ಮಮಕಾರದ ಸರ್ಕಾರ ಅರಳುವ ನಿರೀಕ್ಷೆ

0
6

ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡ ಮತದಾರ ಈಗ ಯೋಚಿಸುವುದು, ಇನ್ನು ನಾಲ್ಕು ದಿನಗಳಲ್ಲಿ ಎಂತಹ ಸರ್ಕಾರ ಬಂದೀತೆಂಬುದು..!
ಎರಡು ತಿಂಗಳ ಪರ್ಯಂತ ಕರ್ಣ ಕಠೋರ, ಕರ್ಕಶ ಅಬ್ಬರದ, ಫೂತ್ಕಾರದ ಸುರಿಮಳೆಗಳನ್ನು ಕೇಳಿ ಘಾಸಿಗೊಂಡ ಸಾಮಾನ್ಯ ಮತದಾರ ಅನುಭವಿಸಿದ್ದು ಪುಕ್ಕಟೆ ಮನರಂಜನೆ, ಜೊತೆಗೆ ಅಸಹ್ಯ ಹುಟ್ಟಿಸುವಷ್ಟು ಹೊಲಸು ರಾಜಕೀಯ. ಒಂದಿಷ್ಟು ಬೈಗುಳ ಶಬ್ದಗಳನ್ನ!
ತನಗೆ ಸಂಬಂಧವೇ ಇಲ್ಲದ ಅನಗತ್ಯ ವಿವಾದಗಳನ್ನು ಕೇಳಿಯೂ, ಅದರೊಳಗೆ ಸಿಲುಕದ ಮತದಾರ ತನ್ನ ಕರ್ತವ್ಯವವನ್ನು ಇಂದೇನೋ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾನೆ. ಬಹುಶಃ ಮತ ಚಲಾಯಿಸಿ ಬಂದವರ ಭಾವನೆಗಳು ಹತ್ತಾರು ಇರಬಹುದು. ತಾನು ಮತ ನೀಡಿದವನು ಗೆದ್ದಾನೆಯೇ? ಗೆದ್ದ ನಂತರ ಆತ ಏನು ಮಾಡಿಯಾನು? ಗೆಲ್ಲದಿದ್ದರೆ ತನ್ನ ಮತ ವ್ಯರ್ಥವಾಯಿತೇ? ಅಥವಾ ತಾನು ಮತ ನೀಡದವ ಗೆದ್ದು ತನ್ನ ಮೇಲೆ ಹಗೆ ತೀರಿಸಿಯಾನೇ? ಇದು ವೈಯಕ್ತಿಕ ನೆಲೆಯಲ್ಲಿ ತಕ್ಷಣ ಯೋಚಿಸಿದರೂ ಒಟ್ಟಾಭಿಪ್ರಾಯದಲ್ಲಿ ಉತ್ತಮ ಸರ್ಕಾರ, ಉತ್ತಮ ಆಡಳಿತ ಬಯಸುವವರೇ ಎಲ್ಲರೂ.
ಈ ಕ್ಷಣದಲ್ಲಿ ಮೂಡುವುದೇನೆಂದರೆ ಎಂತಹ ಸರ್ಕಾರ ಬಂದೀತು? ಸರ್ಕಾರ ಹೇಗಿದ್ದೀತು' ಎನ್ನುವುದು ಚಾಣಕ್ಯ ತನ್ನ ಅರ್ಥಶಾಸ್ತ್ರದಲ್ಲಿ ಹೇಳುತ್ತಾನೆ.ಪ್ರಜೆಗಳ ಸಂತೋಷದಲ್ಲಿ ರಾಜನ ಸಂತೋಷವಿರಬೇಕು. ಅವರ ಕಲ್ಯಾಣದಲ್ಲಿ ಅವನ ಕಲ್ಯಾಣವಿದೆ.
ತನಿಗಿಷ್ಟವಾದುದನ್ನು ಅವನು ಒಳ್ಳೆಯದೆಂದು ಪರಿಗಣಿಸುವುದಲ್ಲ. ಆದರೆ ತನ್ನ ಪ್ರಜೆಗಳು ಮೆಚ್ಚುವುದು ಒಳ್ಳೆಯದು ಎಂದು ಬಯಸಬೇಕಾಗುತ್ತದೆ’.
ಆಡಳಿತ ಮತ್ತು ಸರ್ಕಾರ ನಡೆಸುವವರಿಗೆ ಇಷ್ಟು ಅದ್ಭುತ ವಾಖ್ಯಾನ ಬಹುಶಃ ಇನ್ನೊಂದಿರಲಿಕ್ಕಿಲ್ಲ. ಇದು ಗೊತ್ತಿಲ್ಲ ಎಂದಲ್ಲ. ಇಂತಹ ಸರ್ಕಾರ ಬರಲಿ ಎನ್ನುವ ಪರಿಕಲ್ಪನೆ- ಆಶಯ ಎಲ್ಲರದ್ದು. ಇದನ್ನೇ ಮಹಾತ್ಮಾ ಗಾಂಧಿ ಸು-ರಾಜ್ (ಅಥವಾ ಸ್ವರಾಜ್ಯ) ಎಂದರು.
