ಅಂಕಣ ಬರಹ: ಮಾತಿನಮಲ್ಲ ಧನಕರ್ ಆಗಲಿಲ್ಲ ಶುಭಕರ

0
116

ಶನಿವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಹುಣಸವಾಡಿ ರಾಜನ್ ಅವರ ಅಂಕಣ

ಸುತ್ತಿ ಬಳಸಿ ವಿಷಯವನ್ನು ಪ್ರಸ್ತಾಪಿಸುವುದು ಅನಗತ್ಯವೇನೋ; ಯಾಕೆಂದರೆ ಜಗದೀಪ್ ಧನ್‌ಕರ್ ಕಳೆದ ವಾರ ಉಪರಾಷ್ಟ್ರಪತಿಯಾಗಿದ್ದವರು ಈಗ ಮಾಜಿ. ಇದಕ್ಕೆ ಕಾರಣಗಳು ಹಲವಾರು. ಗೊತ್ತಿದ್ದವರು ಹೇಳುವ ಕಾರಣಗಳು ಅದಕ್ಕೆ ಪುರಾವೆಗಳು ಬೇರೆ. ಇನ್ನು ಗೊತ್ತಿಲ್ಲದೇ ರಾಡಿಯೆಬ್ಬಿಸಲು ಮುಂದಿಡುವ ವಾದಗಳು ಬೇರೆ. ಶಕ್ತಿ ರಾಜಕಾರಣ ಸರ್ವೇಸಾಮಾನ್ಯವಾಗಿ ನಡೆಯುವುದೇ ಹೀಗೆ.

ಇಷ್ಟಕ್ಕೂ ಧನ್‌ಕರ್ ಶಕ್ತಿ ರಾಜಕಾರಣದ ಮೂಲಕವೇ ದೇಶದ ನಾಯಕರಾಗಿ ರೂಪುಗೊಂಡವರು. ಉಪರಾಷ್ಟ್ರಪತಿ ಸ್ಥಾನವನ್ನು ನಡುದಾರಿಯಲ್ಲಿಯೇ ಕೈಬಿಟ್ಟು ನಡೆದು ಹೊಸ ಪರಂಪರೆಯನ್ನು ಸೃಷ್ಟಿಸಲು ಅವರೆಷ್ಟು ಕಾರಣವೋ ಬಾಹ್ಯ ಕಾರಣಗಳು ಅಷ್ಟೇ ಇರಬೇಕು. ಆದರೆ ಯಾವುದೂ ಖಚಿತವಿಲ್ಲ. ಖಚಿತವಿದ್ದರೂ ಒಮ್ಮತವಿಲ್ಲ. ಒಟ್ಟಾರೆ ಜಗದೀಪ್ ಧನ್‌ಕರ್ ವ್ಯಕ್ತಿತ್ವದ ಹಾಗೆ ಎಲ್ಲವೂ ಅತಿರೇಕ ಹಾಗೂ ರೇಖಾಗಣಿತದ ನಿಖರತೆಯನ್ನು ಅಣಕಿಸುವ ಸಲುವಾಗಿಯೇ ಆಡುತ್ತಿರುವ ಭರ್ಜರಿ ನಾಟಕದ ತದ್ರೂಪು.

ನಿಜ, ಧನ್‌ಕರ್ ಸಿಡುಕು ಮೋರೆಯ ನಾಯಕ. ಉಪರಾಷ್ಟ್ರಪತಿಯ ಸ್ಥಾನಬಲದಿಂದಾಗಿ ರಾಜ್ಯಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಾಗ ಹಲವಾರು ಬಾರಿ ಪ್ರತಿಪಕ್ಷಗಳ ಆಕ್ರೋಶಕ್ಕೆ ಗ್ರಾಸವಾಗಿದ್ದ ಪ್ರಸಂಗಗಳು ಎಷ್ಟೋ ಏನೋ. ಸುಪ್ರಸಿದ್ಧ ನಟಿ ಜಯಭಾದುರಿ ಹಾಗೂ ಧನ್‌ಕರ್ ನಡುವಣ ಮಾತಿನ ಜಟಾಪಟಿ ಹಲವು ಸುಲಭ ಕಂತುಗಳಲ್ಲಿ ನಡೆದದ್ದನ್ನು ದೇಶ ಕಂಡಿದೆ. ನ್ಯಾಯಾಂಗ ಹಾಗೂ ಕಾರ್ಯಾಂಗದ ಮೇಲೆ ಕತ್ತಿವರಸೆ ನಿರಂತರವಾಗಿ ಮಾಡುತ್ತಿದ್ದ ಅವರಿಗೆ ಕಾಂಗ್ರೆಸ್ ಪಕ್ಷದ ಮೇಲೂ ಇಂಗದ ಕೋಪ. ಎಷ್ಟಾದರೂ ಧನ್‌ಕರ್ ಕೆಲಕಾಲ ಕಾಂಗ್ರೆಸ್‌ನಲ್ಲಿ ತಂಗಿಬಂದವರೇ.

