ಗುರುವಾರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಎಂತಹ ನೀಚ ದೃಷ್ಕೃತ್ಯವನ್ನು ನಾವೆಲ್ಲ ಕಾಣಬೇಕಾಯಿತು…!? ನೆನಪಿಸಿಕೊಂಡರೆ ಭಯ, ತಲ್ಲಣ, ಆಘಾತಗಳು ಉಂಟಾಗುತ್ತವೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹೂವಿನಕೋಣೆ ಪ್ರಾಥಮಿಕ ಶಾಲೆಯ ಮಕ್ಕಳು ಕೆಲ ದಿನಗಳ ಹಿಂದೆ ಕುಡಿಯುವ ನೀರಿನ ಟಾಕಿಗೆ ಬೊಗಸೆ ಒಡ್ಡಿದಾಗ, ಕಲ್ಮಷ ವಾಸನೆಯುಕ್ತ ಬಿಳಿನೊರೆಯ ನೀರು ಬಂತು. ಬಿಸಿಯೂಟದ ಕಾರ್ಯಕರ್ತರು ಸಮಯ ಪ್ರಜ್ಞೆಯಿಂದ ಮಕ್ಕಳು ಜೀವ ಉಳಿಸಿದರು.
ಈ ಕಹಿ ಘಟನೆಗೆ ಮುಖ್ಯಮಂತ್ರಿಯಾದಿಯಾಗಿ, ನಾಡಿನ ಜನತೆ ಆಘಾತ ವ್ಯಕ್ತಪಡಿಸಿದ ನಾಲ್ಕೇ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಇಂತಹುದೇ ಇನ್ನೊಂದು ಘಟನೆ ಜರುಗಿತು. ಸವದತ್ತಿ ತಾಲ್ಲೂಕು ಹುಲಿಕಟ್ಟಿ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರು ಕುಡಿದು ಹತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದರು. ತುರ್ತು ಚಿಕಿತ್ಸೆಯ ನಂತರ ಮಕ್ಕಳು ಜೀವಾಪಾಯದಿಂದ ಪಾರಾದರು.
ಅಲ್ಲಿಯ ನೀರಿನ ಟಾಕಿಗೆ ವಿಷ ಬೆರೆಸಲಾಗಿತ್ತು !! ಪಾಪ ಮುಗ್ಧ ಮಕ್ಕಳ ಅರಿವಿಗೆ ಇದು ಬಂದಿಲ್ಲ. ಈ ಎರಡೂ ಘಟನೆಗಳು ಪ್ರತ್ಯೇಕವಾದರೂ ಮಕ್ಕಳ ಜೀವದ ಜೊತೆ ಚಲ್ಲಾಟವಾಡಿದ ರಾಕ್ಷಸಿ ಕೃತ್ಯಗಳು. ಹೂವಿನಕೋಣೆ ಪ್ರಾಥಮಿಕ ಶಾಲೆ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿದ ಪೊಲೀಸ್ ಇಲಾಖೆ, ಅಲ್ಲಿನ ಶಾಲಾ ವಿದ್ಯಾರ್ಥಿಗಳ ನಡುವಿನ ವೈಷಮ್ಯದಿಂದ ಓರ್ವ ವಿದ್ಯಾರ್ಥಿ ನೀರಿನ ಟಾಕಿಗೆ ಕ್ರಿಮಿನಾಶಕ ಎಸೆದಿದ್ದು ಗೊತ್ತಾಯಿತು.
ಮಕ್ಕಳ ನಡುವಿನ ಅಸೂಯೆ, ದ್ವೇಷ ಎಂತಹ ಕೃತ್ಯಕ್ಕೆ ಕಾರಣವಾಯಿತು ನೋಡಿ. ಇದಿನ್ನೂ ತನಿಖೆ ಹಂತದಲ್ಲಿದೆ. ಅಷ್ಟೆಲ್ಲ ಮಕ್ಕಳ ನಡುವಿನ ದ್ವೇಷಾಸೂಯೆಗೆ ಕಾರಣವೇನು? ಆ ಹುಡುಗನಿಗೆ ಸಿಕ್ಕ ಕ್ರಿಮಿನಾಶಕ ಎಂಥದ್ದು, ಯಾರದ್ದು ಇತ್ಯಾದಿಗಳೆಲ್ಲ ತನಿಖೆಯಾಗಬೇಕಿವೆ.