ದೇಶ ಕಂಡ ಮಹಾನ್ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಡಿಸೆಂಬರ್ ೨೫ನ್ನು ಸು ಶಾಸನ' ದಿನವನ್ನಾಗಿ ಆಚರಿಸುತ್ತೇವೆ. ನಿಜಕ್ಕೂ ವಾಜಪೇಯಿ ಆಡಳಿತ ಜನಪರ, ಜನಕಲ್ಯಾಣದ, ಜನಸ್ಪಂದನದ್ದಾಗಿತ್ತು. ನಿಜ. ಕರ್ನಾಟಕ ಈ ಮೊದಲಿನಿಂದಲೂ ಉತ್ತಮ ಆಡಳಿತ, ಶಾಂತಿ ಸೌಹಾರ್ದತೆಯ, ಜನಸ್ಪಂದನೆಯ ಧೋರಣೆ ಹೊಂದಿರುವ ಸರ್ಕಾರಗಳನ್ನೇ ನೋಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಂತೂಇದು ನಮ್ಮ ಸರ್ಕಾರ’, ನಮ್ಮ ಮೆಚ್ಚಿನ ಆಡಳಿತ'ವಿದೆ ಎನ್ನುವ ಭಾವನೆ ಜನರಲ್ಲಿ ಮೂಡಿಸಿದ್ದು ಬಹಳ ಕಡಿಮೆ. ಯಾವುದೇ ನೀತಿ ನಿರ್ಧಾರ, ವ್ಯವಹಾರ, ಒಡಂಬಡಿಕೆಗಳೆಲ್ಲವೂ ಒಂದು ಭಾಗ, ಒಂದು ಜಾತಿ, ಒಂದು ಧರ್ಮ, ಒಂದು ಪ್ರದೇಶ ಅಥವಾ ಪರಸ್ಪರ ಅಪನಂಬಿಕೆ ಹುಟ್ಟಿಸುವ, ದ್ವೇಷ ಕಾರುವ, ಇಲ್ಲವೇ ಕನಿಷ್ಠ ಸದಾ ಅಸಮಾಧಾನದ ಮನಸ್ಥಿತಿಯನ್ನು ಜನ ಕಾಣುವಂತಾಗಿದೆ. ಹಾಗಂತ ಜನರೇ ಆರಿಸಿದ ಸರ್ಕಾರವೆನ್ನಿ. ಅಥವಾ ಬಲವಂತವಾಗಿ ಬಂದ ಸರ್ಕಾರವೇ ಎನ್ನಿ. ಇದನ್ನು ಒಪ್ಪಿಕೊಂಡೂ ಅನಿವಾರ್ಯವಾಗಿ ಎನ್ನುವಂತೆ ಈ ಪ್ರದೇಶದ ಮತದಾರ ಬದುಕಿದ್ದಾನೆ. ಹಾಗಂತ ಉತ್ತಮ ಆಡಳಿತವಿದೆ ಎಂದಲ್ಲ. ಈ ಮತದಾನದ ನಂತರ ಕಾಣುವ ಜನರ ಅಪೇಕ್ಷೆ ತುಂಬ ಸರಳವಾಗಿದೆ. ಒಂದು ಸ್ಪಂದನೀಯ ಸರ್ಕಾರ ಬೇಕು. ಗೊಂದಲ ಗೋಜಿಲ್ಲದ ಆಡಳಿತ ನಡೆಯಬೇಕು. ಯಾವುದೇ ವಂಚನೆ, ತಾರತಮ್ಯ, ಕಾಲಹರಣ ಮಾಡುವ ಅಥವಾ ಜನಸಾಮಾನ್ಯರನ್ನು ಅಗೌರವದಿಂದ ಕಾಣುವ ಆಡಳಿತ ಅನಪೇಕ್ಷಿತ ಎನ್ನುವುದಷ್ಟೇ ಮತದಾರ ಪ್ರಭುವಿನ ಅಪೇಕ್ಷೆ. ಎಷ್ಟಿದ್ದರೂ ಮತದಾರ ಇಂದೊಂದೇ ದಿನ ಪ್ರಭು.. ಆತನ ಕೈಗೆ ಮಸಿ ಬಿದ್ದ ನಂತರ ಆತನನ್ನು ಐದು ವರ್ಷ ಕೇಳುವವರಾರು? ಅಲ್ಲವೇ. ಎಷ್ಟು ಸರಳ, ಸುಂದರ ನೋಡಿ. ನಿರ್ಭಾವುಕ ಸರ್ಕಾರ ಬಂದಿದೆಯೇ ಎಂದು ಪ್ರಶ್ನಿಸಿದರೆ,ಏನು ಬೀಜ ಬಿತ್ತಿದ್ದೇವೋ ಅದೇ ಫಲ ದೊರೆಯುತ್ತದಲ್ಲೋ ಹಾಗೇ. ಯಾರನ್ನು ಎಂಥವರನ್ನು, ಆರಿಸಿದ್ದೇವೋ, ಯಾಕಾಗಿ ಆರಿಸಿದ್ದೇವೋ ಅದೇ ಸರ್ಕಾರ ಬರುತ್ತದೆ’ ಎನ್ನುವ ಸರಳ- ಸುಲಭವಾಗಿ ಹೇಳಿ ಬಿಡುತ್ತೇವೆ. ಶಾಸಕರಾಗಬೇಕು, ಮಂತ್ರಿಯಾಗಬೇಕೆಂಬ ಒಂದೇ ಕಾರಣಕ್ಕಾಗಿ ಎಷ್ಟೆಲ್ಲ ಖರ್ಚು ಮಾಡುತ್ತಿರುವುದೇಕೆ ಎನ್ನುವುದನ್ನು ವಿಶ್ಲೇಷಿಸಿದರೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ.