ಬಿಜೆಪಿಯ ಮೂಲ ನಿವಾಸಿ ಇವರಲ್ಲ. ಮೂಲತಃ ಇವರು ಜನತಾ ಪರಿವಾರದವರು. ರಾಜಾಸ್ಥಾನ ಮೂಲದ ಧನ್‌ಕರ್ ಸಂಸದರಾಗಿ ಈ ಹಿಂದೆ ಚಂದ್ರಶೇಖರ್ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿ ಅನುಭವ ಪಡೆದವರು. ನಂತರ ಕಾಲಮಹಿಮೆಯಿಂದಾಗಿ ಬಿಜೆಪಿಯತ್ತ ಬಂದು ಪಶ್ಚಿಮಬಂಗಾಳದ ರಾಜ್ಯಪಾಲರಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಂಗಡ ನಿತ್ಯೋತ್ಸವದ ರೀತಿಯಲ್ಲಿ ಕದನ ಕುತೂಹಲ ರಾಗವನ್ನು ಆಲಾಪಿಸಿ ದೇಶದಲ್ಲಿ ಮನೆಮಾತಾಗುತ್ತಿರುವ ಸಂದರ್ಭದಲ್ಲಿಯೇ ಉಪರಾಷ್ಟ್ರಪತಿ ಸ್ಥಾನ ಒಲಿದು ಬಂದದ್ದು ನಿಜಕ್ಕೂ ಒಂದು ರಾಜಕೀಯ ಅಚ್ಚರಿ.

ರಾಜಕಾರಣವೆಂಬುದು ಯಾವಾಗಲೂ ಅಚ್ಚರಿಯ ಮೂಟೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಸರ್ಕಾರದ ರೀತಿ ನೀತಿಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ಧನ್‌ಕರ್ ಒಮ್ಮಿಂದೊಮ್ಮೆಲೇ ರಾತ್ರಿ 9.20ರ ಸುಮಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು ಮಾತ್ರ ದೊಡ್ಡ ಅಚ್ಚರಿಯೂ ಹೌದು, ನಂಬಲೇಬೇಕಾದ ಘಟನಾವಳಿಯೂ ಹೌದು. ಇದರ ಕಾರಣ ಮತ್ತು ಪ್ರೇರಣೆಗಳ ಜಾಡು ಅರಿಯಲು ಹೋದವರಿಗೆ ಸಿಕ್ಕಿದ್ದು ಕೇವಲ ಅಂತೆಕಂತೆಗಳ ಮೊಟ್ಟೆ. ಸರ್ಕಾರಕ್ಕೂ ಧನ್‌ಕರ್ ಅವರಿಗೂ ಯಾವುದೋ ಕಾರಣದ ನಿಮಿತ್ತ ಆಗಿಬರುತ್ತಿರಲಿಲ್ಲ ಎಂಬುದಂತೂ ನಿಜವೆ. ಆದರೆ ಆ ಕಾರಣ ಯಾವುದು ಎಂಬುದು ಮಾತ್ರ ಈಗಲೂ ನಿಗೂಢವೆ.