ಇದಕ್ಕೂ ಮಿಗಿಲಾಗಿ ಆಘಾತಕ್ಕೆ ಕಾರಣವಾಗಿದ್ದು ಸವದತ್ತಿ ಘಟನೆ. ಇಲ್ಲಿನ ಶಾಲೆಯ ಅನ್ಯ ಕೋಮಿನ ಮುಖ್ಯೋಪಾಧ್ಯಾಯರನ್ನು ಓಡಿಸಬೇಕೆಂದು ಊರಿನ ಒಂದು ಗುಂಪು ಮಕ್ಕಳು ಕುಡಿಯುವ ನೀರಿನ ಟಾಕಿಗೆ ವಿಷ ಹಾಕಿತು. ಈ ಕೃತ್ಯ ಎಸಗಿದವರು ಶ್ರೀರಾಮ ಸೇನೆಯ ಅಲ್ಲಿನ ಘಟಕದ ಅಧ್ಯಕ್ಷರು ಮತ್ತು ಕಾರ್ಯಕರ್ತರು ಎಂಬುದನ್ನು ಪೊಲೀಸ್ ಇಲಾಖೆ ಈಗ ಪತ್ತೆ ಹಚ್ಚಿ ಅವರನ್ನು ಬಂಧಿಸಿದೆ. ಯಥಾಪ್ರಕಾರ `ಬಂಧಿತ ಸಾಗರ ಪಾಟೀಲ ಹಾಗೂ ಸಹಚರರನ್ನು ಸಂಘಟನೆಯಿಂದ ವಜಾಗೊಳಿಸಲಾಗಿದೆ, ಅವರನ್ನು ಹಿಂದೆಯೇ ತೆಗೆದು ಹಾಕಲಾಗಿದೆ’ ಎಂದು ಶ್ರೀರಾಮಸೇನೆಯ ಜಿಲ್ಲಾ ಪ್ರಮುಖರು ಈಗೇನೋ ಸ್ಪಷ್ಟನೆ ನೀಡಿದ್ದಾರೆನ್ನಿ!
ಎಂತಹ ದ್ವೇಷ ಕೃತ್ಯವಿದು ನೋಡಿ! ಕೋಮು ದ್ವೇಷ ಎಲ್ಲಿಯವರೆಗೆ ಬಂತಲ್ಲ ಛೇ. ಅಮಾಯಕ ಮಕ್ಕಳನ್ನು ಕೊಂದಾದರೂ ಸರಿ, ಅದನ್ನು ನೆಪವಾಗಿಟ್ಟುಕೊಂಡು ಆ ಶಾಲೆಯ ಉತ್ತಮ, ನಿಷ್ಠ ಮುಖ್ಯೋಪಾಧ್ಯಾಯರನ್ನು `ಅನ್ಯ ಕೋಮಿನವರು’ಎಂಬ ಕಾರಣಕ್ಕೇ ವರ್ಗಾಯಿಸಬೇಕು ಎನ್ನುವ ಸಂಚು. ಬಹುಶಃ ಇಷ್ಟು ಕೋಮು ದ್ವೇಷ ನಾಡಿನಲ್ಲಿ ಬೆಳೆದಿದೆ ಎಂದು ಆಘಾತವೇ ಸರಿ. ಅದೂ ತಮ್ಮದೇ ಊರಿನ ಮಕ್ಕಳ ಜೀವ ತೆತ್ತಾದರೂ…!
