ಭಾರತದ ಸಾಂಸ್ಕೃತಿಕ ಪರಂಪರೆಯು ಮೌಲ್ಯಗಳು, ಜ್ಞಾನ ಮತ್ತು ಕಾಲಾತೀತ ಬೋಧನೆಗಳಿಂದ ಸಮೃದ್ಧವಾಗಿದೆ. ಇದರ ವೈವಿಧ್ಯಮಯ ಮತ್ತು ವಿಶ್ವಮಾನವ ಆಯಾಮಗಳು ಸಾಮೂಹಿಕ ಪ್ರಜ್ಞೆಯನ್ನು ಆಚರಿಸುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ, ಇದು ಅನೇಕ ಹಬ್ಬಗಳ ಮೂಲಕ ಹೆಚ್ಚು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಈ ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ – ಅವು ಪ್ರಕೃತಿಯ ಲಯದೊಂದಿಗಿನ ನಮ್ಮ ಸಂಬಂಧದ ಜೀವಂತ ಪ್ರತಿಬಿಂಬಗಳಾಗಿವೆ, ವೈಜ್ಞಾನಿಕ ಒಳನೋಟಗಳು ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ಬೆಂಬಲಿತವಾಗಿವೆ. ಗುರು ಪೂರ್ಣಿಮೆಯು ಒಂದು ವಿಶೇಷ ಸಂದರ್ಭವಾಗಿದ್ದು, ನಡೆದಿರುವ ಎಲ್ಲದರ ಬಗ್ಗೆ ಚಿಂತನೆ ನಡೆಸಲು ಮತ್ತು ಆತ್ಮಾವಲೋಕನ ಮಾಡಲು ಅವಕಾಶವಾಗಿದೆ. ಏನು ಬದಲಾಗಿದೆ? ನಾವು ಏನನ್ನು ಮುಂದಕ್ಕೆ ಕೊಂಡೊಯ್ಯುತ್ತಿದೇವೆ ಮತ್ತು ನಾವು ಏನನ್ನು ಬಿಟ್ಟು ಬಂದಿದ್ದೇವೆ? ನಾವು ವೈಯಕ್ತಿಕ ಸಾಮರ್ಥ್ಯ ಮತ್ತು ಸಾಮೂಹಿಕ ಸಾಮರ್ಥ್ಯದಲ್ಲಿ ಎಷ್ಟು ದೂರ ಬಂದಿದ್ದೇವೆ? ಈ ಎಲ್ಲಾ ಹಿಂದು-ಮುಂದಿನ ಚಿಂತನೆಯ ನಡುವೆ, ಈ ಪ್ರಯಾಣದಲ್ಲಿ ಯಾರು ಹೆಚ್ಚು ಆಳವಾದ ಪಾತ್ರವನ್ನು ವಹಿಸಿದರು? ಜೀವನದ ಅಸ್ಥಿರ, ಕೆಸರುಮಯವಾದ, ಜಾರುವ ಮತ್ತು ಪ್ರಕ್ಷುಬ್ಧ ಹಾದಿಯಲ್ಲಿ ನಮ್ಮೊಂದಿಗೆ ಯಾರು ಬಂದರು? ಎಂದು ಕೇಳಿಕೊಳ್ಳಲು ಇದು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಅಂತಹ ಕ್ಷಣಗಳಲ್ಲಿ ಗುರು ಅಥವಾ ಮಾರ್ಗದರ್ಶಿ ಶಕ್ತಿಯ ಪಾತ್ರ – ಅದು ಒಬ್ಬ ವ್ಯಕ್ತಿ, ತತ್ವ ಅಥವಾ ಆಂತರಿಕ ದಿಕ್ಸೂಚಿ ಯಾವುದೇ ಆಗಿರಲಿ – ನಮ್ಮ ಪ್ರಯಾಣದಲ್ಲಿ ಅತ್ಯಂತ ಮಹತ್ವದ ಉಪಸ್ಥಿತಿಯಾಗಿ ಹೊರಹೊಮ್ಮುತ್ತದೆ. ಸಮತೋಲಿತ ಪಯಣಿಗರಾಗಲು