ಸೈಟು ಕೇಳಿಕೊಂಡು ಬಂದ ಚಿನ್ನದ ಸರ ಕದ್ದ!

ಶಿವಮೊಗ್ಗ: ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಮನೆ ಬಾಗಿಲಿನ ಚಿಲಕ ಹಾಕಿ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ. ಶಿವಮೊಗ್ಗದ ವಿದ್ಯಾನಗರದ ಗಣಪತಿ ಲೇಔಟ್‌ನಲ್ಲಿ ಘಟನೆ ಸಂಭವಿಸಿದೆ.
ಮನೆಯೊಂದರ ಬಳಿ ಬಂದಿದ್ದ ಸುಮಾರು 35 ವರ್ಷದ ವ್ಯಕ್ತಿಯೊಬ್ಬ ಬಾಗಿಲು ಬಡಿದಿದ್ದಾನೆ. ಮನೆ ಮಾಲೀಕ ನಾಗರಾಜಪ್ಪ ಬಾಗಿಲು ತೆರೆದಾಗ, ಸೈಟ್‌ ಮಾರಾಟಕ್ಕಿದೆಯೇ ಎಂದು ಆ ವ್ಯಕ್ತಿ ವಿಚಾರಿಸಿದ್ದ. ನಾಗರಾಜಪ್ಪ ಅವರು ಯಾವುದೇ ಸೈಟ್‌ ಮಾರಾಟಕ್ಕಿಲ್ಲ ಎಂದು ತಿಳಿಸಿದ್ದರು.

ಕೂಡಲೆ ಮನೆಯೊಳಗೆ ನುಗ್ಗಿದ ವ್ಯಕ್ತಿ, ಅನಾರೋಗ್ಯದಿಂದ ಹಾಸಿಗೆ ಮೇಲೆ ಮಲಗಿದ್ದ ನಾಗರಾಜಪ್ಪ ಅವರ ಪತ್ನಿ ರಾಜೇಶ್ವರಿ ಅವರ ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದಾನೆ. ನಾಗರಾಜಪ್ಪ ಅವರನ್ನು ತಳ್ಳಿ, ಮನೆಯಿಂದ ಹೋಗಿದ್ದಾನೆ. ಅಲ್ಲದೆ ಮನೆ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಕಳುವಾದ ಚಿನ್ನದ ಸರ 40 ಗ್ರಾಂ ತೂಕವಿದ್ದು, ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