ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಪ್ರಮುಖ ಸಮಸ್ಯೆ ಟ್ರಾಫಿಕ್. ನಗರದ ಯಾವುದೇ ರಸ್ತೆಗೆ ಹೋದರೂ ಸಹ ವಾಹನ ಸವಾರರು ಈ ಕುರಿತು ದೂರುತ್ತಾರೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಂಚಾರಿ ಪೊಲೀಸರು ಹಲವಾರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಿನ ವಾಹನಗಳು ರಸ್ತೆಗೆ ಬರುತ್ತಿವೆ.
4 ದಿನಗಳ ಹಿಂದೆ ಐಪಿಎಸ್ ಅಧಿಕಾರಿ ಕಾರ್ತಿಕ್ ರೆಡ್ಡಿ ಬೆಂಗಳೂರು ಜಂಟಿ ಆಯುಕ್ತರಾಗಿ (ಸಂಚಾರ ವಿಭಾಗ) ಅಧಿಕಾರ ಸ್ವೀಕಾರ ಮಾಡಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೊಸ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಅದರಲ್ಲು ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಬುಧವಾರ Work from Home ಸೇರಿದಂತೆ ಹಲವು ಕ್ರಮಗಳನ್ನು ಸಲಹೆ ನೀಡಿದ್ದಾರೆ.
ಬೆಂಗಳೂರು ನಗರದ ಜನಸಂಖ್ಯೆ 1.4 ಕೋಟಿ. ವಾಹನಗಳ ಸಂಖ್ಯೆ 1.2 ಕೋಟಿಗೂ ಅಧಿಕ. ಆದ್ದರಿಂದ ನಗರದಲ್ಲಿ ಸಂಚಾರ ದಟ್ಟಣೆ ನಿತ್ಯದ ಸಮಸ್ಯೆಯಾಗುತ್ತಿದೆ. ತೀವ್ರ ಸಂಚಾರ ದಟ್ಟಣೆ, ಸಂಚಾರಿ ನಿಯಮ ಉಲ್ಲಂಘನೆ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಿದ್ದಾರೆ.
ಬೆಳಗ್ಗೆ 9ರಿಂದ 10 ಗಂಟೆ ನಡುವೆ ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಉಂಟಾಗುವ ಭಾರೀ ಸಂಚಾರ ದಟ್ಟಣೆ ಸಮಸ್ಯೆಗೆ ತಕ್ಷಣದ ಪರಿಹಾರಕ್ಕಾಗಿ ಸಭೆಗಳನ್ನು ಮಾಡುತ್ತಿದ್ದಾರೆ. ಸಂಚಾರಿ ಪೊಲೀಸರು, ಐಟಿ ಉದ್ಯಮದ ಪ್ರಮುಖರು ಸೇರಿದಂತೆ ಪ್ರಮುಖ ಪಾಲುದಾರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಕಾರ್ತಿಕ್ ರೆಡ್ಡಿ ಹೊರ ವರ್ತುಲ ರಸ್ತೆಯ ಟೆಕ್‌ಪಾರ್ಕ್‌ಗಳಲ್ಲಿ ಶಿಫ್ಟ್ ಸಮಯ ಬದಲಾವಣೆ ಮಾಡಿ ಬೆಳಗ್ಗೆ 7:30ರಿಂದಲೇ ಕೆಲಸ ಆರಂಭವಾಗುವಂತೆ ಮಾಡುವುದು, ಬುಧವಾರ ಮನೆಯಿಂದಲೇ ಕೆಲಸ ಮಾಡುವುದು ಇನ್ನೂ ಮುಂತಾದ ಸಲಹೆ ಕೊಟ್ಟಿದ್ದಾರೆ.
ಈ ತೀರ್ಮಾನದಿಂದ ಪೀಕ್ ಅವರ್ ಟ್ರಾಫಿಕ್ ಅನ್ನು ನಿಯಂತ್ರಿಸಬಹುದು. ಕೆಲವು ಐಟಿ ಕಂಪನಿಗಳು ವಾರದಲ್ಲಿ ಮೂರು ದಿನ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಹೇಳುತ್ತಿವೆ. ಆದರೆ ಬುಧವಾರ ಮನೆಯಿಂದಲೇ ಕೆಲಸ ಮಾಡುವ ಆಲೋಚನೆ ಪರಿಗಣಿಸುವಂತೆ ಸೂಚಿಸಲಾಗಿದೆ.