ನಮ್ಮನ್ನು ಪೋಷಿಸುವ ಸಮಯ-ಪರೀಕ್ಷಿತ ಮೂಲಭೂತ ಅಂಶಗಳು ಯಾವುವು? ನಮ್ಮ ಅಸ್ತಿತ್ವದ ಎಲ್ಲಾ ವೈವಿಧ್ಯಮಯ ಆಯಾಮಗಳ ನಡುವೆ, ಆಗಾಗ್ಗೆ ಗೋಚರ ಅಥವಾ ಅಗೋಚರ, ಮೂರ್ತ ಅಥವಾ ಅಮೂರ್ತ ಶಕ್ತಿಗಳು – ಅದು ಮಾರ್ಗದರ್ಶಕರ ಕೈಯಾಗಿರಬಹುದು, ದೈವಿಕ ಚಿಂತನೆಯಾಗಿರಬಹುದು, ತಾಯಿಯ ವಾತ್ಸಲ್ಯವಾಗಿರಬಹುದು, ಗುರುವಿನ ಮಾತಾಗಿರಬಹುದು ಅಥವಾ ಸ್ನೇಹಿತನ ನಂಬಿಕೆಯಾಗಿರಬಹುದು – ನಮ್ಮ ಮಾರ್ಗದರ್ಶಕ ಬೆಳಕಾಗುತ್ತವೆ. ಆದ್ದರಿಂದ, ಗುರು ಪೂರ್ಣಿಮೆಯು ನಮ್ಮನ್ನು ಮುನ್ನಡೆಸುವ, ರೂಪಿಸುವ ಮತ್ತು ವಿಕಾಸದ ಹಾದಿಯಲ್ಲಿ ನಮ್ಮೊಂದಿಗೆ ನಡೆಯುವ ಪ್ರತಿಯೊಂದು ಗೋಚರ ಅಥವಾ ಅಗೋಚರ ಅಂಶವನ್ನು ಗೌರವಿಸುವ ಪವಿತ್ರ ಸಂದರ್ಭವಾಗಿದೆ.
ಆಷಾಢ ಮಾಸದ ಈ ಪೂರ್ಣಿಮೆಯು ಆಳವಾದ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಕಾಲೋಚಿತ ಮಹತ್ವವನ್ನು ಹೊಂದಿದೆ, ಏಕೆಂದರೆ ಇದು ಶಿವ (ಆದಿಗುರು) ಸಪ್ತರ್ಷಿಗಳಿಗೆ ಯೋಗದ ಜ್ಞಾನವನ್ನು ನೀಡಿದ ದಿನವಾಗಿದೆ. ಇದು ಮಹರ್ಷಿ ವೇದವ್ಯಾಸರ ಜಯಂತಿಯನ್ನೂ ಸ್ಮರಿಸುತ್ತದೆ. ಹೆಚ್ಚುವರಿಯಾಗಿ, ಇದು ಮಳೆಗಾಲದ ನಾಲ್ಕು ತಿಂಗಳ ಪವಿತ್ರ ಅವಧಿಯಾದ ಚಾತುರ್ಮಾಸದ ಆರಂಭವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಋಷಿಗಳು ಮತ್ತು ಸಂತರು ಒಂದೇ ಸ್ಥಳದಲ್ಲಿದ್ದು ತಮ್ಮ ಶಿಷ್ಯರಿಗೆ ಬೋಧಿಸುತ್ತಾರೆ. ಆಷಾಢ ಪೂರ್ಣಿಮೆಯ ಶಕ್ತಿಯು ಆಂತರಿಕ ಪರಿವರ್ತನೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಸಂಸ್ಕೃತದ “ಗುರು” ಎಂಬ ಪದವು ‘ಗು’ (ಕತ್ತಲೆ) ಮತ್ತು ‘ರು’ (ಕತ್ತಲೆಯನ್ನು ಕಳೆಯುವವರು) ಎಂಬ ಪದಗಳ ಸಂಯೋಜನೆಯಾಗಿದೆ, ಇದರರ್ಥ ಕತ್ತಲೆಯನ್ನು ಹೋಗಲಾಡಿಸುವವರು. ಪ್ರಾಚೀನ ವೈದಿಕ ಸಂಪ್ರದಾಯಗಳಲ್ಲಿ, ಗುರು-ಶಿಷ್ಯ ಪರಂಪರೆಯು ಕಲಿಕೆಯ ಆಧಾರವಾಗಿತ್ತು.