ಶಾಲಾ ಮುಖ್ಯೋಪಾಧ್ಯಾಯರು ಏಳೆಂಟು ವರ್ಷಗಳಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತಮವಾಗಿಯೇ ಕಾರ್ಯನಿರ್ವಹಣೆಯಾಗುತ್ತಿದೆ. ಎಲ್ಲ ಸಮುದಾಯದ ಮಕ್ಕಳೂ ಈ ಶಾಲೆಯಲ್ಲಿದ್ದಾರೆ. ಆದರೂ ಆತನನ್ನು ಅಲ್ಲಿಂದ ಓಡಿಸಬೇಕು. ಕಾರಣ, ಆತ ಅನ್ಯ ಕೋಮಿನವ ಅಷ್ಟೇ. ಮಕ್ಕಳಲ್ಲಿ ಇಂತಹ ಬುದ್ಧಿ ಇರುವುದಿಲ್ಲ. ಈ ಮಕ್ಕಳಿಗೆ ಸಮಾನತೆ, ಸಹಬಾಳ್ವೆ ಕಲಿಸಬೇಕು. ದುರಂತವೆಂದರೆ ಇದನ್ನು ಬಿಟ್ಟು, ರಾಮನ ಹೆಸರಿನಲ್ಲಿ ಸಂಘಟನೆ ನಡೆಸಿ, ತಾವು ಹಿಂದೂ ಸಮಾಜದವರು ಎನ್ನುವ ಜನಕ್ಕೆ `ಮಕ್ಕಳ ನರಮೇಧವಾದರೂ ಸರಿ..”ಎನ್ನುವ ದುಷ್ಟ ಬುದ್ಧಿ.
ಶಾಲಾ ಮಕ್ಕಳ ಜೀವ ಹೋಗಿದ್ದರೆ? ವಿಷದ ನೀರು ಇಡೀ ಶಾಲೆಯ ಪ್ರಾಣ ತೆಗೆಯುತ್ತಿತ್ತಲ್ಲ, ಅದಕ್ಕಾರು ಹೊಣೆ? ಈ ಹೊಣೆಯನ್ನು ಯಾರು ವಹಿಸುತ್ತಾರೆ ಎನ್ನುವುದೀಗ ಪ್ರಶ್ನೆ.
ಯಾವ ಸಮುದಾಯದವರೇ ಆಗಲಿ. ಯಾವ ಜಾತಿಯವರೇ ಆಗಲಿ. ಯಾರನ್ನೋ ಹತ್ಯೆಗೈದು, ಯಾರನ್ನೋ ಬಲಿಕೊಟ್ಟು, ಸಂಚು ರೂಪಿಸಿ ಇನ್ಯಾವುದನ್ನೋ ಸಾಧಿಸುವ ಹೇಯ ಕೃತ್ಯ ಭಯೋತ್ಪಾದನೆಗಿಂತಲೂ ಕೆಟ್ಟದ್ದು.
ಶಾಲೆಯ ಮಕ್ಕಳನ್ನೇಕೆ ಬಳಸಿಕೊಂಡಿರಿ? ಎಂದು ಕೇಳಿದರೆ ಉತ್ತರವಿಲ್ಲ. ಸಮುದಾಯವನ್ನೇ ವಿಭಜಿಸುವುದು, ಧರ್ಮ- ಜಾತಿ- ಕೋಮಿನ ಹೆಸರಿನಲ್ಲಿ ನಮ್ಮ ಮಕ್ಕಳನ್ನೇ ಗುರಾಣಿಯಾಗಿಸಿಕೊಳ್ಳುವಷ್ಟು ಕ್ರೌರ್ಯಕ್ಕೆ ವ್ಯಾಖ್ಯಾನವೆಲ್ಲಿ? ಅಷ್ಟು ದ್ವೇಷವಾ? ಸಾಯುವವರೂ ನಿಮ್ಮ ಮಕ್ಕಳೇ. ಕೊಲ್ಲುವವರೂ ನೀವೇ. ಯಾಕೆಂದರೆ ಯಾರೋ ಒಬ್ಬರ ವರ್ಗಾವಣೆಯ ನೆಪ ಅಲ್ಲವೇ?
