ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಇದು ಸಂಭ್ರಮ, ಸಮನ್ವಯ, ಸೌಹಾರ್ದ ಮತ್ತು ಸ್ಮರಣೀಯ ದಿನವಾಗಬೇಕಿತ್ತು. ನಾಡಿಗೆ ಬೆಳಕು ನೀಡಿ ತಾವು ಅರವತ್ತೊಂದು ವರ್ಷಗಳ ಕಾಲ ನರಕಯಾತನೆ ಅನುಭವಿಸಿದ ಜನರ ತ್ಯಾಗ-ಬಲಿದಾನಗಳಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಬೇಕಿತ್ತು. ಆದರೆ ಇದರಲ್ಲಿ ಪ್ರತಿಷ್ಠೆ, ರಾಜಕೀಯ ಬೆರೆತುಹೋಯಿತು!
ಶರಾವತಿಯ ಹಿನ್ನೀರಿನ ಜನರಿಗಾಗಿ ನಿರ್ಮಿಸಿದ ದೇಶದ ಎರಡನೇ ಅತೀ ಉದ್ದದ ಕೇಬಲ್ ಮೇಲ್ಸೇತುವೆ ಕೇವಲ ಸೇತುವೆಯಲ್ಲ. ಅದು ಸರ್ಕಾರ ನಾಡಿನ ಜನಕ್ಕೆ ಕೃತಜ್ಞತೆ ಸಲ್ಲಿಸುವ ಸಮರ್ಪಣೆ ಕ್ಷಣ. ಧನ್ಯತೆ ಹೇಳಬೇಕಾಗಿದ್ದ ಕ್ಷಣ. ಆರು ದಶಕಗಳಿಂದ ನಾವೆಲ್ಲ ಸ್ವಿಚ್ ಹಾಕಿದರೆ ಉರಿಯುವ ಬೆಳಕು ಶರಾವತಿ ಕಣಿವೆಯ ಜನರ ತ್ಯಾಗದ್ದು. ಅವರ ವಂಶಪಾರಂರ‍್ಯದ ಬದುಕು, ಸಮೃದ್ಧಿ ಎಲ್ಲವನ್ನೂ ಈ ಬೆಳಕಿಗಾಗಿ ಕಿತ್ತುಕೊಂಡಿದ್ದು ನಾಡಿನ ಜನತೆ ಮತ್ತು ಸರ್ಕಾರ. ಸೌಹಾರ್ದತೆ, ಸಮನ್ವಯತೆಗೆ ಕಲುಷಿತ ಮನಸ್ಸುಗಳು ಅಡ್ಡಿಯಾದವು.
ಆರು ದಶಕಗಳ ಹಿಂದೆ ಸ್ವಚ್ಛಂದವಾಗಿ ಹರಿಯುತ್ತಿದ್ದ ಶರಾವತಿಗೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ಕಟ್ಟಿ ನಾಡಿನ ಅಭ್ಯುದಯಕ್ಕೆ, ಬೆಳಗು ತಂದ ಯೋಜನೆ ಇದು. ಅಲ್ಲಿ ಶರಾವತಿಯ ಮಡಿಲಲ್ಲಿ ತೋಟ ಪಟ್ಟಿ, ಕೃಷಿ ಇವುಗಳೊಂದಿಗೆ ನೆಮ್ಮದಿಯ ಬದುಕು ಕಂಡಿದ್ದ ಸಹಸ್ರಾರು ಕುಟುಂಬಗಳ ಕಣಿವೆ ಅದಾಗಿತ್ತು. ನಾಡನ್ನು ಬೆಳಗಿಸಿದ ಶರಾವತಿ ತನ್ನ ಮಡಿಲ ಮಕ್ಕಳ ಪಾಲಿಗೆ ಮಾತ್ರ ಶಾಪವಾಗಿ ಪರಿಣಮಿಸಿದಳು!