ಕೆಲವರು ಗಟ್ಟಿಯಾಗಿ ಮಾರ್ದನಿಗೊಳ್ಳುವಂತೆ ಕೆಲವರು ವಾದಿಸುತ್ತಿರುವ ಪ್ರಕರಣವೆಂದರೆ ನ್ಯಾಯಮೂರ್ತಿ ವರ್ಮಾ ಅವರ ವಾಗ್ದಂಡನೆಗೆ ಸಂಬಂಧಿಸಿದ ಪ್ರತಿಪಕ್ಷಗಳ ಪ್ರಸ್ತಾಪಕ್ಕೆ ಮಾನ್ಯತೆ ದೊರಕುವಂತೆ ರಾಜ್ಯಸಭೆಯಲ್ಲಿ ನಿರ್ಧಾರ ಕೈಗೊಂಡದ್ದು ಕಾರಣವಂತೆ. ಸರ್ಕಾರ ವರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ನಿಲುವನ್ನು ಕೈಗೊಳ್ಳುವ ಮೊದಲೇ ಯಾರ ಜೊತೆಯೂ ಸಮಾಲೋಚಿಸದೆ ಏಕಪಕ್ಷೀಯವಾಗಿ ಧನ್‌ಕರ್ ಈ ನಿರ್ಧಾರವನ್ನು ಕೈಗೊಂಡದ್ದು ಹಲವಾರು ಮಂದಿ ಕೇಂದ್ರಮಂತ್ರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ರಾಜೀನಾಮೆ ಕೈಗೊಳ್ಳುವ ನಿರ್ಧಾರ ಮಧ್ಯಾಹ್ನ ನಡೆಯಬೇಕಾಗಿದ್ದ ರಾಜ್ಯಸಭಾ ಕಲಾಪ ನಿರ್ವಹಣಾ ಮಂಡಳಿಯ ಸಭೆಯಲ್ಲಿ ಸರ್ಕಾರದ ಮಂತ್ರಿಗಳಾದ ಜೆ.ಪಿ. ನಡ್ಡಾ ಹಾಗೂ ಕಿರಣ್ ರಿಜಿಜ್ಜು ಗೈರುಹಾಜರಾದದ್ದು ಧನ್‌ಕರ್ ಅವರಿಗೆ ಅವರ ತಾಳ್ಮೆಯ ಕಟ್ಟಯೊಡೆಯಲು ಕಾರಣವಾಗಿತ್ತು. ಇದಲ್ಲದೇ ಹಲವಾರು ವಿಚಾರಗಳಲ್ಲಿಯೂ ಸರ್ಕಾರದ ಜೊತೆ ಮುಸುಕಿನ ಯುದ್ಧ ನಡೆಯುತ್ತಲೇ ಇತ್ತು. ಇದೆಲ್ಲದರ ಒಟ್ಟಾರೆ ಪರಿಣಾಮವು ಹಠಾತ್ ರಾಜೀನಾಮೆಯ ನಿರ್ಧಾರ.

ಧನ್‌ಕರ್ ಪರಿಣಾಮಗಳನ್ನು ಲೆಕ್ಕಹಾಕಿ ಮಾತನಾಡುವ ಕೌಶಲ್ಯಕ್ಕಿಂತಲೂ ಮಾತಿನಲ್ಲಿಯೇ ಪರಿಣಾಮಗಳು ಸೃಷ್ಟಿಯಾಗುವಂತೆ ಮಾಡುವ ಕೌಶಲ್ಯದ ಮಾತುಗಾರ. ಯಾಕೆಂದರೆ ಇವರು ವಕೀಲರು. ಹಲವಾರು ಪ್ರಕರಣಗಳಲ್ಲಿ ತಮ್ಮ ವಾದ ಮಂಡನೆಯ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದವರು. ಇದಲ್ಲದೇ ಸಾರ್ವಜನಿಕ ಸಮಾರಂಭಗಳಲ್ಲಿ ಪೂರ್ವಾಪರಗಳನ್ನು ಗುರುತಿಸದೇ ಮಾತನಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದವರೂ ಕೂಡ. ಇವರನ್ನ ಮೂಲಕ ಮಹಾಶಯ ಎಂದು ಗುರುತಿಸುವವರು ಅನೇಕರು. ಸ್ವಯಂಪ್ರಕಾಶದ ವ್ಯಕ್ತಿಯಾಗಿದ್ದರೆ ಎಲ್ಲಾ ಪಕ್ಷಗಳಲ್ಲೂ ಓಡಾಡಿ ಬರಬೇಕಾದ ಅಗತ್ಯವಿರಲಿಲ್ಲ.