ದುರಂತ ನೋಡಿ. ಪಕ್ಷಾತೀತವಾಗಿ ರಾಜಕೀಯ ಬಿಟ್ಟು ಇಂತಹ ಘಟನೆಗೆ ಖಂಡನೆ ವ್ಯಕ್ತವಾಗಬೇಕಿತ್ತು. ಮುಖ್ಯಮಂತ್ರಿಯಾದಿಯಾಗಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರು, ಸಾಮಾಜಿಕ ಚಿಂತಕರು ಈ ಘಟನೆಯನ್ನು ಖಂಡಿಸಿದ್ದಾರೆ. `ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಷ ಬೀಜ ಬಿತ್ತಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಂದಿ ಈ ಕೃತ್ಯಕ್ಕೆ ಏನು ಹೇಳುತ್ತಾರೆ? ಎಂದು ಮುಖ್ಯಮಂತ್ರಿಗಳು ನೇರವಾಗಿ ಬಿಜೆಪಿಯನ್ನೇ ಗುರಿಯಾಗಿ ಖಂಡಿಸಿದ್ದಾರೆ. ಬಂಧಿತರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ ಈ ಸ್ಥಿತಿ ಕರ್ನಾಟಕಕ್ಕೆ ಏಕೆ ಬಂತು? ಯಾರು ಕಾರಣೀಭೂತರು? ಅದೂ ನಮ್ಮ ಮಕ್ಕಳನ್ನು ಗುರಿಯಾಗಿಸಿಕೊಂಡು, ಯಾರನ್ನೋ ನರಮೇಧದ ಆರೋಪಕ್ಕೆ ಸಿಲುಕಿಸಿ, ಉದ್ವಿಗ್ವತೆ ಸೃಷ್ಟಿಸುವವರ ಬಗ್ಗೆ ಏನು ಹೇಳಬೇಕು?
ವಿಷಾದ ಹಾಗೂ ದುರಂತವೆಂದರೆ ಪಕ್ಷಾತೀತವಾಗಿ ಖಂಡನೆಯಾಗಬೇಕಿದ್ದ ಕೃತ್ಯವನ್ನು ಬಿಜೆಪಿ ನಾಯಕರು ಕನಿಷ್ಠ ಔಪಚಾರಿಕವಾಗಿಯಾದರೂ ಖಂಡಿಸಿಲ್ಲ. ಬದಲು ಈ ಘಟನೆ ಏನೂ ಅಲ್ಲವೇನೋ ಎಂಬಂತೆ ಪಕ್ಷ ತೆಪ್ಪಗುಳಿದಿದೆ. ಶ್ರೀರಾಮ ಸೇನೆಯ ಪ್ರಮುಖರು ಇವರೀಗ ಸಂಘಟನೆಯಿಂದ ದೂರ ಎನ್ನುವುದನ್ನು ಹೇಳಿ ಸುಮ್ಮನಾಗಿದ್ದಾರೆ.
ನೈತಿಕ ಪೊಲೀಸ್‌ಗಿರಿಯ ಮುಂದುವರಿದ ಭಾಗ ಇದು. ಕರಾವಳಿಯಾದ್ಯಂತ ಎರಡು ಕೋಮುಗಳ ವೈಷಮ್ಯ, ಸಾವು – ನೋವು – ಹತ್ಯೆ ವರ್ಷವಿಡೀ ನಡೆಯುವುದನ್ನು ಕಾಣುತ್ತಿದ್ದೇವೆ. ಆದರೆ ಅದೀಗ ಶಾಲಾ ಅಂಗಳದವರೆಗೆ, ಪುಟ್ಟ ಮಕ್ಕಳ ಮನಸ್ಸು ಕದಡುವ ಹಂತದವರೆಗೆ ಬಂದಂತಾಗಿರುವುದು ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆ.