ಅರವತ್ತೈದು ವರ್ಷಗಳ ಹಿಂದೆ ಲಿಂಗನಮಕ್ಕಿ ಶರಾವತಿ ಜಲವಿದ್ಯುತ್ ಯೋಜನೆ ರೂಪಿಸಿದಾಗ ಕೊಟ್ಟ ಭರವಸೆಗಳು ಸ್ವರ್ಗದಂತಿದ್ದವು. ಈ ಕಾಡಂಚಿನಲ್ಲಿದ್ದು ಏನು ಸಾಧಿಸುತ್ತೀರಿ? ನಿಮ್ಮ ಬದುಕು ಉಜ್ವಲಗೊಳಿಸುತ್ತೇವೆ. ಕಳೆದುಕೊಳ್ಳುವ ಭೂಮಿಗೆ ಉತ್ತಮ ಪರಿಹಾರ ನೀಡುತ್ತೇವೆ. ಮನೆಗಳನ್ನು ಕೊಡುತ್ತೇವೆ. ಹೀಗೆ ಪುಂಖಾನುಪುಂಖವಾಗಿ ಭರವಸೆಗಳ ಮಳೆಯನ್ನು ಈ ಪಾಪದ ಜನರ ಮೇಲೆ ಸುರಿಸಲಾಯಿತು.
ಹತ್ತಾರು ಎಕರೆ ತೋಟಿಗ ಇವನ್ನು ನಂಬಿ ಬೀದಿಗೆ ಬಿದ್ದ. ಮಕ್ಕಳು, ಹೆಂಗಸರನ್ನು ಕಟ್ಟಿಕೊಂಡು ಎಲ್ಲೆಲ್ಲೋ ವಲಸೆ ಹೊರಟ. ಸರ್ಕಾರದ ಪರಿಹಾರ, ಪುನರ್ವಸತಿ ನಂಬಿದ್ದ ಜನ ನಿಕೃಷ್ಟ ಪಾಲು ಕಾಣುವಂತಾಯಿತು. ಇಡೀ ಶರಾವತಿ ನದಿ ಸುಮಾರು 67 ಹಳ್ಳಿಗಳನ್ನು ಆಪೋಷನಪಡೆದುಕೊಂಡಿತು. ಅಲ್ಲಿಯ ಮನೆ, ಮಠ, ಮಂದಿರ, ಸರ್ಕಾರಿ ಶಾಲೆಗಳೆಲ್ಲವೂ ಜಲಾಶಯದ ಅಡಿಗೆ ಹೂತು ಹೋದವು!
ನಾಡಿಗಾಗಿ, ಬೆಳಕಿಗಾಗಿ, ಅಭಿವೃದ್ಧಿಗಾಗಿ ತ್ಯಾಗ ಮಾಡಿ ಎಂದು ಸ್ವಾತಂತ್ರ್ಯ ದೊರೆತ ಕೆಲ ವರ್ಷಗಳಲ್ಲಿ, ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಕ್ಷಣದಲ್ಲಿ ಶರಾವತಿ ಕೊಳ್ಳದ ಜನರ ಬದುಕಿನಲ್ಲಿ ಕತ್ತಲಾವರಿಸುವಂತೆ ವ್ಯವಸ್ಥೆ ಮಾಡಿತು. ಅಂದು ನಿರ್ಮಾಣವಾದ ಶರಾವತಿ ಜಲಾಶಯ ಸುಮಾರು ಇಪ್ಪತ್ತು ಹಳ್ಳಿಗಳನ್ನು ದ್ವೀಪವಾಗಿಸಿದೆ. ಇವುಗಳಲ್ಲಿ ನೆಲೆಸಿರುವ ಜನರ ಬದುಕು ಅರವತ್ತು ವರ್ಷಗಳಿಂದಲೂ ನರಕಸದೃಶ. ಈ ಹಳ್ಳಿಗಳಿಗೆ ಸಂಪರ್ಕ ಇಲ್ಲ. ಅಭಿವೃದ್ಧಿ ಇಲ್ಲ. ಬೆಳಕಿಲ್ಲ. ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. ಶೈಕ್ಷಣಿಕ, ಸಾಮಾಜಿಕ, ವ್ಯಾವಹಾರಿಕ ಬಿಡಿ, ಹೊರ ನಾಡಿನ ಸಂಪರ್ಕವನ್ನೇ ಈ ಹಿನ್ನೀರು ಕತ್ತರಿಸಿ ಹಾಕಿದೆ. ನೂರಾರು ಜನ ಈ ಜಲಾಶಯಕ್ಕೆ ಬಲಿಯಾಗಿದ್ದಾರೆ. ಸರಿಯಾದ ಚಿಕಿತ್ಸೆ ದೊರೆಯದೇ ಬಸುರಿ, ಬಾಣಂತಿ, ವೃದ್ಧರು ಸಾವನ್ನಪ್ಪಿದ್ದಾರೆ.
