ಬೆಂಗಳೂರು: ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಸರ್ಕಾರ 5 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ಈ ಬಗ್ಗೆ ಅನುಸರಿಸಲಾಗುವ ಮಾನದಂಡಗಳ ಬಗ್ಗೆ ಅಧ್ಯಯನ ನಡೆಸಲು ಸಮಿತಿಯು ಆಂಧ್ರಪ್ರದೇಶಕ್ಕೆ ತೆರಳಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರ ಸಹಿತ 5 ಮಂದಿಯ ತಂಡವನ್ನು ಎರಡನೇ ಭಾಷೆಯನ್ನು ಅಧಿಕೃತ ಭಾಷೆ ಎಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಅಧ್ಯಯನ ಮಾಡುವ ಸಲುವಾಗಿ ರಚನೆ ಮಾಡಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕಿ ಗಾಯಿತ್ರಿ ಕೆ.ಎಂ., ಕಾನೂನು ಇಲಾಖೆಯ ಉಪ ಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್, ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹಾಗೂ ಯಕ್ಷಗಾನ ಅಕಾಡಮಿಯ ಸದಸ್ಯ ಸುಧಾಕರ ಶೆಟ್ಟಿ ಸಮಿತಿಯ ಸದಸ್ಯರು.
ಈ ಹಿಂದೆ ಆಂಧ್ರಪ್ರದೇಶದಲ್ಲಿರುವ ಇತರ ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅಂಗೀಕಾರ ಮಾಡಿರುವ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಾಗಿತ್ತು. ಇದೀಗ ಆಂಧ್ರಪ್ರದೇಶದಲ್ಲಿ 2ನೇ ಭಾಷೆಯನ್ನು ಯಾವ ಸ್ವರೂಪ, ಪ್ರಮಾಣದಲ್ಲಿ ಅಧಿಕೃತ ಭಾಷೆ ಎಂದು ಜಾರಿಗೊಳಿಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸರ್ಕಾರ ಸಮಿತಿಯನ್ನು ರಚಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಆದೇಶಿಸಿದೆ.
ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತುಳು ಭಾಷೆಯನ್ನು 2ನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬೇಡಿಕೆ ಇಟ್ಟಿದ್ದು, ಉಳ್ಳಾಲದ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಮಾತನಾಡುವ ತುಳು ಭಾಷಿಕರು ಕೂಡ ಹಲವು ವರ್ಷಗಳಿಂದ 2ನೇ ದರ್ಜೆಯ ಸ್ಥಾನಮಾನವನ್ನು ತುಳು ಭಾಷೆಗೆ ನೀಡುವಂತೆ ಬೇಡಿಕೆ ಇಡುತ್ತಾ ಬಂದಿದ್ದಾರೆ. ಈ ಕುರಿತಂತೆ ಗಂಭೀರವಾಗಿ ಚಿಂತಿಸಲಾಗುವುದು ಎಂದು ಭರವಸೆ ನೀಡಿದ್ದರು.
ಜನಸಾಮಾನ್ಯರ ಭಾಷೆಯಲ್ಲಿ ಜನತೆಗೆ ಆಡಳಿತ ಹಾಗೂ ಶಿಕ್ಷಣ ಸಿಗಬೇಕು ಎಂಬುದು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ಹಾಗಾಗಿ ಜನಸಾಮಾನ್ಯರಿಗೆ ಅವರ ಭಾಷೆಯಲ್ಲಿ ಹೆಚ್ಚು ಅವಕಾಶ ಕಲ್ಪಿಸುವುದೇ 2ನೇ ರಾಜ್ಯ ಭಾಷಾ ಸ್ಥಾನಮಾನದ ಮುಖ್ಯ ಉದ್ದೇಶ. ಕರ್ನಾಟಕದ ಅಲ್ಪಸಂಖ್ಯಾಕ ಭಾಷೆ ಹಾಗೂ ಪ್ರಧಾನವಾಗಿ ಕರಾವಳಿಯಲ್ಲಿ ಪ್ರಮುಖ ಭಾಷೆಯಾಗಿರುವ ತುಳುವಿಗೆ ಸಂವಿಧಾನದ ಪ್ರಕಾರ 2ನೇ ರಾಜ್ಯ ಭಾಷಾ ಸ್ಥಾನಮಾನ ಸಿಗಬೇಕು ಎಂಬುದು ತುಳುವರ ಆಶಯವಾಗಿತ್ತು.