ಬೆಂಗಳೂರಲ್ಲಿ ಸುರಂಗ ಮಾರ್ಗ: ಟೋಲ್‌ ಬಗ್ಗೆ ಮಹತ್ವದ ಅಪ್‌ಡೇಟ್

ಬೆಂಗಳೂರು: ಹೆಬ್ಬಾಳ-ಸಿಲ್ಕ್ ಬೋರ್ಡ್‌ ನಡುವಿನ ಸುರಂಗ ಮಾರ್ಗದ ಕುರಿತು ಡಿ. ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಈ ಯೋಜನೆಗೆ ಜಾಗತಿಕ ಟೆಂಡರ್ ಕರೆಯಲಾಗುತ್ತದೆ. ಮೂರು ದಿನದಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಅವರು ಹೇಳಿದ್ದಾರೆ.

ಬುಧವಾರ ಈ ಕುರಿತು ಮಾತನಾಡಿದ ಡಿ. ಕೆ. ಶಿವಕುಮಾರ್ ಹೆಬ್ಬಾಳ-ಸಿಲ್ಕ್ ಬೋರ್ಡ್ ನಡುವಿನ ಸುರಂಗ ಮಾರ್ಗವನ್ನು ಟೋಲ್ ಇಲ್ಲದೇ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಮೂಲಕ ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಲು ಟೋಲ್ ಕಟ್ಟಬೇಕು ಎಂಬ ಸುಳಿವು ನೀಡಿದರು.

ನವದೆಹಲಿಯಲ್ಲಿ ಮಾತನಾಡಿದ ಅವರು, “ಜನರು ಸಮಯ ಉಳಿತಾಯ ಮಾಡಬೇಕು ಎಂದರೆ ಟೋಲ್ ಕಟ್ಟಬೇಕು. ಇತರ ರಾಜ್ಯಗಳಲ್ಲಿಯೂ ನಗರದಲ್ಲಿ ಟೋಲ್ ಶುಲ್ಕವಿದೆ. ಬೆಂಗಳೂರಿನಲ್ಲಿಯೂ ಏರ್‌ಪೋರ್ಟ್‌ ರಸ್ತೆ, ಮೈಸೂರು ರಸ್ತೆ, ನೈಸ್‌ ರಸ್ತೆಯಲ್ಲಿ ಟೋಲ್ ಶುಲ್ಕವಿದೆ” ಎಂದರು.

ಜೂನ್‌ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಬಿಒಒಟಿ ಮಾದರಿಯಲ್ಲಿ ಎರಡು ಸುರಂಗ ರಸ್ತೆಗಳನ್ನು ನಿರ್ಮಾಣ ಮಾಡಲು ಒಪ್ಪಿಗೆ ನೀಡಿತ್ತು. ಯೋಜನೆಯ ಟೆಂಡರ್ ಪಡೆಯುವ ಖಾಸಗಿ ಕಂಪನಿ ಟೋಲ್ ಮೂಲಕ ತನ್ನ ಬಂಡವಾಳ ಹೂಡಿಕೆಯನ್ನು ವಾಪಸ್ ಪಡೆಯಲಿದೆ. 30 ವರ್ಷಗಳ ತನಕ ಟೋಲ್ ಸಂಗ್ರಹ ಮಾಡಲು ಅವಕಾಶವಿದೆ.

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸರ್ಕಾರ ಈ ಮಹತ್ವದ ಯೋಜನೆಗೆ ಒಪ್ಪಿಗೆ ಕೊಟ್ಟಿದೆ. ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ಮಾರ್ಗ ಯೋಜನೆಯು ಇನ್ನು ಪ್ರಾಥಮಿಕ ಹಂತದಲ್ಲಿದೆ. ಯೋಜನೆಗೆ ಜಾಗತಿಕ ಟೆಂಡರ್ ಕರೆಯಾಗುತ್ತದೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ 3-4 ದಿನದಲ್ಲಿ ಪತ್ರಿಕೆಗಳಲ್ಲಿ ಟೆಂಡರ್ ಪ್ರಕಟಿಸಲಾಗುತ್ತದೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು ಸುರಂಗ ರಸ್ತೆ ಯೋಜನೆ ಕುರಿತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್ ಯಾರು ಬೇಕಾದರೂ ಯೋಜನೆಯ ಕ್ರೆಡಿಟ್ ತೆಗೆದುಕೊಳ್ಳಲಿ. ಆದರೆ ಯೋಜನೆಗೆ ಬೇಕಿರುವ ಹಣಕಾಸು ನೆರವು ಸಹ ಸಿದ್ಧಪಡಿಸಿಕೊಡಲಿ ಎಂದರು.

ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ಮಾರ್ಗ ರಸ್ತೆ ಸುಮಾರು 16.75 ಕಿ. ಮೀ. ಇರಲಿದೆ. ಈ ಮಾರ್ಗ 25 ಸಿಗ್ನಲ್‌ಗಳಲ್ಲಿ ಸವಾರರು ನಿಲ್ಲುವುದನ್ನು ತಪ್ಪಿಸಲಿದ್ದು, ಸಮಯ ಬಹಳಷ್ಟು ಉಳಿತಾಯವಾಗಲಿದೆ. ಆದರೆ ಈ ರಸ್ತೆಯಲ್ಲಿ ಸಂಚಾರ ನಡೆಸಲು ಟೋಲ್ ಕಟ್ಟಬೇಕಿದೆ.

ಸುಮಾರು 18,000 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಹೆಬ್ಬಾಳದ ಎಸ್ಟಿಮ್‌ ಮಾಲ್‌ನಿಂದ ಹೆಚ್‌ಎಸ್‌ಆರ್‌ ಲೇಔಟ್‌ನ ಸಿಲ್ಕ್‌ ಬೋರ್ಡ್‌ ತನಕ ಸುರಂಗ ಮಾರ್ಗ ಇರಲಿದೆ. 3 ಪಥದ ರಸ್ತೆ,2 ಪ್ರವೇಶ ಮತ್ತು ನಿರ್ಗಮನವನ್ನು ಹೊಂದಿರಲಿದೆ.

ಈ ಯೋಜನೆಯನ್ನು ಎರಡು ಪ್ಯಾಕೇಜ್‌ಗಳಾಗಿ ಮಾಡಲಾಗುತ್ತದೆ. ಪ್ಯಾಕೇಜ್‌ 1 (ಉತ್ತರ), ಪ್ಯಾಕೇಜ್ (2) ದಕ್ಷಿಣ ಆಗಿರಲಿದೆ. ನಿರ್ಮಾಣ, ನಿರ್ವಹಣೆ, ವರ್ಗಾವಣೆ ಎಂಬ ಮಾದರಿಯಲ್ಲಿ ಖಾಸಗಿ ಕಂಪನಿ ಈ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳಲಿದೆ.

ಸುರಂಗ ಕೊರೆಯಲು ಸುಮಾರು 12 ತಿಂಗಳು. ಬಳಿಕ ಮುಂದಿನ ಕಾಮಗಾರಿಗಳು ಯೋಜನೆ ರೂಪಿಸಲಾಗಿದೆ. ಒಟ್ಟಾರೆ ಸುರಂಗ ಮಾರ್ಗ 2029-30ಕ್ಕೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.