ಬೆಂಗಳೂರು: “ರಾಜ್ಯದಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು ಜೀವಹಾನಿ, ಬೆಳೆ ಹಾನಿ ಸಂಭವಿಸುತ್ತಿವೆ. ಇದನ್ನು ನಿಯಂತ್ರಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯೊಂದಿಗೆ ಅರಣ್ಯ ಇಲಾಖೆ ಐತಿಹಾಸಿಕ ಒಡಂಬಡಿಕೆ ಮಾಡಿಕೊಂಡಿದೆ” ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಐಐಎಸ್ಸಿ ಬೆಂಗಳೂರು ಜೊತೆ ಅರಣ್ಯ ಇಲಾಖೆಯ ಈ ಒಪ್ಪಂದದ ಮೂಲಕ ಆಧುನಿಕ ತಂತ್ರಜ್ಞಾನಗಳಾದ ಸ್ಯಾಟಲೈಟ್ ಟೆಲಿಮೆಟ್ರಿ, ಕ್ಯಾಮೆರಾ ಟ್ರಾಪ್, ಜಿಐಎಸ್ ಮಾದರಿಗಳ ಸಹಾಯದಿಂದ ಆನೆಪಥ ಮತ್ತು ಆವಾಸಸ್ಥಾನಗಳನ್ನು ಗುರುತಿಸಿ, ಸಂರಕ್ಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಐಐಎಸ್ಸಿಯ ಪ್ರೊ.ರಮನ್ ಸುಕುಮಾರ್ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಸಹಿ ಹಾಕಿ ಒಡಂಬಡಿಕೆ ವಿನಿಮಯ ಮಾಡಿಕೊಂಡಿದ್ದು. ಆನೆ ಕಾರಿಡಾರ್, ಆವಾಸಸ್ಥಾನಗಳ ಸಂರಕ್ಷಣೆಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ರಾಜ್ಯದ ಹಲವು ಭಾಗದಲ್ಲಿ ಹೆಚ್ಚಾಗಿ ಆನೆ-ಮಾನವ ಸಂಘರ್ಷವಿದೆ. ಆನೆ ಕಾರಿಡಾರ್, ಆವಾಸಸ್ಥಾನಗಳ ಸಂರಕ್ಷಣೆಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಏಷ್ಯನ್ ಆನೆಗಳ ಭೂಪ್ರದೇಶ ನಿರ್ವಹಣೆಗಾಗಿ 5 ವರ್ಷಗಳ ಸಹಯೋಗದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಆನೆಗಳು ನಾಡಿಗೆ ಬಂದರೆ ಮುನ್ನೆಚ್ಚರಿಕೆ ವ್ಯವಸ್ಥೆ: ಸ್ಯಾಟಲೈಟ್ ಟೆಲಿಮೆಟ್ರಿ, ಕ್ಯಾಮೆರಾ ಟ್ರಾಪ್‌ಗಳು ಮತ್ತು ಜಿಐಎಸ್ ಮಾದರಿಗಳನ್ನು ಬಳಸಿಕೊಂಡು ಆನೆ ಕಾರಿಡಾರ್ ಗುರುತಿಸುವುದು ಮತ್ತು ಆನೆಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆತಡೆಗಳನ್ನು ಗುರುತಿಸುವುದು, ರೈತರ ಬೆಳೆ ರಕ್ಷಣೆಗಾಗಿ ಮುನ್ನೆಚ್ಚರಿಕೆ ವ್ಯವಸ್ಥೆ, ಘಂಟೆಗಳ ಮೂಲಕ ಎಚ್ಚರಿಕೆ ಮತ್ತು ದತ್ತಾಂಶ ಆಧಾರಿತ ನಿರ್ಧಾರಗಳನ್ನು ರೂಪಿಸುವ ಮಹತ್ವದ ಪ್ರಯತ್ನ ಈ ಯೋಜನೆಯ ಮುಖ್ಯ ಉದ್ದೇಶ.
ಭಾರತೀಯ ವಿಜ್ಞಾನ ಸಂಸ್ಥೆ ಆನೆಗಳ ವರ್ತನೆ, ಸ್ವಭಾವದ ದತ್ತಾಂಶ ಕ್ರೋಡೀಕರಿಸಿ ಆನೆಪಥ ಹಾಗೂ ಮುಂದಿನ 10 ವರ್ಷಗಳಲ್ಲಿ ಎದುರಾಗಬಹುದಾದ ಭವಿಷ್ಯದ ಸಂಘರ್ಷ ಪ್ರದೇಶ ಗುರುತಿಸಲೂ ಅಧ್ಯಯನ ನಡೆಸಲಿದ್ದಾರೆ. ಆನೆಗಳು ನಾಡಿನತ್ತ ಬಂದಾಗ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ರೂಪಿಸುವ ಹಾಗೂ ಸ್ವಯಂ ಚಾಲಿತ ಧ್ವನಿಯಂತ್ರಗಳ ಮೂಲಕ ಆನೆ ಹಿಮ್ಮೆಟ್ಟಿಸುವ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ.
2025 ರಿಂದ 2029 ರವರೆಗೆ ರೂ. 4.74 ಕೋಟಿಯ ಯೋಜನೆ ಅಡಿಯಲ್ಲಿ 5 ವರ್ಷಗಳ ಅವಧಿಗೆ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಾನವ–ಆನೆ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಈ ಒಡಂಬಡಿಕೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.