ಇಂದಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಕಾರ್ತಿಕ ಎಸ್ ಬಾಪಟ್ ಅವರ ಅಂಕಣ
ಯಾವುದೇ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನು ಅಳೆಯಬೇಕಾದರೆ ಆತನಿಗೆ ಅಧಿಕಾರವನ್ನು ಕೊಟ್ಟು ನೋಡಬೇಕು, ಏಕೆಂದರೆ ಅಧಿಕಾರದಿಂದ ವಂಚಿತನಾದವನು ಅವಕಾಶಗಳಿಂದಲೂ ವಂಚಿತನಾಗಿರುತ್ತಾನೆ. ಯಾವ ವ್ಯಕ್ತಿ ಅಧಿಕಾರವನ್ನು ಪಡೆದ ಮೇಲೂ ಸ್ವಹಿತಾಸಕ್ತಿಯ ಮೋಹ ಪಾಶಕ್ಕೆ ಒಳಗಾಗದೆ ಇದ್ದರೆ ಅವನನ್ನು ಪ್ರಾಮಾಣಿಕ ಎನ್ನಬಹುದು. ಉದಾಹರಣೆಗೆ ಯಾರಾದರೂ ನಾನೇನಾದರೂ ಸುಂಕ ವಸೂಲಾತಿ ಅಧಿಕಾರಿ ಆದರೆ ಅಥವಾ ಆಗಿದ್ದರೆ ಯಾರನ್ನು ಬಿಡುತ್ತಿರಲಿಲ್ಲ ಒಂದು ರೂಪಾಯಿ ಸುಂಕವಾದರೂ ಸರಿಯೇ ಅಥವಾ ಲಕ್ಷದಷ್ಟು ಸುಂಕವಾದರೂ ಸರಿಯೇ ವಸೂಲಿ ಮಾಡಿಯೇ ಮಾಡಿರುತ್ತಿದ್ದೆ ಎಂದು ಹೇಳಿದರೆ ನಿಜಕ್ಕೂ ಇದೊಂದು ಸದಾಶಯದ ಯೋಚನೆ ಎಂದು ಹೇಳಿ ಸುಮ್ಮನಾಗಬೇಕು, ಏಕೆಂದರೆ ಆ ವ್ಯಕ್ತಿ ನಿಜವಾಗಿಯೂ ಸುಂಕ ವಸೂಲಿ ಮಾಡುವ ಅಧಿಕಾರಿ. ಆದರೆ ಆಗ ಆತ ಏನು ಮಾಡಿಯಾನು ಎಂಬುದರ ಮೇಲೆ ಅವನ ಪ್ರಾಮಾಣಿಕತೆ ನಿರ್ಧಾರವಾಗುತ್ತದೆ. ಅಂತೆಯೇ ರಾಜಕೀಯ ಪಕ್ಷಗಳ ನಿಜವಾದ ಬಣ್ಣ ಬಯಲಾಗಬೇಕಾದರೆ ಚುನಾವಣೆಗಳು ಬಂದೆರಗಬೇಕು. ಚುನಾವಣೆಗಳು ಬಂದಾಗ ಗೆಲುವೆಂಬ ಧಾವಂತಕ್ಕೆ ಸಿದ್ಧಾಂತಗಳು ಗಾಳಿಗೆ ತೂರಿಕೊಂಡು ಹೋಗಿರುತ್ತವೆ. ಬಹುಶಃ. ಬಿಜೆಪಿಯ ವಿಷಯದಲ್ಲೂ ಇದೆ ಆದಂತಿದೆ.