ಕರ್ನಾಟಕ ಕಂಡ ಅತ್ಯಂತ ದರಿದ್ರ ಹಾಗೂ ಎಲ್ಲ ದೃಷ್ಟಿಯಿಂದಲೂ ದಾರಿದ್ರದ ಚುನಾವಣೆಗಳಲ್ಲಿ ಇಂದು ಮುಗಿದ ಚುನಾವಣೆ ಪ್ರಥಮದ್ದಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಯಾವೊಂದು ವಿಷಯವೂ ಜನರಿಗೆ ತಟ್ಟಿಲ್ಲ. ಜನರಿಗೆ ಬೇಕಾದ ವಿಷಯಗಳನ್ನು ಯಾವ ಪಕ್ಷಗಳೂ, ಪ್ರತಿನಿಧಿಗಳು, ಉಮೇದುವಾರರು ಎತ್ತಿಕೊಳ್ಳಲೇ ಇಲ್ಲ. ಇಂದು ಉದ್ಭವವಾದ ವಿಷಯ ನಾಳೆಗೇ ಮಾಯ.
ಅಂತಿಮ ಘಟ್ಟ ತಲುಪಿದ್ದೇ ಇಲ್ಲ. ಎಲ್ಲದಕ್ಕೂ ಉತ್ತರ ಕೊಡಬೇಕಾದಂಥವರು ಏನನ್ನೂ ಉತ್ತರಿಸಲೇ ಇಲ್ಲ! ಒಂದು ಪಕ್ಷ ದೆಹಲಿ ದೊರೆಗಳನ್ನು ತೋರಿಸಿದರೆ, ಇನ್ನೊಂದು ಪಕ್ಷ ಫ್ರೀಬಿಗಳನ್ನು ನಂಬಿಕೊಂಡಿತು. ಪ್ರಾದೇಶಿಕ ಪಕ್ಷದ ಪ್ರದೇಶಾಭಿಮಾನ, ಅಸ್ಮಿತೆ ಒಪ್ಪಿತವಾದರೂ ತನ್ನ ಗಡಿ ದಾಟಿ ಬರಲೇ ಇಲ್ಲ..
ಐದು ವರ್ಷಗಳಲ್ಲಿ ಸರ್ಕಾರಗಳು ಏನು ಮಾಡಿವೆ? ಎಂದು ಸಾಧನೆ ಪಟ್ಟಿ ಇಟ್ಟು ಮತಬೇಡುವವರು ಮಾಡಲಿಲ್ಲ. ಹಾಗೆಯೇ ಕರ್ನಾಟಕವನ್ನು ದೆಹಲಿಯಿಂದಲೇ ನಿಯಂತ್ರಿಸುತ್ತೇವೆ, ನಮಗೆ ಮತ ಕೊಡಿ ಎಂದು ಮೋದಿ ಹಾಗೂ ಕೇಂದ್ರದ ಗಣ್ಯರು ಕೇಳಿದರೆ ವಿನಃ, ಇಲ್ಲಿಯ ಸಮಸ್ಯೆಗಳು, ಜನರ ಬೇಡಿಕೆಗಳು, ಬವಣೆಗಳು, ಯಾವವನ್ನೂ ಜವಾಬ್ದಾರಿ ವ್ಯಕ್ತಿಗಳು ಕೇಳಲೂ ಇಲ್ಲ. ಸ್ಪಂದಿಸಲೂ ಇಲ್ಲ.
