ಕಲಬುರಗಿ: “ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದ್ದು ನಾನೂ ಕೂಡ ಸಚಿವನಾಗಲಿದ್ದೇನೆ” ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, “ಮುಂಬರುವ ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಇಟ್ಟಿದ್ದೇನೆ” ಎಂದು ಹೇಳಿದರು.
ತಾವು ಪಕ್ಷದ ಶಿಸ್ತಿನ ಶಿಪಾಯಿ. ಸಚಿವ ಸ್ಥಾನದ ಕುರಿತಾಗಿ ವರಿಷ್ಠರ ಜತೆ ಚರ್ಚಿಸಿದ್ದೇನೆ. ಯಾರಿಗೆ ಹೇಳಬೇಕೋ ಅವರಿಗೆ ಮನವರಿಕೆ ಮಾಡಿದ್ದೇನೆ. ಪಕ್ಷದ ಹಿತಾಸಕ್ತಿಗೆ ಧಕ್ಕೆ ಆಗುವ ನಿಟ್ಟಿನಲ್ಲಿ ಬಹಿರಂಗಪಡಿಸಲಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಷಯ ಕುರಿತಾಗಿ ಯಾವುದೇ ಮಾಹಿತಿ ಇಲ್ಲ. ಪ್ರಮುಖವಾಗಿ ಇಂತಹದ್ದೆಲ್ಲ ಪಕ್ಷದ ಉನ್ನತ ಮಟ್ಟದಲ್ಲಿ ಸಮಾಲೋಚನೆ ಆಗುತ್ತದೆ. ಯಾವುದೇ ಒಪ್ಪಂದ ಆಗಿಲ್ಲ ಎಂಬುದು ತಮಗೆ ಗೊತ್ತಿರುವ ವಿಷಯ. ತಾವೇನು ಸುರ್ಜೆವಾಲ ಅವರಿಗೆ ಯಾವುದೇ ವಿಷಯ ಸಂಬಂಧವಾಗಿ ದೂರು ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಗ್ಯಾರಂಟಿಗಳ ಕುರಿತಾಗಿ ಅಭಿಪ್ರಾಯ ಮುಕ್ತವಾಗಿ ಹಂಚಿಕೊಳ್ಳಲಾಗಿದೆ ಎಂದರು.
ಸಮಿತಿ ರಚನೆ:
ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿ ನಿಟ್ಟಿನಲ್ಲಿ ಶಿಕ್ಷಣ ತಜ್ಞರ, ವಿದ್ವಾಂಸರ ಸಮಿತಿ ರಚನೆ ಮಾಡಿರುವಂತೆ ಸಮಗ್ರ ಕೃಷಿ ಅಭಿವೃದ್ಧಿ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವಂತಾಗಲು ಕೃಷಿ ತಜ್ಞರ ಸಮಿತಿ ಜತೆಗೆ ಕಕ ಭಾಗದ ಆರೋಗ್ಯ ಕ್ಷೇತ್ರ ಸುಧಾರಣೆಗೆ ಪೂರಕವಾಗಿ ಸಮಿತಿ ರಚಿಸಲು ಉದ್ದೇಶಿಸಲಾಗಿದೆ ಎಂದರು.
ಶಿಕ್ಷಣಕ್ಕೆ ಹೊಸ ಆಯಾಮ:
ಕಕ ಭಾಗದ ಶೈಕ್ಷಣಿಕ ಸುಧಾರಣೆಗೆ ಹೊಸ ಆಯಾಮ ಕಲ್ಪಿಸಲು ಮಂಡಳಿ ಕಂಕಣಬದ್ಧವಾಗಿದೆ. ಅಕ್ಷರ ಆವಿಷ್ಕಾರ ಎಂದು ಕಾರ್ಯಕ್ರಮ ರೂಪಿಸಿದರೆ ಸಾಲದು. ಶೈಕ್ಷಣಿಕ ಸುಧಾರಣೆಗೆಂದು ಕಕ ಭಾಗಕ್ಕೆಂದು ಕೆಲವೊಂದು ನಿಯಮಗಳನ್ನು ರೂಪಿಸುವುದು ಅಗತ್ಯವಿದೆ. ಅದರಂಗವಾಗಿ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಶೈಕ್ಷಣಿಕ ಸುಧಾರಣೆಗೆಂದು ಬರೀ ಅನುದಾನ ನೀಡಿದರೆ ಸಾಲದು, ಶಿಕ್ಷಕರ ಹಾಜರಾತಿ, ಮಕ್ಕಳ ಕಲಿಕಾಸಕ್ತಿ ಹೆಚ್ಚಳದತ್ತ ಸಹ ಗಮನಹರಿಸಲಾಗುವುದು ಎಂದರು.
ಸಂಪುಟ ನಿರ್ಣಯ ಒಂದೊಂದಾಗಿ ಅನುಷ್ಠಾನ:
ಕಳೆದ ವರ್ಷದ ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ನಡೆದ ಕಕ ಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೈಗೊಳ್ಳಲಾದ ನಿರ್ಣಯಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರತ್ಯೇಕ ಸಚಿವಾಲಯಕ್ಕೆ ಬರುವ ಸೆ. 17ರೊಳಗೆ ಒಂದು ಸ್ವರೂಪ ದೊರಕಲಿದೆ. ಕಲ್ಯಾಣ ಪಥ ಹಾಗೂ ಪ್ರಜಾಸೌಧ ನಿರ್ಮಾಣ ಸಂಪುಟ ಸಭೆಯ ಪ್ರಮುಖ ನಿರ್ಣಯಗಳಾಗಿವೆ.
ಆಗಸ್ಟ್ 4ರಂದು ಪ್ರಜಾಸೌಧ ಉದ್ಘಾಟನೆ
ಬರುವ ಆಗಸ್ಟ್ 4ರಂದು ಕೊಪ್ಪಳದಲ್ಲಿ ಕಕ ಭಾಗದಲ್ಲಿನ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸುವರು ಎಂದು ಡಾ. ಅಜಯಸಿಂಗ್ ತಿಳಿಸಿದರು.