ಧರ್ಮಸ್ಥಳ ಪ್ರಕರಣ: ಉತ್ಖನನ ಆರಂಭ, ಮೊದಲ ಸ್ಥಳದಲ್ಲಿ ದೊರೆಯದ ಕಳೇಬರ

0
50

ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆ ಮುಂದುವರಿಸಿದ್ದು, ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಪೊಲೀಸ್ ಬಿಗು ಭದ್ರತೆಯೊಂದಿಗೆ ಇಂದು ಆರಂಭಗೊಂಡಿದೆ.

ಈ ಪ್ರಕರಣದ ದೂರುದಾರ ವ್ಯಕ್ತಿಯೂ ಮುಸುಕು ಧರಿಸಿ ಸ್ಥಳದಲ್ಲಿದ್ದನು. 13 ಮಂದಿ ಕಾರ್ಮಿಕರು ಅಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಧರ್ಮಸ್ಥಳದ ಸ್ನಾನ ಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗವನ್ನು ಕಾರ್ಮಿಕರು ಮಳೆಯ ನಡುವೆಯೇ ಅಗೆದಿದ್ದಾರೆ.

ನೀರಿನ ಒರತೆ ಅಡ್ಡಿ: ಮೃತದೇಹ ಪತ್ತೆಗೆ ಜಾಗ ಅಗೆಯುವ ಕಾರ್ಯಕ್ಕೆ ನೀರಿನ ಒರತೆ ಅಡ್ಡಿಯಾಗಿದೆ. ದೂರುದಾರ ತೋರಿಸಿದ ಮೊದಲ ಸ್ಥಳ ನೇತ್ರಾವತಿ ನದಿಯ ಸಮೀಪದಲ್ಲಿದ್ದು, ನದಿಗೂ ಈ ಸ್ಥಳಕ್ಕೂ ಇರುವ ಅಂತರ 10 ಮೀಟರ್‌ಗೂ ಕಡಿಮೆ, ಆದ್ದರಿಂದ ನೀರು ಒಸರುತ್ತಿದ್ದರಿಂದ ಮಿನಿ ಹಿಟಾಚಿಯನ್ನು ಸ್ಥಳಕ್ಕೆ ತರಿಸಿ ಅಗೆಯುವ ಕಾರ್ಯ ಮುಂದುವರಿಸಲಾಗಿದೆ ಅಗೆಯುವ ಕಾರ್ಯವನ್ನು ಮಧ್ಯಾಹ್ನ 12.30ರ ಸುಮಾರಿಗೆ ಆರಂಭಿಸಲಾಗಿತ್ತು. ಸುಮಾರು ನಾಲ್ಕು ಅಡಿ, 6 ಅಡಿ ಉದ್ದ ಆಳ ಕೊರೆದಿದ್ದು, ಆದರೆ ಕಳೇಬರ ಸಿಗದಿರುವ ಕಾರಣ ಮತ್ತಷ್ಟು ಅಗೆಯುವ ಕಾರ್ಯ ನಡೆಯಿತು.

ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಸ್‌ಐಟಿಯ ಅಧಿಕಾರಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿದ್ದು ಮಾರ್ಗದರ್ಶನ ಮಡುತ್ತಿದ್ದಾರೆ. ವಿಧಿವಿಜ್ಞಾನ ತಂಡದ ಅಧಿಕಾರಿಗಳೂ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗಕ್ಕೆ ತೆರಳಿದ್ದಾರೆ. ಸಾಕ್ಷಿ ದೂರುದಾರನ ಜೊತೆಗೆ ವಕೀಲರ ತಂಡವೂ ಸ್ಥಳಕ್ಕೆ ಬಂದಿದೆ.

ಸಮಾಲೋಚನೆ: ಜಾಗವನ್ನು ಅಗೆಯುವ ಕಾರ್ಯ ಆರಂಭಿಸುವ ಮುನ್ನ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಡಿಐಜಿ ಎಂ.ಎನ್. ಅನುಚೇತ್ ನೇತೃತ್ವದಲ್ಲಿ ಸಭೆ ನಡೆಸಿದ ಅಧಿಕಾರಿಗಳು ಮುಂದಿನ ತನಿಖೆ ಬಗ್ಗೆ ಸಮಾಲೋಚನೆ ನಡೆಸಿದರು.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ 13 ಜಾಗಗಳನ್ನು ಸಾಕ್ಷಿ ದೂರುದಾರ ಎಸ್‌ಐಟಿ ಅಧಿಕಾರಿಗಳಿಗೆ ಸೋಮವಾರ ತೋರಿಸಿದ್ದರು. ಆ ಜಾಗಗಳ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್ ಕಟ್ಟಿ, ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಗುರುತು ಮಾಡಿದ್ದರು. ಜಾಗಗಳನ್ನು ಅಗೆಯುವ ದೃಶ್ಯವನ್ನು ಎಸ್‌ಐಟಿಯ ಸಿಬ್ಬಂದಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಜಾಗಗಳ ಬಳಿ ಸಶಸ್ತ್ರ ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಗರುಡ ಪಡೆ ಹಾಗೂ ವಿಶೇಷ ಕಾರ್ಯಪಡೆಯ ತರಬೇತಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ತನಿಖಾ ಕಾರ್ಯಕ್ಕೆ ಭದ್ರತೆ ಒದಗಿಸಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಒಂದು ತುಕಡಿ ಭದ್ರತೆಗಾಗಿ ಸ್ಥಳದಲ್ಲಿ ಬೀಡುಬಿಟ್ಟಿದೆ.