ಎಲ್ಲರಿಗಿಂತಲೂ ಪ್ರತಿಭೆ ಇದ್ದರೂ ಹೊರನಾಡಿನ ಸಂಪರ್ಕ ಇಲ್ಲದೇ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾಗಿ ದ್ವೀಪದಲ್ಲಿ ಅಂಡಮಾನ್ ನಿಕೋಬಾರ್ ಕಾಳಾಪಾನಿ' ಶಿಕ್ಷೆಯನ್ನು ಸ್ವಾತಂತ್ರ್ಯಾನಂತರದ ಶರಾವತಿ ಹಿನ್ನೀರಿನ ಜನ ಅನುಭವಿಸುತ್ತಿದ್ದಾರೆ. ಅಂದಿನ ದಾರುಣ ಸ್ಥಿತಿ ಈಗಿನ ಪೀಳಿಗೆ, ಅಧಿಕಾರಸ್ಥರು ಅರಿಯಬೇಕಿದ್ದರೆ, ಹಿರಿಯ ಸಾಹಿತಿ ನಾ. ಡಿಸೋಜ ಅವರ
ಮುಳುಗಡೆ’ ಕೃತಿ ಓದಬೇಕು.
ಎರಡು ದಶಕಗಳ ಪ್ರಯತ್ನ ಅಂತೂ ಈಗ ಸೇತುವೆ ಸಂಪರ್ಕ ಒದಗುವಂತೆ ಮಾಡಿದೆ. ಸುಮಾರು 490 ಕೋಟಿ ರೂಪಾಯಿಯಷ್ಟು ವೆಚ್ಚದಲ್ಲಿ ಕೇಬಲ್ ಸೇತುವೆ ಈಗ ಮುಕ್ತವಾಗಿದೆ. ಒಂದು ಸೇತುವೆ ನಿರ್ಮಿಸಿಕೊಡಿ ಎಂದರೆ ಸರ್ಕಾರ ಹಾಗೂ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸೇತುವೆ ನಿರ್ಮಿಸುವುದಕ್ಕಿಂತ ಅಲ್ಲಿನ ಜನರನ್ನೇ ಪುನರ್ವಸತಿ ಮೂಲಕ ಬೇರೆ ವ್ಯವಸ್ಥೆ ಮಾಡಿ ಎಂದಿದ್ದರು. ಅಧಿಕಾರಸ್ಥರಿಗೆಲ್ಲಿ ಗೊತ್ತು, ಈ ನೆಲದ ಭಾವನೆ? ಇವರ ಮತಗಳಿಗಾಗಿ ಮಾತ್ರ ಪಂಚಾಯ್ತಿ ಸದಸ್ಯರಿಂದ ಹಿಡಿದು ಶಾಸಕರು, ಲೋಕಸಭಾ ಸದಸ್ಯರವರೆಗೆ ಎಲ್ಲರೂ ಬಣ್ಣದ ಭರವಸೆ ನೀಡಿ, ಪುಂಖಾನುಪುಂಖ ಆಶ್ವಾಸನೆ ನೀಡಿದವರೇ.. ಮತ್ತೆ ಕಾಣುವುದು ಮುಂದಿನ ಚುನಾವಣೆಗೇ.