ಅಭಿವೃದ್ಧಿ ಆಧಾರಿತ ಆಡಳಿತದ ಪಿತಾಮಹಾನಂತೆ, ಆರ್ಥಿಕ ಶಿಸ್ತಿನ ಹರಿಕಾರನಂತೆ ಬಿಂಬಿಸಿಕೊಳ್ಳುವ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬಂದಾಗ ತಾನು ಕೂಡ ಇತರೆ ಪಕ್ಷಗಳಂತೆ ಪಾಪ್ಯುಲಿಸ್ಟ್ ಯೋಜನೆಗಳ ಹಿಂದೆ ಬೀಳುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುವ ಸಂಗತಿ. ಬಹುಶಃ ಜನಪರ ಅಥವಾ ಪಾಪ್ಯುಲಿಸ್ಟ್ ಯೋಜನೆಗಳನ್ನು ಇನ್ನು ಮೇಲೆ ಮತಪರ ಯೋಜನೆಗಳೆಂದು ಮರುನಾಮಕರಣ ಮಾಡುವುದು ಒಳಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟೀ ಯೋಜನೆಗಳನ್ನು ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಳ್ಳುವ ಬಿಜೆಪಿ ತಾನು ಆಡಳಿತ ನಡೆಸುತ್ತಿರುವ, ಆಡಳಿತ ಸರ್ಕಾರದ ಭಾಗಿಯಾಗಿರುವ ರಾಜ್ಯಗಳಲ್ಲಿ ಗ್ಯಾರಂಟೀ ಯೋಜನೆಗಳಿಗೆ ರತ್ನ ಕಂಬಳಿ ಹಾಸಿ ಬೆಂಬಲಿಸುತ್ತಿರುವುದು ಬಿಜೆಪಿಯ ಗ್ಯಾರಂಟೀ ಯೋಜನೆಯ ಪರ ಇರುವ ದ್ವಂದ್ವ ನಿಲುವನ್ನು ತೋರಿಸುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟೀಯ ಮಾದರಿಯನ್ನು ಹೋಲುವ ಉಚಿತ ಯೋಜನೆಗಳನ್ನು ಇದೀಗ ನಿತೀಶ್‌ಕುಮಾರ್ ಸರಕಾರ ಘೋಷಿಸಿದೆ. 125 ಯೂನಿಟ್‌ಗಳ ಉಚಿತ ವಿದ್ಯುತ್ ಯೋಜನೆಯನ್ನು ನಿತೀಶ್‌ಕುಮಾರ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಉಚಿತ ಸಾರಿಗೆ ವ್ಯವಸ್ಥೆಯ ಬಗ್ಗೆಯು ಪರಿಶೀಲಿಸುತ್ತಿದೆ. ಇದೆಲ್ಲವೂ ಗ್ಯಾರಂಟೀ ಯೋಜನೆ ಅಲ್ಲವೇ ಎಂದು ಯಾರಾದರೂ ಕೇಳಿದರೆ ಅಲ್ಲ ಅದು ಸಮಾಜ ಸುಧಾರಣೆಯ ಸುವರ್ಣ ಹೆಜ್ಜೆಗಳು ಎಂಬಂತೆ ಉಚಿತ ಹೇಳಿಕೆಗಳು ಹೊರಹೊಮ್ಮುತ್ತವೆ. ಇದಕ್ಕೆ ಮಹಾರಾಷ್ಟ್ರದ ಲಡಾಕಿ ಬೆಹೆನ್ ಯೋಜನೆಯು ಒಂದು ಉದಾಹರಣೆಯೇ ಸರಿ.
ಆದರೆ ಬಿಜೆಪಿ ಇಂತಹ ಸಮಾಜ ಸುಧಾರಣೆ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಆರ್ಥಿಕ ಅಶಿಸ್ತಿಗೆ ರಹದಾರಿ ಆಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಇವೆಲ್ಲವನ್ನು ಗಮನಿಸುತ್ತಿರುವ ಶ್ರೀಸಾಮಾನ್ಯ ಮಾತ್ರ ಏನನ್ನು ಮಾಡಲಾಗದೆ ಪರಿಸ್ಥಿತಿಯ ಕೈ ಗೊಂಬೆಯಾಗಿ ಮೂಕ ಪ್ರೇಕ್ಷಕನಾಗಿದ್ದಾನೆ. ಚಳವಳಿಗಳ ದಾರಿಯನ್ನು ಜನ ಸಾಮಾನ್ಯರು ಮರೆತು ಅದೆಷ್ಟೋ ದಶಕಗಳೇ ಆಗಿವೆ, ಉಚಿತ ಕೊಡಗೆಗಳ ಪರಿಪಾಠ ರಾಜಕೀಯವನ್ನು ಮೀರಿ ಸಾಗಬೇಕು ಎಂಬುದು ಯಾವ ಪಕ್ಷಗಳಿಗೂ ಅರ್ಥವಾದಂತೆ ಕಾಣುತ್ತಿಲ್ಲ.