ಹೆಚ್ಚಿದ ಕುತೂಹಲ: ಪ್ರಕರಣದ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಿದ್ದು, ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಪೊಲೀಸರು ವಾಪಾಸು ಕಳುಹಿಸಿದ್ದಾರೆ. ಮಳೆ ಅಡ್ಡಿ, ಕಾಡು, ಇಲ್ಲದ ದಾರಿಯ ನಡುವೆ ದಾರಿ ಮಾಡಿಕೊಂಡು ಅಗೆತೆ ನಡೆದಿದೆ. ದೂರುದಾರ ಗುರುತಿಸಿರುವ ಸ್ಥಳಗಳ ಪೈಕಿ ಈಗ ಒಂದು ಸ್ಥಳದಲ್ಲಿ ಆರಂಭಿಸಿರುವ ಅಗೆಯುವ ಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ಮುಂದಿನ ಸ್ಥಳದಲ್ಲಿ ತನಿಖೆ ನಡಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೇಬರ ದೊರೆತಿಲ್ಲ: ಮೊದಲ ಸ್ಥಳ ಅಗೆದಲ್ಲಿ ಯಾವುದೇ ಕಳೆಬರಹ ದೊರೆತಿಲ್ಲ ಎಂದು ತನಿಖಾಧಿಕಾರಿ ಅನುಚೇತ್ ಸ್ಪಷ್ಟಪಡಿಸಿದ್ದಾರೆ. ಸಾಕ್ಷಿದಾರ ಗುರುತಿಸಿರುವ ಸ್ಥಳವನ್ನು ಕಾರ್ಮಿಕರ ಸಹಾಯದಿಂದ ತೆರವುಕಾರ್ಯ ಆರಂಭಗೊಂಡಿದ್ದು ಸತತ ಅಗೆಯುವ ಕೆಲಸ ನಡೆದಿದೆ. ಸ್ಥಳದಲ್ಲಿ ಯಾವುದೇ ಕುರುಹು ದೊರೆತಿಲ್ಲ ಎಂದಿದ್ದಾರೆ.

13 ಮಂದಿ ಪೌರಕಾರ್ಮಿಕರ ಸಹಾಯದಿಂದ ಆರಂಭದಲ್ಲಿ ಪಿಕ್ಕಾಸು, ಹಾರೆಯಲ್ಲಿ ಬೆಳಗ್ಗೆ 12.30 ಕ್ಕೆ ಆರಂಭವಾದ ಅಗೆಯುವ ಕೆಲಸ ಮಧ್ಯಾಹ್ನ 2.30 ರವರೆಗೆ ನಡೆಯಿತು. ಕಳೇಬರ ಅಲ್ಲೆಲ್ಲೂ ಸಿಗದ ಸಮಯದಲ್ಲಿ ದೂರುದಾರ ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದರು. ಕಡೆಗೆ ತನಿಖಾಧಿಕಾರಿ ಅನುಚೇತ್ ಸೂಚನೆಯಂತೆ ಮಿನಿ ಹಿಟಾಚಿ ಕರೆಸಲಾಯಿತು.

ಮಧ್ಯಾಹ್ನ 3.30 ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ ನಿರಂತರವಾಗಿ ನಡೆದಿದ್ದರಿಂದ ಹೊಂಡದ ರೂಪವಾಗಿದೆ. ಅನಾಮಿಕ ಗುರುತಿಸಿದ ಮೊದಲ ಸ್ಥಳದಲ್ಲೇ ಕಳೇಬರ ಸಿಗದಿರುವುದು, ಜತೆಗೆ ಮಳೆಯಿಂದಾಗಿ ಹೊಂಡದಲ್ಲಿ ಒರತೆ ನೀರು ತುಂಬುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ಸತತ ಒಂದು ತಾಸು ಹಿಟಾಚಿ ಕಾರ್ಯಾಚರಣೆ ನಡೆಸಿದರೂ ಸಿಗದ ಕಳೇಬರಹ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಶ್ವಾನದಳವನ್ನೂ ಸ್ಥಳಕ್ಕೆ ತರಿಸಲಾಗಿದೆ.

Previous articleHubballi-Ankola Railway Line: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹಸಿರು ನಿಶಾನೆ
Next articleಧೈರ್ಯವಿದ್ದರೆ ಟ್ರಂಪ್‌ ಸುಳ್ಳುಗಾರ ಎಂದು ಹೇಳಲಿ: ರಾಹುಲ್‌ ಸವಾಲು

LEAVE A REPLY

Please enter your comment!
Please enter your name here