ಮುಳುಗಡೆ ಜನರು ದೂರದ ಊರುಗಳಲ್ಲಿ ಪುನರ್ವಸತಿ ಪಡೆದರೂ ಇನ್ನೂ ಪೂರ್ಣ ಸೌಲಭ್ಯಗಳು, ಪೂರ್ಣ ಪರಿಹಾರ ದೊರೆತಿಲ್ಲ. ನ್ಯಾಯಾಲಯ, ಸರ್ಕಾರಿ ಕಚೇರಿಗಳ ಅಲೆದಾಟ ತಪ್ಪಲಿಲ್ಲ. ಸೋಮವಾರ ಈ ಸೇತುವೆ ಲೋಕಾರ್ಪಣೆಯಾಯಿತು. ಆದರೆ ಶಿಷ್ಟಾಚಾರದ ನೆಪವೊಡ್ಡಿ ಇಡೀ ರಾಜ್ಯ ಸರ್ಕಾರವೇ ಕಾರ್ಯಕ್ರಮ ಬಹಿಷ್ಕರಿಸಿರುವುದು ನಾಡಿನ ಜನ, ವಿಶೇಷವಾಗಿ ಶರಾವತಿ ಕೊಳ್ಳ ಪ್ರದೇಶದ ಜನಕ್ಕೆ ನೋವುಂಟು ಮಾಡುವ ವಿದ್ಯಮಾನವೇ.
ನಿಜ. ನಿತಿನ್ ಗಡ್ಕರಿ ಇಲ್ಲದಿದ್ದರೆ ಬಹುಶಃ ಈ ಸೇತುವೆ ಯೋಜನೆ ಕಾರ್ಯಸಾಧ್ಯವಾಗುತ್ತಿರಲಿಲ್ಲ. ರಾಷ್ಟ್ರೀಯ ಹೆದ್ದಾರಿಯೊಂದನ್ನು ತಿರವುಗೊಳಿಸಿ ಸುಮಾರು ಹತ್ತಕ್ಕೂ ಹೆಚ್ಚು ದ್ವೀಪಗಳಿಗೆ ಸಂಪರ್ಕ ಒದಗಿಸಿದ ಶ್ರೇಯಸ್ಸು, ಅವರ ಇಚ್ಛಾಶಕ್ತಿ ಮೆಚ್ಚಲೇಬೇಕು. ಇದಕ್ಕಾಗಿಯೇ ಈ ಭಾಗದ ಹಿರಿಯ ಪ್ರತಿನಿಧಿ, ನಾಯಕ ಕಾಗೋಡು ತಿಮ್ಮಪ್ಪ `ನಮ್ಮೆಲ್ಲರ ಜನತೆಯ ಪರವಾಗಿ ನಿತಿನ್ ಗಡ್ಕರಿಯವರ ಕಾಲಿಗೆ ನಮಸ್ಕರಿಸುತ್ತೇನೆ’ ಎಂದಿದ್ದು!
ಹಾಗಂತ ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಬಿ.ಎಸ್.ಯಡಿಯೂರಪ್ಪ ಎಲ್ಲರ ಕೊಡುಗೆಯೂ ಸಾಕಷ್ಟಿದೆ. ಇಲ್ಲಿ ವ್ಯವಹಾರ, ರಾಜಕೀಯ, ಪ್ರತಿಷ್ಠೆಗಿಂತಲೂ ನಮಗಾಗಿ ಈ ಜನ ಸ್ವಾತಂತ್ರ್ಯ ಕಳೆದುಕೊಂಡಿದ್ದರಲ್ಲ, ಬದುಕು ನಷ್ಟ ಮಾಡಿಕೊಂಡಿದ್ದರಲ್ಲ, ಅವರಿಗಾಗಿ ಎಲ್ಲವನ್ನೂ ಮರೆತು ಸಮರ್ಪಣಾ ಭಾವದಿಂದ ಬರಬೇಕಿತ್ತು. ಈ ಸೇತುವೆ ಎರಡು ಪ್ರದೇಶಗಳ ಕೊಂಡಿಯಷ್ಟೇ ಅಲ್ಲ. ಹಲವು ಮನಸ್ಸು- ಬದುಕುಗಳನ್ನು ಜೋಡಿಸುವಂಥದ್ದು. ತ್ಯಾಗಿಗಳಿಗೆ ಕೃತಜ್ಞತೆ ಸಲ್ಲಿಸಿ, ಅವರ ಹೊಸ ಬದುಕಿನ ಸಂಭ್ರಮದಲ್ಲಿ ಜವಾಬ್ದಾರಿ ಹೊಂದಿದವರು ಪಾಲ್ಗೊಳ್ಳಬೇಕಿತ್ತು. ಇಷ್ಟು ದಶಕಗಳ ಕಾಲ ಈ ವ್ಯವಸ್ಥೆಗಾಗಿ ಮತ್ತು ರಾಜ್ಯಕ್ಕಾಗಿ ಅಲ್ಲವೇ ಇವರೆಲ್ಲ ತ್ಯಾಗ ಮಾಡಿದ್ದು? ಇದು ನೆನಪಾಗಬೇಕಿತ್ತು!
ಹೌದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ವಿಶ್ವಾಸವನ್ನು ಪಡೆದು, ಶಿಷ್ಟಾಚಾರ ಪಾಲಿಸಬೇಕಿತ್ತು. ಕೇಂದ್ರ ಸರ್ಕಾರ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬಾರದಿತ್ತು. ಹಾಗೆಯೇ ಮುಖ್ಯಮಂತ್ರಿ ಹಾಗೂ ಸರ್ಕಾರ ಕೂಡ ಔದಾರ್ಯ ತೋರಿದ್ದರೆ ತಪ್ಪಾಗುತ್ತಿರಲಿಲ್ಲ. ಏಕೆಂದರೆ ಈ ಯೋಜನೆಯೇ ಅಂಥದ್ದು. ವಿಶೇಷತಃ ನಿತಿನ್ ಗಡ್ಕರಿ ಅವರಂತಹ ಅಭಿವೃದ್ಧಿಪರ ಮನಸ್ಸು ಗೆಲ್ಲಬೇಕಿತ್ತು. ಮುಖ್ಯಮಂತ್ರಿ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ, ರಾಜ್ಯದ ಪ್ರತಿನಿಧಿಯನ್ನಾದರೂ ಕಾರ್ಯಕ್ರಮಕ್ಕೆ ಕಳಿಸಿ, ರಾಜ್ಯ ಸರ್ಕಾರದ ಕಾರ್ಯಕ್ರಮವನ್ನಾಗಿಸಿಕೊಳ್ಳಬೇಕಿತ್ತು.
ಏಕೆಂದರೆ ಸರ್ಕಾರಕ್ಕೊಂದು ಸುವರ್ಣಾವಕಾಶ ಇತ್ತು. ಸೇತುವೆ ನಿರ್ಮಿಸಿದಾಕ್ಷಣ ಸಹಸ್ರಾರು ಕುಟುಂಬಗಳ ಸಮಸ್ಯೆ ಬಗೆಹರಿಯುವುದಿಲ್ಲ. ಅರವತ್ತೈದು ವರ್ಷಗಳ ಹಿಂದೆ ಸರ್ಕಾರವೇ ಪುನರ್ವಸತಿ ಮಾಡಿದ ಜಾಗ ಇನ್ನೂ ಕೂಡ ಆ ಜನರಿಗೆ ಖಾತೆ ಆಗಿಲ್ಲ. ಅರಣ್ಯ, ಬಗರ್‌ಹುಕುಂ, ಕಂದಾಯ ಕಾಯಿದೆ, ಕಾನೂನು ಇತ್ಯಾದಿ ನೆಪಗಳಿಂದ ಎರಡು ಪೀಳಿಗೆಗಳೇ ಯಾವೊಂದೂ ಸೌಲಭ್ಯ ಇಲ್ಲದೇ, ಅಭ್ಯುದಯವನ್ನು ಕಾಣದೇ ಕಮರಿ ಹೋಗಿದೆ. ಪುನರ್ವಸತಿಯ ಲೋಪದೋಷ, ಪರಿಹಾರ, ಕೇಂದ್ರ ಸರ್ಕಾರದಿಂದ ಈ ಜನರಿಗೆ ಇರುವ ಕಾನೂನಿನ ತೊಡಕು, ಸಂಕಷ್ಟ ಎಲ್ಲವನ್ನೂ ಕೂಡ ಈ ವೇದಿಕೆಯಲ್ಲಿ ಅರಹುವ ಮತ್ತು ಪರಿಹಾರ ಪಡೆಯುವ ಒಳ್ಳೆಯ ಅವಕಾಶ ಇತ್ತು. ಜನರ ಭಾವನೆಗಳಿಗೆ ಸರ್ಕಾರ ಧ್ವನಿಯಾಗುವ, ಕಣ್ಣೀರು ಒರೆಸುವ ಕಾಲವಾಗಿತ್ತು. ಸಿದ್ದರಾಮಯ್ಯ ಮತ್ತು ಸರ್ಕಾರ ಈ ಅವಕಾಶವನ್ನು ಆ ಕ್ಷಣದಲ್ಲಿ ಕಳೆದುಕೊಂಡಿತಲ್ಲ…!? ಸ್ಥಳೀಯ ಸಂಸದ ರಾಘವೇಂದ್ರ, ಸಚಿವರಾದ ಮಧು ಬಂಗಾರಪ್ಪ ಹಾಗೂ ಶಾಸಕರೆಲ್ಲ ಈ ಹೊತ್ತಿನಲ್ಲಿ ಉದಾರತೆ ತೋರಬೇಕಿತ್ತು.
