಜನೆಗಳನ್ನೂ ಕೂಡ ಈ ಭವ್ಯ ನೆಲದಲ್ಲೇ ಆರಂಭಿಸಲಿದೆ ಎಂದು ಕಂಪನಿಯ ಸಿಮೆಂಟ್ ಘಟಕದ ವ್ಯವಸ್ಥಾಪಕ ನಿರ್ದೇಶಕ ಪಾರ್ಥ್ ಜಿಂದಾಲ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಜೆಎಸ್‌ಡಬ್ಲೂ ಮುಂದಿನ ದಿನಗಳಲ್ಲಿ ರಕ್ಷಣಾ ಹಾಗೂ ಆಟೋಮೊಬೈಲ್ ಕ್ಷೇತ್ರಗಳನ್ನು ಪ್ರವೇಶಿಸುವ ಸೂಚನೆಯನ್ನು ಕೂಡ ನೀಡಿದ್ದಾರೆ. “ದೇಶದಲ್ಲಿ ಪ್ರತಿ ವರ್ಷ 20 ಲಕ್ಷ ಉದ್ಯೋಗಗಳ ಅವಶ್ಯಕತೆ ಇದ್ದು, ಇದಕ್ಕೆ ಪೂರಕವಾಗಿ ಉತ್ಪಾದನಾ ವಲಯ ಬೆಳೆಯಬೇಕು. ಈಗಿರುವ ಸರ್ಕಾರದ ಉತ್ತೇಜನಗಳ ಲಾಭವನ್ನು ಪಡೆದು ಹುಬ್ಬಳ್ಳಿ-ಧಾರವಾಡದಂತಹ ದ್ವಿತೀಯ ಸ್ತರದ ನಗರಗಳಲ್ಲಿ ಔದ್ಯಮಿಕತೆ ಬೆಳೆಯಬೇಕು” ಎಂದು ಅವರು ಹೇಳಿದ್ದಾರೆ.

“ಉತ್ಪಾದನೆ ಹಾಗೂ ಸೇವಾ ವಲಯಗಳು ಸಮಾನಾಂತರವಾಗಿ ಬೆಳೆದು ಗಟ್ಟಿಯಾಗಿ ನಿಲ್ಲಲಾರಂಭಿಸಿದರೆ, ದ್ವಿತೀಯ ಮತ್ತು ತೃತೀಯ ಶ್ರೇಣಿಯ ನಗರಗಳಲ್ಲಿನ ನಿರುದ್ಯೋಗ ಬವಣೆಗೆ ಉತ್ತರ ದೊರೆಯುತ್ತದೆ. ಜೆಎಸ್‌ಡಬ್ಲೂ ಈ ದಿಸೆಯಲ್ಲಿ ಹಲವಾರು ಭವಿಷ್ಯದ ಯೋಜನೆಗಳನ್ನು ರೂಪಿಸಿದ್ದು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಉದ್ಯಮಶೀಲತೆಯ ಈ ಉದ್ದೇಶಕ್ಕೆ ಪೂರಕವಾಗಿ ಸಹಕರಿಸುವ ವಿಶ್ವಾಸವಿದೆ” ಎಂದು ಹೇಳಿದರು.

“ದೇಶದ ಉದ್ಯಮಶೀಲತೆಯು 1950-60ರ ದಶಕದಲ್ಲಿ ಗಟ್ಟಿಗೊಳ್ಳತೊಡಗಿತು. ಅಂದಿನ ಉದ್ಯಮಿಗಳ ಪ್ರಯತ್ನದ ಫಲವಾಗಿ ಇಂದು ನಾವು ವಿಕಸಿತ ಭಾರತದ ಕನಸು ಕಾಣುವಂತಾಗಿದೆ. `2047ರ ವೇಳೆಗೆ ಈ ಕನಸನ್ನು ನನಸು ಮಾಡುವ ದೊಡ್ಡ ಹೊಣೆಗಾರಿಕೆ ನಮ್ಮ ತಲೆಮಾರಿನ ಯುವ ಉದ್ಯಮಿಗಳ ಮೇಲಿದೆ. ಇದನ್ನು ಖಂಡಿತ ನಿಭಾಯಿಸುವ ವಿಶ್ವಾಸ ದೇಶದ ಪ್ರಸಕ್ತ ಸನ್ನಿವೇಶವನ್ನು ನೋಡಿದಾಗ ಮೂಡುತ್ತದೆ” ಎಂದು ಪಾರ್ಥ್ ಜಿಂದಾಲ್ ಅಭಿಪ್ರಾಯಪಟ್ಟರು.

“ನಮ್ಮ ಸಂಸ್ಥೆಗೆ ಉತ್ತರ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ವಿಜಯನಗರ ಜಿಲ್ಲೆ ಅತ್ಯಂತ ಅದೃಷ್ಟದ ನೆಲ. ಈ ನೆಲ ನಮಗೆ ಎಲ್ಲವನ್ನೂ ಕೊಟ್ಟಿದೆ’ ಎಂದು ಕೃತಜ್ಞತಾಭಾವದಿಂದ ನುಡಿದ ಅವರು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ಹುಬ್ಬಳ್ಳಿ-ಧಾರವಾಡದಲ್ಲಿ ಬೃಹತ್ ಯೋಜನೆಗಳನ್ನು ಆರಂಭಿಸಲಿದೆ” ಎಂದರು.

ಪಾರ್ಥ್ ಮೊದಲ ಭೇಟಿ: ಪಾರ್ಥ್ ಜಿಂದಾಲ್ ಪ್ರಸಕ್ತ ಭಾರತದ ಯುವ ಉದ್ಯಮಿಗಳಲ್ಲಿ ಪ್ರಮುಖರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಪದವೀಧರರಾದ ಇವರು, ವ್ಯಾಸಂಗ ಪೂರೈಸಿ ಜೆಎಸ್‌ಡಬ್ಲೂ ಸಂಸ್ಥೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಕಂಪನಿಯ ಕಾರ್ಯ ವೈಖರಿಯ ಹರವು ವಿಸ್ತರಿಸಿದರು. ಜೆಎಸ್‌ಡಬ್ಲೂ ಸಂಸ್ಥೆಯಿಂದ ಉತ್ಪಾದನೆಯ ಜೊತೆ ಜೊತೆಗೆ, ರಫ್ತು, ದೇಸಿ ಮಾರಾಟ ಹಾಗೂ ಇನ್ನಿತರ ಔದ್ಯಮಿಕ ಚಟುವಟಿಕೆಗಳಿಗೆ ಕಾರ್ಪೋರೇಟ್ ಸ್ಪರ್ಶ ದೊರೆಯುವಂತೆ ಮಾಡಿದರು. ಇದರೊಂದಿಗೆ ಕ್ರೀಡೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಂಪನಿಯ ಕೊಡುಗೆಯನ್ನು ಹೆಚ್ಚಿಸಿ, ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದರು.

Previous articlePrajwal Revanna: ಪ್ರಜ್ವಲ್‌ ರೇವಣ್ಣ ಈಗ ಕೈದಿ ನಂಬರ್‌ 15528
Next articleಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆ

LEAVE A REPLY

Please enter your comment!
Please enter your name here