ಯಾರಾದರೂ ಊರುಗೋಲಾಗಿ ವರ್ತಿಸಿದರೆ ಆಗ ಮಾತಿನ ಬಾರುಕೋಲಿನಿಂದ ವಿವಾದಗಳನ್ನ ಸೃಷ್ಟಿಸಬಲ್ಲ ಕ್ರಾಂತಿಕಾರಿ. ಜಾಲಿಯ ಮರದ ನೆರಳು ಯಾವುದೇ ಕಾರಣಕ್ಕೆ ನೆರಳಲ್ಲವಂತೆ. ಹಾಗೇನಾದರೂ ನೆರಳಿನ ಆಶ್ರಯ ಪಡೆಯಲು ಹೋದವರಿಗೆ ಮುಳ್ಳೇ ಸ್ವಾಗತ. ಹಾಗೆಯೇ ನೋಡಲು ಮುತ್ತುಗದ ಹೂವು ಬಲು ಚೆಂದ. ಬಣ್ಣಬಣ್ಣಗಳ ಹೊತ್ತ ದೊಡ್ಡ ದಳಗಳು ದೂರದಿಂದಲೇ ಆಕರ್ಷಿಸಿದರೂ ಹತ್ತಿರಕ್ಕೆ ಹೋದರೆ ವಾಸನೆಯೂ ಇಲ್ಲ, ಕಣ್ತೆರೆದು ನೋಡಿದರೆ ರೂಪವೂ ಅಷ್ಟಕ್ಕಷ್ಟೆ. ಅದಷ್ಟೇ ಅಲ್ಲ, ಇದೊಂದು ಅಪಶಕುನದ ಹೂವು ಎಂಬುದು ಗ್ರಾಮೀಣ ಜನರ ನಂಬಿಕೆ.

ರೂಪಕಗಳು ಹಲವಾರು ಬಾರಿ ಸತ್ಯದ ಜೊತೆಗೆ ವರ್ತಮಾನದ ಘಟನಾವಳಿಗಳನ್ನು ಆಕರ್ಷಕವಾಗಿ ಮುಂದಿಡಬಲ್ಲವು. ಧನ್‌ಕರ್ ನಿರ್ಗಮನವನ್ನು ನಿರೀಕ್ಷಿಸಿದಂತೆ ಕಾಣುವ ಬಿಜೆಪಿಯವರು ಉತ್ತರಾಧಿಕಾರಿಯ ಶೋಧ ಕಾರ್ಯದಲ್ಲಿ ಈಗಾಗಲೇ ತೊಡಗಿರುವುದು ಬಿರುಸಿನ ಚಟುವಟಿಕೆಗೆ ಪ್ರೇರಣೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಮಂತ್ರಿ ಜೆ.ಪಿ. ನಡ್ಡಾ ಇಲ್ಲವೇ ಕೇರಳದ ಕಾಂಗ್ರೆಸ್ ಸಂಸದ ಶಶಿತರೂರ್ ಉಪರಾಷ್ಟ್ರಪತಿಯಾಗುವ ಯೋಗ ಪಡೆದವರಂತೆ ಕಾಣುತ್ತಿದ್ದಾರೆ.

ಇವರಲ್ಲಿ ಯೋಗ್ಯತೆಯನ್ನು ಕಂಡುಕೊಳ್ಳುತ್ತಿರುವುದು ಬಿಜೆಪಿ ಹಾಗೂ ಕೇಂದ್ರ ಸರ್ಕಾರ. ರಾಜಕಾರಣದಲ್ಲಿ ಯಾವುದೂ ನೇರವಲ್ಲ. ಎಲ್ಲವೂ ಕಣ್ಣಾಮುಚ್ಚಾಲೆ. ಮೇಲ್ನೋಟಕ್ಕೆ ಈ ಮೂವರು ಹೆಸರು ತೇಲಾಡುತ್ತಿದ್ದರೆ ಅಂತರಂಗದಲ್ಲಿ ಯಾರ ಅದೃಷ್ಟ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಇಷ್ಟಕ್ಕೂ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಮುಂಬರುವ ಚುನಾವಣೆಯ ನಂತರ ಮತ್ತೆ ತಮ್ಮ ನಾಯಕತ್ವ ಮುಂದುವರಿಕೆಗೆ ಈಗಾಗಲೇ ಪಟ್ಟು ಹಿಡಿದಿರುವ ಅಂಶಗಳು ಬಯಲಾಗಿವೆ. ಹೀಗಿರುವಾಗ ಬರಿ ಕೈ ಕ್ಯಾಬಿ ನೈ ಎನ್ನುವಂತಿರುವ ಉಪರಾಷ್ಟ್ರಪತಿ ಸ್ಥಾನವನ್ನು ನಿತೀಶ್ ಯಾವ ಆಕರ್ಷಣೆಯ ಮೇರೆಗೆ ಒಪ್ಪುತ್ತಾರೆ ಎಂಬುದು ನಿಜಕ್ಕೂ ದೊಡ್ಡ ಒಗಟು.