ಹೊಸ ಯೋಜನೆಗಳು: ಪ್ರಮುಖ ಜಂಕ್ಷನ್‌ಗಳಲ್ಲಿ ಬಸ್ ಬೇಗಳ ನಿರ್ಮಾಣ, ಬಿಎಂಟಿಸಿ ಎಸಿ ಬಸ್‌ಗಳ ಸಂಖ್ಯೆ ಹೆಚ್ಚಳ, ಐಟಿ ಉದ್ಯಮಗಳಿಗೆ ಶಟಲ್ ಬಸ್ ಸೇವೆ ಪ್ರೋತ್ಸಾಹಿಸುವುದು ಹಾಗೂ ವಾಹನ ಸಂಚಾರ ಹಾದಿಗಳನ್ನು ನಿಗದಿಪಡಿಸಲು ಸಿಸಿಟಿವಿ ಮೂಲಕ ನೈಜ ಸಮಯದಲ್ಲಿ ವಾಹನ ಚಲನೆಯ ವಿಶ್ಲೇಷಣೆಯ ಯೋಜನೆಗಳನ್ನು ನೀಡಿದ್ದಾರೆ.
ಕಾರ್‌ಪೂಲ್ ಸೇವೆಗೆ ಉತ್ತೇಜನ ನೀಡುವುದರಿಂದ ಹೆಚ್ಚಿನ ವಾಹನಗಳ ಬಳಕೆ ಕಡಿಮೆ ಹಾಗೂ ಪಾರ್ಕಿಂಗ್ ಕಿರಿಕಿರಿ ಇರುವುದಿಲ್ಲ. ಶಟಲ್ ಸೇವೆಗಳ ಸಂಯೋಜಿತ ಬಳಕೆ ಮತ್ತು ಬಿಎಂಟಿಸಿ ಬಸ್‌ಗಳ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಸ್ತಾಪವನ್ನು ಮುಂದಿಡಲಾಗಿದೆ.
ಇನ್ನೊಂದು ಪ್ರಮುಖ ಹೆಜ್ಜೆಯಾಗಿ ಗ್ರೌಂಡ್ ಲೆವೆಲ್ ತಂಡಗಳನ್ನು ಚುರುಕುಗೊಳಿಸುವ ಬಗ್ಗೆ ಚರ್ಚೆ ನಡೆದಿದ್ದು, ಇದರ ಅಡಿಯಲ್ಲಿ ಹೆಚ್ಚಿನ ಟ್ರಾಫಿಕ್ ಮಾರ್ಷಲ್‌ಗಳನ್ನು ನಿಯೋಜನೆಯಿಂದ ರಸ್ತೆ ನಿಯಮಗಳು ಕರಾರುವಕ್ಕಾಗಿ ಪಾಲನೆ ಬಸ್ ಅಥವಾ ಟ್ರಕ್‌ಗಳ ಬ್ರೇಕ್‌ಡೌನ್‌ಗೆ ತ್ವರಿತ ಸ್ಪಂದನಾ ತಂತ್ರ ರೂಪಿಸಲಾಗುತ್ತಿದೆ. ಇದರಿಂದಾಗಿ ಕೆಟ್ಟು ನಿಂತ ವಾಹನಗಳಿಂದಾಗಿ ಸಂಚಾರ ಅಡಚಣೆ ಕಡಿಮೆಯಾಗಲಿದೆ.
ಈ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬಂದರೆ, ಹೊರ ವರ್ತುಲ ಭಾಗದ ಸಂಚಾರ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಐಟಿ ಕಂಪನಿಗಳು ಪೊಲೀಸರ ಸಲಹೆಯನ್ನು ಸ್ವೀಕಾರ ಮಾಡಲಿವೆಯೇ? ಎಂದು ಕಾದು ನೋಡಬೇಕಿದೆ.