ಗುರು ಪೂರ್ಣಿಮೆಯು ಕಲಿಕೆ, ಜ್ಞಾನ ಮತ್ತು ಕೃತಜ್ಞತೆಯ ಆಚರಣೆಯಾಗಿದೆ. ಮಾಹಿತಿ, ಗೊಂದಲ, ಹೋಲಿಕೆ ಮತ್ತು ಸ್ಪರ್ಧೆಯಿಂದ ತುಂಬಿ ತುಳುಕುತ್ತಿರುವ ಈ ಯುಗದಲ್ಲಿ, ನಿಜವಾದ ಗುರುವಿನ ಮಾರ್ಗದರ್ಶನ – ಅದು ಆಧ್ಯಾತ್ಮಿಕ ಗುರು ಅಥವಾ ತರಬೇತುದಾರ, ಶಿಕ್ಷಕ, ಪೋಷಕರು ಅಥವಾ ಡಿಜಿಟಲ್ ಗುರು ಆಗಿರಬಹುದು – ಧರ್ಮ ಮತ್ತು ಆಚರಣೆಗಳನ್ನು ಮೀರಿ ಇನ್ನಷ್ಟು ಮುಖ್ಯವಾಗುತ್ತದೆ. ೨೧ನೇ ಶತಮಾನದ ಅನಿಶ್ಚಿತ ಕಾಲದಲ್ಲಿ, ಗುರು ಪೂರ್ಣಿಮೆಯ ಸಾರವು ಇಡೀ ಜಗತ್ತಿಗೆ ಅತ್ಯಂತ ಪ್ರಸ್ತುತವಾಗಿದೆ. ನೈತಿಕ ದಿಕ್ಸೂಚಿಯ ಕೊರತೆ, ಸರಿ ಮತ್ತು ತಪುö್ಪಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಅಸಮರ್ಥತೆ, ಉದಯೋನ್ಮುಖ ಸವಾಲುಗಳು ಮತ್ತು ಇತ್ತೀಚಿನ ಸುದ್ದಿಗಳ ಮೂಲಕ ಸಾಮಾಜಿಕ ರಚನೆಯನ್ನು ಅಲುಗಾಡಿಸಿವೆ. ಗುರುವಿನ ಕೇವಲ ನೆರಳು ಸಹ ವ್ಯಕ್ತಿಯನ್ನು ತಪ್ಪು ಹಾದಿಯಲ್ಲಿ ಹೋಗದಂತೆ ತಡೆಯುವ ಶಕ್ತಿಯನ್ನು ಹೊಂದಿದೆ. ನಾವು ಡಿಜಿಟಲ್ ಯುಗಕ್ಕೆ ಕಾಲಿಡುತ್ತಿರುವಾಗ, ಗುರು ಪೂರ್ಣಿಮೆಯ ಕಾಲಾತೀತ ಸಂದೇಶವು ಜ್ಞಾನವನ್ನು ಹುಡುಕಲು, ಆಂತರಿಕ ಮಾರ್ಗದರ್ಶನವನ್ನು ಮರುಶೋಧಿಸಲು, ನಮ್ಮ ಗುರುಗಳನ್ನು ಗೌರವಿಸಲು ಮತ್ತು ಇತರರಿಗೆ ಬೆಳಕಿನ ಮೂಲವಾಗಿರಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಇದು ಮೌಲ್ಯಾಧಾರಿತ ಮಾನವೀಯತೆಯನ್ನು ನಿರ್ಮಿಸಲು ಏಕೈಕ ಮಾರ್ಗವಾಗಿದೆ.