ಬದಲಿಗೆ ಪಕ್ಷ ಪಕ್ಷಗಳ ನಡುವೆ ಇಂತಹ ಮತಪರ ಯೋಜನೆಗಳ ಘೋಷಣೆಗೆ ತಾ ಮುಂದು ನಾ ಮುಂದು ಎಂಬ ಪೈಪೋಟಿ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಧ್ಯೇಯಗಳಲ್ಲಿ ಒಂದಾದ ಸುಭಿಕ್ಷ ಸಮಾಜದ ಪರಿಕಲ್ಪನೆಗೆ ಅರಾಜಕತೆ ಎಂಬ ಕಟ್ಟ ಕಡೆಯ ಮೊಳೆ ಹೊಡೆಯಲು ಸಿದ್ಧರಾದಂತೆ ಕಾಣುತ್ತಿದೆ. ಇಂತಹುದೇ ದಾರಿ ಹಿಡಿದ ಜಿಂಬಾಬ್ವೆ ಹಾಗೂ ಗ್ರೀಸ್ ದೇಶಗಳು ಯಾವ ಪರಿಸ್ಥಿತಿ ಎದುರಿಸಬೇಕಾಯಿತು, ಆರ್ಥಿಕ ಶಿಸ್ತಿಲ್ಲದ ಉಚಿತ ಕೊಡುಗೆಗಳು ಹೇಗೆ ವಿಪತ್ತನ್ನು ಸೃಷ್ಟಿಸಿದವು ಎಂಬುದಕ್ಕೆ ಇವೆರಡು ರಾಷ್ಟ್ರಗಳ ಉದಾಹರಣೆಯೇ ಸಾಕು.
ಹಾಗೆ ನೋಡಿದರೆ ಭಾರತದಲ್ಲಿ ಕಲ್ಯಾಣ ಯೋಜನೆಗಳಿಗೇನು ಬರವಿಲ್ಲ, ಆದರೆ ಈ ಯೋಜನೆಗಳು ಜಾರಿಗೆ ಬಂದು ಅದೆಷ್ಟೋ ದಶಕಗಳು ಸಂದರೂ ಅವುಗಳು ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತಿಲ್ಲ ಎಂದಾದರೆ ಈ ಆಡಳಿತ ಪಕ್ಷಗಳೇ ಅದಕ್ಕೆ ನೇರ ಹೊಣೆ. ಉಚಿತ ಯೋಜನೆಗಳಿಗೆ ಜನ ಈ ಪಾಟಿ ಮುಗಿ ಬೀಳುತ್ತಿದ್ದಾರೆ ಎಂದರೆ ಕಳೆದ ಎಂಟು ದಶಕಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಜಾರಿಗೆ ತಂದ ಕಲ್ಯಾಣ ಯೋಜನೆಗಳು ಯಾವುದು ಇದುವರೆಗೆ ಅವರಿಗೆ ತಲುಪಲೇ ಇಲ್ಲ ಎಂಬ ಅರ್ಥವಲ್ಲವೇ ಇದು.
ಆಯಾ ಪಕ್ಷಗಳ ಆಡಳಿತ ವೈಫಲ್ಯವಲ್ಲದೆ ಇನ್ನೇನು ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಆಯುಷ್ಯಮಾನ ಭಾರತ್ ಯೋಜನೆ, ಅನ್ನ ಭಾಗ್ಯದಂತಹ ಯೋಜನೆಗಳು ಜಾರಿಯಲ್ಲಿವೆ, ಈ ಯೋಜನೆಗಳು ನಿಜವಾಗಿಯೂ ಯಾವುದೇ ಸೋರಿಕೆಯಿಲ್ಲದೆ ಸಮಗ್ರವಾಗಿ ಸರಿಯಾದ ರೀತಿಯಲ್ಲಿ ಜಾರಿ ಆಗಿದ್ದರೆ ಗ್ಯಾರಂಟೀ ಯೋಜನೆಗಳ ಮೊರೆ ಹೋಗುವ ದರ್ದು ರಾಜಕೀಯ ಪಕ್ಷಗಳಿಗೆ ಇರುತಿತ್ತೆ? ಅದೇ ರೀತಿ ಬಿಹಾರ ಕೂಡ ಇಂತಹ ಯೋಜನೆಗಳಿಂದ ಹೊರತಲ್ಲ ಉದಾಹರಣೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಜಲ ಜೀವನ್ ಮಿಷನ್, ಜನ ಧನ ಯೋಜನೆ ಇವೆಲ್ಲವೂ ಜಾರಿಯಲ್ಲಿವೆ ಅಲ್ಲವೇ ಇಷ್ಟಾದರೂ ಈ ಪಕ್ಷಗಳಿಗೆ ಗ್ಯಾರಂಟೀ ಆಸರೆ ಬೇಕು.