ಉಪರಾಷ್ಟ್ರಪತಿ ಸ್ಥಾನದ ಅವಧಿ ಬಾಕಿ ಉಳಿದಿರುವುದು ಸುಮಾರು ಎರಡು ವರ್ಷ. ಈ ಸ್ಥಾನದಿಂದ ಇಳಿದ ನಂತರ ಸಕ್ರಿಯ ರಾಜಕಾರಣದಲ್ಲಿರುವುದು ಅಪರೂಪ. ಇದೊಂದು ರೀತಿಯ ಶಿಷ್ಟಾಚಾರ. ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಈ ಸ್ಥಾನದ ಅವಕಾಶ ನೀಡಲು ಬಿಜೆಪಿ ಮುಖಂಡರು ಮುಂದೆ ಬಂದಾಗ `ಕೇಂದ್ರಸಚಿವನಾಗಿ ಜನರ ಮಧ್ಯದಲ್ಲಿದ್ದೇನೆ. ಹೀಗಿರುವಾಗ ದ್ವೀಪಕ್ಕೆ ಹೋಗಲು ಆಸಕ್ತಿ ಯಾರಿಗೆ ಬರುತ್ತದೆ. ನನ್ನನ್ನು ಹೀಗೆಯೇ ಇರಲು ಬಿಟ್ಟುಬಿಡಿ’ ಎಂದು ಹೇಳಿದ್ದರಂತೆ. ಆದರೆ ರಾಜಕೀಯ ಅನಿವಾರ್ಯತೆಗಳು ವೆಂಕಯ್ಯನಾಯ್ಡು ಅವರನ್ನು ಉಪರಾಷ್ಟ್ರಪತಿ ಆಗುವಂತೆ ಮಾಡಿದ್ದು ಈಗ ಇತಿಹಾಸ. ಅವರ ಉತ್ತರಾಧಿಕಾರಿಯಾದ ಧನ್‌ಕರ್ ಅವರೂ ಕೂಡ ಮಾದರಿಯೆನ್ನಲಾಗದ ಇತಿಹಾಸವನ್ನು ಹಠಾತ್ ರಾಜೀನಾಮೆಯ ಮೂಲಕ ಸೃಷ್ಟಿಸಿ ನಿರ್ಗಮಿಸಿದ್ದಾರೆ. ಉತ್ತರಾಧಿಕಾರಿಯ ಆಗಮನ ಹಾಗೂ ಧನ್‌ಕರ್ ನಿರ್ಗಮನದ ನಡುವೆ ಸತ್ಯಾನ್ವೇಷಣೆಯ ಹಲವಾರು ಮುಖಗಳಲ್ಲಿ ರಾಜಕೀಯ ಒಳಸುಳಿಗಳು ಹಾಗೂ ತಳಮಳಗಳ ಮಹಾನ್ ಘಟನಾವಳಿಗಳು ಒಂದೊಂದಾಗಿ ಬಿಚ್ಚಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಕಂಡುಬರುತ್ತಿವೆ.

Previous articleಸಂಪಾದಕೀಯ: ಮಹದಾಯಿಗೆ ಬೇಕಿದೆ ಸುಪ್ರೀಂಕೋರ್ಟ್ ಶ್ರೀರಕ್ಷೆ
Next articleಕಾರ್ಗಿಲ್ ವಿಜಯ್ ದಿವಸಕ್ಕೆ 26 ವರ್ಷ

LEAVE A REPLY

Please enter your comment!
Please enter your name here