ಎಂತಹ ದುಷ್ಕೃತ್ಯ ನೋಡಿ. ಆಕಳ ಕೆಚ್ಚಲು ಬಗೆಯುವುದು, ತಮ್ಮ ಸಮುದಾಯದ ಹುಡುಗಿಯನ್ನು ಪ್ರೀಸಿದ್ದಾನೆಂದು ಹತ್ಯೆಗೈಯುವುದು, ದೇವಸ್ಥಾನ, ಪೂಜಾ ಮಂದಿರಗಳಲ್ಲಿ ಕೆಟ್ಟ ಕೆಲಸ ಮಾಡುವುದು ಎಷ್ಟು ಖಂಡನಾರ್ಹವೋ, ಅದೇ ರೀತಿ ಅಮಾಯಕ ಜನರ ಪ್ರಾಣದ ಜೊತೆ ಚಲ್ಲಾಟವಾಡುವುದು ಕೂಡ ಖಂಡನಾರ್ಹವೇ. ಕೆಟ್ಟ ಕೆಲಸ ಮಾಡುವ ಇಂತಹ ಪಡೆಗಳು ಈಗ ಎಲ್ಲ ಕೋಮುಗಳಲ್ಲಿ ಜಾಸ್ತಿಯಾಗಿವೆ. ರಾಜಕೀಯ ಈಗ ಮಕ್ಕಳ ಗುರಾಣಿಯಾಗಿಸಿಕೊಳ್ಳುವ ಮಟ್ಟಕ್ಕಿಳಿಯಲಾಯಿತಲ್ಲ, ಇದೆಂತಹ ಘೋರ ಕೃತ್ಯ.
ಇದಕ್ಕೆ ಪರಿಹಾರವೇನು? ಕಾನೂನು ಸಡಿಲಗೊಂಡಿತೇ? ನ್ಯಾಯ ಬಲ ಕಳೆದುಕೊಂದೀತೇ? ರಾಜಕೀಯ ವೈಷಮ್ಯ, ಗದ್ದುಗೆ ಮೋಹ ಹೆಚ್ಚಾಯಿತೇ? ಸರ್ಕಾರವೇನೋ ಕೋಮು ದ್ವೇಷ ನಿಯಂತ್ರಿಸಲು ವಿಶೇಷ ಟಾಸ್ಕ್‌ಫೋರ್ಸ್ ನಿರ್ಮಿಸಿ, ಕೈತೊಳೆದುಕೊಂಡರೆ ಸಾಕಾಗದು. ಆರೋಪಿ ಯಾರೇ ಇರಲಿ, ಎಂಥವರೇ ಇರಲಿ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಸಂಘಟನೆಯ ಮುಖ್ಯಸ್ಥರನ್ನು ಹೋಣೆಗಾರರನ್ನಾಗಿಸಬೇಕು..
ಜನಸಾಮಾನ್ಯರಾದ ನಾವೆಲ್ಲ ಮೊದಲು ಮಾನವರು ಎಂಬುದನ್ನು ಅರಿತು ನಡೆದರೆ; ಕೆಟ್ಟ ಹುಳಗಳು ನಮ್ಮ ನಡುವೆಯೇ ಇರುತ್ತವಲ್ಲ, ಅವನ್ನು ದೂರ ಇಟ್ಟರೆ, ಅನಾಹುತಗಳಿಗೂ ಮೊದಲೇ ಪರಿಹಾರ ಹುಡುಕಬಹುದು. ಕುವೆಂಪು ಹೇಳಿದಂತೆ, `ಏನಾದರೂ ಆಗು, ಮೊದಲು ಮಾನವನಾಗು’ ಎನ್ನುವ ವಿಶ್ವಮಾನ ತತ್ವದ ಬಗ್ಗೆ ಪ್ರಜ್ಞಾವಂತರು ಬೃಹತ್ ಜಾಗೃತಿ ಅಭಿಯಾನವನ್ನು ಆರಂಭಿಸಲು ಇದು ಸಕಾಲ ಎಂಬುದನ್ನಂತೂ ಈ ಎರಡು ಘಟನೆಗಳು ಸ್ಪಷ್ಟಪಡಿಸಿವೆ.