ಹಾಸನ: ತಮ್ಮ ಸ್ಫೋಟಕ ಭವಿಷ್ಯದ ಮೂಲಕವೇ ಸದಾ ಸುದ್ದಿಯಲ್ಲಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾದರು. ಮಠದ ಆವರಣದ ಹೊರಗೆ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬ ಘೋಷಣೆ ಮೊಳಗಿತು.
ಶನಿವಾರ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೋಡಿಮಠದ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ತಾಳೆಗರಿ ಭವಿಷ್ಯವನ್ನು ಕೇಳಿದರು. ಈ ಭೇಟಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಕೋಡಿಮಠಕ್ಕೆ ಭೇಟಿ ನೀಡಿದ ಕುರಿತು ಪೋಸ್ಟ್ ಹಾಕಿದ್ದು, ‘ಶ್ರೀ ಗುರುಭ್ಯೋ ನಮಃ. ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿರುವ ಸುಪ್ರಸಿದ್ಧ ಕೋಡಿಮಠಕ್ಕೆ ತೆರಳಿ, ದೇವರ ದರ್ಶನವನ್ನು ಪಡೆದು, ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದೆನು’ ಎಂದು ಹೇಳಿದ್ದಾರೆ.
ಅರ್ಧ ಗಂಟೆಗಳ ಕಾಲ ಮಾತುಕತೆ: ಡಿ.ಕೆ.ಶಿವಕುಮಾರ್ ಕೋಡಿಮಠದ ಸ್ವಾಮೀಜಿಗಳ ಜೊತೆ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ತಾಳೆಗರಿ ಭವಿಷ್ಯವನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಭವಿಷ್ಯದಲ್ಲಿ ಏನಿತ್ತು?. ಅಭಿಮಾನಿಗಳ ಆಸೆಯಂತೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆಯೇ?.
ಡಿ.ಕೆ.ಶಿವಕುಮಾರ್ ಕೋಡಿಮಠದಿಂದ ಹೊರ ಬರುತ್ತಿದ್ದಂತೆಯೇ ಅವರ ಅಭಿಮಾನಿಗಳು, ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಘೋಷಣೆಗಳನ್ನು ಕೂಗಿದರು.
ಡಿ.ಕೆ.ಶಿವಕುಮಾರ್ ಶನಿವಾರ ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಅರಸೀಕೆರೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ನೂರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ, ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಬಳಿಕ ಡಿ.ಕೆ.ಶಿವಕುಮಾರ್ ಮಾತ್ರ ಕೋಡಿ ಮಠಕ್ಕೆ ತೆರಳಿದ್ದು ಅಚ್ಚರಿಗೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಅಪಾರ ದೈವ ಭಕ್ತರು. ಮಠ, ದೇವಾಲಯಗಳಿಗೆ ಅವರು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಕೋಡಿ ಮಠಕ್ಕೆ ಅವರು ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣ ಭವಿಷ್ಯದ ಮೂಲಕವೇ ಸದಾ ಸುದ್ದಿ ಮಾಡುವ ಕೋಡಿ ಮಠದ ಶ್ರೀಗಳು.
ನಾಯಕತ್ವ ಬದಲಾವಣೆ, ಸೆಪ್ಟೆಂಬರ್ ಕ್ರಾಂತಿ, ಡಿಸೆಂಬರ್ ವೇಳೆಗೆ ಡಿ.ಕೆ.ಶಿವಕುಮಾರ್ ಎಂಬ ಚರ್ಚೆ, ಶಾಸಕರ ಹೇಳಿಕೆಗಳ ನಡುವೆಯೇ ಡಿ.ಕೆ.ಶಿವಕುಮಾರ್ ಕೋಡಿ ಮಠದ ಶ್ರೀಗಳನ್ನು ಭೇಟಿಯಾಗಿದ್ದಾರೆ.
ಈಗಾಗಲೇ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯ ಚರ್ಚೆಗಳಿಗೆ ತೆರೆ ಎಳೆದಿದ್ದರು. ಆದರೆ ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜು ವಿ.ಶಿವಗಂಗಾ, “ಡಿಸೆಂಬರ್ ವೇಳೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ” ಎಂದು ಎರಡು ದಿನಗಳ ಹಿಂದೆ ಹೇಳಿದ್ದಾರೆ.
ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ವಿವಿಧ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ರಾಜ್ಯಕ್ಕೆ ವಾಪಸ್ ಆಗಿದ್ದರು. ಬಳಿಕ ಅವರು ಶನಿವಾರ ಹಾಸನ ಪ್ರವಾಸ ಕೈಗೊಂಡಿದ್ದು, ಈ ವೇಳೆ ಕೋಡಿ ಮಠಕ್ಕೆ ಭೇಟಿ ನೀಡಿದ್ದಾರೆ.