ಎಲ್ಲ ಪಕ್ಷಗಳು ಯಾರು ಹೆಚ್ಚು ಉಚಿತ ಕೊಡುಗೆಗಳನ್ನು ನೀಡಬಹುದು ಎಂಬ ಪೈಪೋಟಿಯನ್ನು ಬಿಟ್ಟು ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿವುದು ಹೇಗೆ, ಈ ಯೋಜನೆಗಳನ್ನು ಮತ್ತಷ್ಟು ಬಲಪಡಿಸಿ ಅನುಷ್ಠಾನದಲ್ಲಿ ಸುಗಮಗೊಳಿಸಿ ಬಡವರ ಹಾಗೂ ಕಷ್ಟದಲ್ಲಿರುವವರ ಬಾಳನ್ನು ಸಬಲೀಕರಣಗೊಳಿಸುವ ಬಗ್ಗೆ ಯೋಚಿಸಬೇಕೇ ಹೊರತು ಗ್ಯಾರಂಟೀ ಎಂಬ ರಾಜಕೀಯ ಪ್ರೇರಿತ ಮತಪರ ಯೋಜನೆಗಳನ್ನು ಜಾರಿಗೆ ತಂದು ಪ್ರಜೆಗಳನ್ನು ಗ್ಯಾರಂಟೀ ಎಂಬ ಸಾಂಕೇತಿಕ ಪರಿಹಾರದ ಗುರಾಣಿಗಳನ್ನಾಗಿ ಮಾಡುವ ಕ್ರಮ ಎಷ್ಟು ಸರಿ?.
ಅದರಲ್ಲೂ ಬಿಜೆಪಿ ಅಂತಹ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಕೊಂಡು ಹಲವಾರು ರಾಜ್ಯಗಳಲ್ಲಿ ಪ್ರಮುಖ ಆಡಳಿತ ಪಕ್ಷವಾಗಿರುವ ಹೊತ್ತಿನಲ್ಲಿ ಹೇಗೆ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಬಹುದು ಎಂದು ತೋರಿಸುವ ಅವಕಾಶ ಇದ್ದಾಗ ಅದನ್ನು ಬಳಸಿಕೊಳ್ಳದೆ ಇದ್ದರೆ ಅದು ಬಿಜೆಪಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತದೆ.
ಆ ನಿಟ್ಟಿನಲ್ಲಿ ಬಿಜೆಪಿ ಎಂಬ ಬಿಜೆಪಿ ಗ್ಯಾರಂಟೀ ಎಂಬ ಊರುಗೋಲಿನ ಆಸರೆ ಬೆನ್ನು ಹತ್ತಿದರೆ ಕಲ್ಯಾಣ ಯೋಜನೆಗಳಿಗಿಂತ ದೊಡ್ಡ ಗ್ಯಾರಂಟೀ ಇಲ್ಲ ಎಂದು ತೋರಿಸುವ ಸದಾವಕಾಶವನ್ನು ಕಳೆದು ಕೊಂಡಂತೆ ಎಂಬುದು ಮರೆಯಬಾರದು, ಅಷ್ಟಾಗಿಯೂ ಈ ಹೊತ್ತಿನ ಅವಶ್ಯಕತೆ ಗ್ಯಾರಂಟೀ ಅಲ್ಲ ಈ ಹೊತ್ತಿನ ಅವಶ್ಯಕತೆ ಗುಡ್ ಗವರ್ನನ್ಸ್ ಅಂದರೆ ಉತ್ತಮ ಆಡಳಿತ, ಆಡಳಿತಕ್ಕೆ ಕೆಲಸವಿದ್ದಾಗ ಗ್ಯಾರಂಟಿಗೆ ಜಾಗವಿರುವುದಿಲ್ಲ.