ಧರ್ಮಸ್ಥಳ ಕೇಸ್ ಬಿಗ್ ಅಪ್‌ಡೇಟ್: 6ನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆ

0
119

ದಕ್ಷಿಣ ಕನ್ನಡ: ಧರ್ಮಸ್ಥಳದ ಸುತ್ತಮುತ್ತ ನೂರಾರು ಶವ ಹೂತಿಟ್ಟ ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಗುರುವಾರ ಶೋಧ ಕಾರ್ಯಾಚರಣೆ ನಡೆಸುವ ವೇಳೆ ಅನಾಮಿಕ ದೂರುದಾರ ತೋರಿಸಿದ್ದ 6ನೇ ಜಾಗದಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆಯಾಗಿದೆ.

ಎಸ್‌ಐಟಿ ಪೊಲೀಸರು ದೂರುದಾರ ಗುರುತಿಸಿದ್ದ 6ನೇ ಸ್ಥಳದಲ್ಲಿ ಹಿಟಾಚಿ ಯಂತ್ರ ಬಳಸಿ ಅಗೆದಾಗ ಗುಂಡಿಯಲ್ಲಿ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

ದೂರುದಾರ ಗುರುತಿಸಿದ್ದ ಸ್ಥಳಗಳಲ್ಲಿ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ 2 ಅಸ್ಥಿಪಂಜರ ಪತ್ತೆಯಾಗಿದೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ತಲೆ ಬುರುಡೆ ಸೇರಿದಂತೆ ಕೆಲವು ಭಾಗದ ಮೂಳೆಗಳು ಮಾತ್ರ ಸಿಕ್ಕಿದ್ದು, ಇನ್ನೂ ಆಳಕ್ಕೆ ಗುಂಡಿ ತೆಗೆದು ಹುಡುಕಾಟ ನಡೆಸಲಾಗುತ್ತಿದೆ.

ಸಿಕ್ಕಿರುವ ಮೂಳೆಗಳನ್ನು ಎಸ್‌ಐಟಿ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಿದ್ದಾರೆ. ಗೂಗಲ್ ಲೋಕೇಷನ್ ಸಹಿತ ಸ್ಥಳದ ಚಿತ್ರಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. 7 ಹಾಗೂ 8ನೇ ಪಾಯಿಂಟ್‌ನಲ್ಲಿಯೂ ಗುರುವಾರ ಹುಡುಕಾಟ ನಡೆಯುವ ನಿರೀಕ್ಷೆ ಇದೆ.

ದೂರುದಾರ ಎಸ್‌ಐಟಿ ಅಧಿಕಾರಿಗಳಿಗೆ 13 ಜಾಗಗಳನ್ನು ತೋರಿಸಿದ್ದಾನೆ. ಕಳೆದ 2 ದಿನಗಳಿಂದ 5 ಪಾಯಿಂಟ್‌ಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಮೂಳೆ, ಶವದ ಗುರುತು ಪತ್ತೆಯಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಒಂದು ಕೆಂಪು ಬಣ್ಣದ ಹರಿದ ರವಿಕೆ ಹಾಗೂ ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿದೆ ಎಂಬ ಸುದ್ದಿಗಳು ಹಬ್ಬಿವೆ.

ದೂರುದಾರ ಗುರುತಿಸಿರುವ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದ್ದು, ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಕಾವಲು ಕಾಯಲಾಗುತ್ತಿದೆ. ಗುರುತಿಸಿದ ಜಾಗವನ್ನು ಟೇಪ್ ಹಾಕಿ, ನಂಬರ್ ನೀಡಲಾಗಿದೆ.

ಶವ ಶೋಧ ನಡೆಸುವ ಸ್ಥಳದಲ್ಲಿ ನೇತ್ರಾವತಿ ನದಿ ನೀರಿನ ಒರತೆ ಇದ್ದ ಕಾರಣ, ಗುಂಡಿಯಲ್ಲಿ ನೀರು ತುಂಬಿತು. ನೀರನ್ನು ಹೊರ ತೆಗೆಯಲು ಪಂಪ್ ಸೆಟ್ ತರಿಸಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡರು. ಮೂರನೇ ದಿನವೂ ಶೋಧ ಕಾರ್ಯ ನಡೆಯುತ್ತಿದೆ.

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಪ್ರಕರಣ ಸಂಬಂಧಿಸಿ ಎಸ್‌ಐಟಿ ತಂಡಕ್ಕೆ ಮತ್ತೆ 9 ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಮಾಡಲಾಗಿದೆ. ಮೊದಲಿಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಿದ ಬಳಿಕ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

Previous articleದಕ್ಷಿಣ ಭಾರತದಲ್ಲಿ ಭಾರೀ ಹೂಡಿಕೆ ಮಾಡಲಿದೆ ಗೂಗಲ್, ಯಾವ ರಾಜ್ಯ?
Next articleIndia-England 5th Test: ಟಾಸ್‌ ಸೋತ ಭಾರತ, ಆರಂಭದಲ್ಲೇ ಶಾಕ್‌!

LEAVE A REPLY

Please enter your comment!
Please enter your name here