ಇನ್ನೊಂದು ವಿಷಾದದ ಸಂಗತಿ ಎಂದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳೇ ರಾಜಕೀಯ ವೇದಿಕೆಗಳಾಗುತ್ತಿವೆ. ಪ್ರಧಾನಿಗಳು, ಉಪರಾಷ್ಟ್ರತಿಗಳು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ಸರ್ಕಾರವನ್ನು ಹಳಿಯಲು, ಹಣಿಯಲು ಸರ್ಕಾರಿ ಕಾರ್ಯಕ್ರಮಗಳನ್ನೇ ಬಳಸುತ್ತಿದ್ದಾರೆ. ಸರ್ಕಾರಿ ಹಣದಲ್ಲಿ `ರಾಜಕೀಯ ಜಾತ್ರೆ’ ಮತ್ತು ಕ್ರೆಡಿಟ್ ಪಡೆದುಕೊಳ್ಳುವ ಕೆಟ್ಟ ಹಪಾಹಪಿತನವೇ ಮೆರೆಯುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ದೊಡ್ಡ ತೊಡರುಗಾಲು. ಬೇರೆ ಯಾವುದೇ ಯೋಜನೆಗಳಿಗೆ, ಸರ್ಕಾರದ ಕಾರ್ಯಕ್ರಮಗಳಿಗೆ ಶಿಷ್ಟಾಚಾರವನ್ನು ಪ್ರಮುಖವಾಗಿಸಿಕೊಳ್ಳಿ. ಆದರೆ ರಾಷ್ಟ್ರೀಯ ಯೋಜನೆಗಳಿಗೂ ಸಾರ್ವಜನಿಕ ರಕ್ಷಣೆ ಸ್ವಾಸ್ಥ್ಯಗಳಿಗಾದರೂ ಶಿಷ್ಟಾಚಾರದ ಕಟ್ಟಳೆಯನ್ನು ಸಡಿಲಗೊಳಿಸಿದರೆ ಬಹುಶಃ ನಾಯಕರೆನಿಸಿಕೊಂಡವರ ವ್ಯಕ್ತಿತ್ವಗಳ ಬಗ್ಗೆ ಹೆಮ್ಮೆಪಡುವಂತಾಗುತ್ತವೆ.
ಸರಿಯಾಗಿ 40 ವರ್ಷದ ಹಿಂದಿನ ಘಟನೆ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸೀಬರ್ಡ್ ಯೋಜನೆಗೆ ಅಡಿಗಲ್ಲನ್ನಿಡಲು ಕಾರವಾರಕ್ಕೆ ಬಂದಿದ್ದರು. ಕಾರವಾರ ಕಿನಾರೆಯಲ್ಲಿ ಅಡಿಗಲ್ಲು ಸಮಾರಂಭ ನಿಗದಿಯಾಗಿತ್ತು. ಆಗ ಕರ್ನಾಟಕದಲ್ಲಿ ಜನತಾ ಸರ್ಕಾರ. ಪ್ರಧಾನಿ ಕಾರ್ಯಕ್ರಮ ಮೂರು ದಿನ ಮುಂಚಿತವಾಗಿ ಮಾತ್ರ ಘೋಷಣೆಯಾಯಿತು.
