ಕೊಪ್ಪಳ: ಹನುಮನ ಜನ್ಮಸ್ಥಳವೆಂದು ಪ್ರಸಿದ್ಧ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ವಿಷಯದ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆಯೊಂದನ್ನು ಧಾರವಾಡ ಹೈಕೋರ್ಟ್‌ಗೆ ನೀಡಿದೆ.
ಜಿಲ್ಲಾಡಳಿತ, ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನ ವಶಕ್ಕೆ ಪಡೆದಿದ್ದರ ವಿರುದ್ಧ ವಿಷಯ ಸೇರಿ ಎಲ್ಲ ಅರ್ಜಿ ಬಗ್ಗೆ ಮುಂದಿನ ಆರು ತಿಂಗಳೊಳಗೆ ಅಂತಿಮ ತೀರ್ಪು ನೀಡಬೇಕು ಎಂದು ಸುಪ್ರೀಂಕೋರ್ಟ್ ಧಾರವಾಡ ಹೈಕೋರ್ಟ್‌ಗೆ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ ಈ ಹಿಂದಿನ ಆದೇಶ ಪಾಲಿಸದೇ ಅರ್ಚಕರ ಪೂಜಾ ಹಕ್ಕಿಗೆ ಅಡ್ಡಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾದಾಸ ಬಾಬಾ ಪರ ವಕೀಲರು ಸುಪ್ರೀಂ ಮುಂದೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ದ್ವಿಸದಸ್ಯ ಪೀಠವು, ಸುಮಾರು 20 ನಿಮಿಷ ವಾದ-ವಿವಾದ ಆಲಿಸಿ ಆದೇಶಿಸಿದೆ.
ಕಳೆದ ಆ. 7ರಂದು ಅರ್ಜಿ ಕೈಗೆತ್ತಿಕೊಂಡಿದ್ದ ಪೀಠ, ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರಿಗೆ ಆಗಸ್ಟ್ 11 ರಂದು ಆನ್‌ಲೈನ್ ಮೂಲಕ ಖುದ್ದು ಹಾಜರಾಗುವಂತೆ ತಾಕೀತು ಮಾಡಿತ್ತು.
ಕೊಪ್ಪಳ ಜಿಲ್ಲಾಧಿಕಾರಿ ಆನ್‌ಲೈನ್ ಮೂಲಕ ಖುದ್ದು ಹಾಜರಾಗಬೇಕು. ಅವರಿಗೆ ಒಂದಷ್ಟು ಪ್ರಶ್ನೆ ಕೇಳಬೇಕಿದೆ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿತ್ತು. ಸುಪ್ರೀಂ ಸೂಚನೆಯಂತೆ ಕೊಪ್ಪಳ ಡಿಸಿ ಸುರೇಶ ಇಟ್ನಾಳ ಸೋಮವಾರ ನಡೆದ ಅರ್ಜಿ ವಿಚಾರಣೆ ವೇಳೆ ಆನ್‌ಲೈನ್‌ನಲ್ಲಿ ಹಾಜರಿದ್ದರು. ಜೊತೆಗೆ ಮೊದಲೇ ಅಫಿಡವಿಟ್ ಸಲ್ಲಿಸಿ, ವಿದ್ಯಾದಾಸ ಬಾಬಾ ಪೂಜೆ ಹಕ್ಕಿಗೆ ಯಾವುದೇ ಅಡ್ಡಿ ಮಾಡಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆ ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಕೊಪ್ಪಳ ಜಿಲ್ಲಾಧಿಕಾರಿಗೆ ಏನ್ನನ್ನೂ ಕೇಳಲಿಲ್ಲ ಎಂದು ಬಾಬಾ ಪರ ವಕೀಲರು ಮಾಹಿತಿ ನೀಡಿದ್ದಾರೆ.
ವಿವಾದದ ಹಿನ್ನೆಲೆ: ಆಂಜನೇಯ ದೇವಸ್ಥಾನದ ಪೂಜಾ ಹಕ್ಕಿನ ಕುರಿತಂತೆ ಹಲವು ವರ್ಷಗಳಿಂದಲೂ ವಿವಾದವಿದೆ. ಈ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದೆ. ಅನೇಕ ವರ್ಷಗಳಿಂದ ಇಲ್ಲಿ ವಿದ್ಯಾದಾಸ್ ಬಾಬಾ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು, ಪೂಜೆಯ ಹಕ್ಕು ತಮಗೇ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಧ್ಯಂತರ ಆದೇಶ ನೀಡಿ ವಿದ್ಯಾದಾಸ್ ಬಾಬಾ ಅವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು. ಅಲ್ಲದೆ, ಬೆಟ್ಟದ ಮೇಲೆ ಮೂಲಭೂತ ಸೌಕರ್ಯಗಳಿರುವ ಕೊಠಡಿಯನ್ನು ಅವರಿಗೆ ನೀಡುವಂತೆ ಸೂಚಿಸಿತ್ತು. ಇದಾದ ಬಳಿಕ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಭೇಟಿ ನೀಡಿದ್ದಾಗ ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರು ಪೂಜೆ ಸಲ್ಲಿಸಿದ್ದು, ಇದರಿಂದಾಗಿ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಅರ್ಚಕ ವಿದ್ಯಾದಾಸ್ ಬಾಬಾ ಆರೋಪಿಸಿದ್ದರು.