ನೌಕಾದಳ, ರಕ್ಷಣಾ ಇಲಾಖೆ, ಗೃಹ ಇಲಾಖೆಗಳ ಕಟ್ಟುಪಾಡು ಅಂದೂ ಹೆಚ್ಚೇ ಇತ್ತು. ಆಗ ಕೂಡ ರಾಜ್ಯ ಸರ್ಕಾರದ ಅಭಿಪ್ರಾಯವನ್ನೇ ಕೇಳಿಲ್ಲ ಎಂಬ ಕೊಂಕು, ಸಣ್ಣ ಮಾತು ಬಂದಿತ್ತು. ಅಂದು ಮುಖ್ಯಮಂತ್ರಿಯಾಗಿದ್ದವರು ರಾಮಕೃಷ್ಣ ಹೆಗಡೆ. `ಹೆಗಡೆಯವರು ತಮ್ಮ ಪ್ರತಿಸ್ಪರ್ಧಿ’ ಎನ್ನುವುದು ರಾಜೀವ್ ಗಾಂಧಿಯವರಲ್ಲಿತ್ತು.ಆದರೆ ರಾಮಕೃಷ್ಣ ಹೆಗಡೆ, ಇದು ಅಪಸ್ವರ ಎತ್ತುವ ಕಾಲವಲ್ಲ' ಎಂದು ಹೇಳಿದ್ದಲ್ಲದೇ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆಗಮಿಸಿ ಯೋಜನೆಗೆ ರಾಜ್ಯ ಸರ್ಕಾರದ ಸಹಕಾರದ ಭರವಸೆ ನೀಡಿ, ಇಡೀ ಸೀಬರ್ಡ್ ನಿರಾಶ್ರಿತರ ಪುನರ್ವಸತಿ, ಪರಿಹಾರ, ದುಃಖ ದುಮ್ಮಾನ ಮತ್ತು ಅವರ ಬದುಕುಗಳನ್ನು ಪ್ರಧಾನ ಮಂತ್ರಿಗಳ ಎದುರು ಬಿಚ್ಚಿಟ್ಟರು. ತಮ್ಮ ಭಾಷಣ ಸಮಾಪ್ತಿಗೊಳಿಸುವ ವೇಳೆ,
ದಯವಿಟ್ಟು ಈ ಸಂತ್ರಸ್ತರು ಕಣ್ಣೀರು ಹಾಕದಂತೆ ರಕ್ಷಣೆ ಕೊಡಿ’ ಎಂದು ಕೋರಿಕೊಂಡರು.
ಇಡೀ ಸಭೆ ಭಾವನಾತ್ಮಕವಾಗಿ ಸ್ಪಂದಿಸಿತು. ರಾಜೀವ್ ಗಾಂಧಿ ಕೂಡ ಎದ್ದು ನಿಂತು ಹೆಗಡೆಯವರ ಕೈ ಹಿಡಿದು `ದೇಶಕ್ಕಾಗಿ ತ್ಯಾಗ ಮಾಡುತ್ತಿರುವವರನ್ನು ರಕ್ಷಿಸೋಣ; ಇವರ ಜೀವನವನ್ನು ಇನ್ನಷ್ಟು ಉಜ್ವಲಗೊಳಿಸೋಣ’ ಎಂದು ಹ್ಯಾಂಡ್ ಶೇಕ್ ಮಾಡಿ ಸ್ಪಂದಿಸಿದರು. ಅಂತಹ ಅವಕಾಶ ಈಗ ರಾಜ್ಯ ಸರ್ಕಾರಕ್ಕಿತ್ತು. ದೇಶದ ಅಭ್ಯುದಯಕ್ಕಾಗಿ, ರಕ್ಷಣೆಗಾಗಿ ಎಂತಹ ತ್ಯಾಗವನ್ನೂ ಮಾಡುವ ಈ ಸಾಮಾನ್ಯ ಜನರೆದುರು ರಾಜಕಾರಣಿಗಳ `ಕ್ರೆಡಿಟ್ ವಾರ್’ ಪ್ರತಿಷ್ಠೆ ಅಣಕಿನಂತೆ ಕಾಣುತ್ತದೆ ಅಲ್ಲವೇ? ಇಷ್ಟಕ್ಕೂ ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ ಕ್ರೆಡಿಟ್ ತೆಗೆದುಕೊಂಡರೆ ಯಾರು ಬೇಡ ಅಂತಾರೆ ಹೇಳಿ!?