ನೀರಾವರಿ, ಬರ, ನೆರೆ, ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸಮಸ್ಯೆ ಈ ಯಾವುದಕ್ಕೂ ಮತಯಾಚಿಸಲು ಬಂದ ಪ್ರಧಾನಿಗಳಿಂದ ಪರಿಹಾರವೇ ದೊರಕಿಲ್ಲ. ಸ್ಥಳೀಯರು ತಮ್ಮ ಆಡಳಿತದಲ್ಲಿ ಏನೆಲ್ಲ ಮಾಡಿದ್ದೇವೆಂದು ಪುಂಖಾನುಪುಂಖ ಸುಳ್ಳು ಬೊಗಳೆ ಬಿಟ್ಟರೇ ವಿನಾ ಜನರ ಮುಂದೆ ಸ್ಪಂದಿಸಲಿಲ್ಲ. ಆಡಳಿತ ವಿರೋಧಿ ಅಲೆಯನ್ನೇ ನೆಚ್ಚಿಕೊಂಡಿರುವ ಪ್ರತಿಪಕ್ಷಗಳು ನಾವೇ ಆಡಳಿತಕ್ಕೆ ಬಂದೇ ಬರುತ್ತೇವೆ ಎನ್ನುತ್ತ, ಸಮರ್ಥವಾಗಿ ಜನರಿಗೆ ಸ್ಪಂದಿಸುವ ಬದಲು ಫ್ರೀಬಿಗಳನ್ನು ನೆಚ್ಚಿಕೊಂಡವು.
ಅನಪೇಕ್ಷಿತ ಮೀಸಲಾತಿ, ಭಜರಂಗದಳ ನಿಷೇಧ, ಜಾತಿ ಧರ್ಮದ ನಡುವಿನ ಭಾವನಾತ್ಮಕ ವಿಷಯಗಳು ಮುನ್ನೆಲೆಯಲ್ಲಿ ಬಂದು ಜನ ಅನುಭವಿಸಿದ ಭ್ರಷ್ಟತೆ, ಬೆಲೆ ಏರಿಕೆ, ಗೋಳಾಟಗಳು ಹಿನ್ನಡೆಗೆ ! ಈಗ ಜನ ಅಪೇಕ್ಷಿಸುತ್ತಿರುವುದು ಸಂವೇದನಾಶೀಲ, ಜನಪರ ಧೋರಣೆಯ, ಉತ್ತಮ ಬದುಕು ನೀಡುವ, ಉತ್ತಮ ವಾತಾವರಣ ಕಲ್ಪಿಸುವ ಸರ್ಕಾರವನ್ನು. ನೀರು, ಗಾಳಿ, ನೆಲ, ಹೋರಾಟದ ಈ ನೆಲದಲ್ಲಿ ಜನತೆಗೆ ಜೀವದ ಬದ್ಧತೆ ಬೇಕಾಗಿದೆ. ಸರ್ಕಾರಿ ಕೆಲಸಕ್ಕೆ ತನ್ನ ಭೂ ದಾಖಲೆ, ತೆರಿಗೆ ಸೌಲಭ್ಯ ಪಡೆಯಲು ಸರ್ಕಾರಿ ಕಚೇರಿಗೆ ಹೋದರೆ ಕನಿಷ್ಟ ಗೌರವದ ಮತ್ತು ಭ್ರಷ್ಟಾಚಾರರಹಿತ ಸ್ಪಂದನೆ ನೀಡುವ ಸರ್ಕಾರ ಬೇಕಾಗಿದೆ.
ಹಳ್ಳಿಗಳು ನಾಶವಾಗಿ ನಗರಗಳೆಲ್ಲ ಬೃಹದಾಕಾರದಲ್ಲಿ ಬೆಳೆಯುತ್ತಿರುವಾಗ ಗ್ರಾಮೀಣ ಜನರ ಬದುಕು ಹಸನಗೊಳಿಸುವ ಸರ್ಕಾರ ಬೇಕಾಗಿದೆ. ಗ್ರಾಮಾಂತರದಲ್ಲಿ ಉದ್ಯೋಗವಿಲ್ಲದೇ ನಗರಕ್ಕೆ ಅಲೆದಾಡುವವರಿಗೆ, ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ವಾತಾವರಣ, ಯೋಜನೆಗಳು ಬೇಕಾಗಿವೆ. ಊರಲ್ಲಿ ಎಲ್ಲ ಜನಾಂಗ, ಧರ್ಮಗಳ ಜನ ಒಟ್ಟಾಗಿ, ಸೌಹಾರ್ದಯುತವಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕಾಗಿದೆ. ರಾಗ- ದ್ವೇಷ, ಹಿಂಸೆ, ವೈಷಮ್ಯದ ಮನಸ್ಥಿತಿ ಇಂಥ ನಕಾರಾತ್ಮಕ ಅಂಶಗಳನ್ನು ಪ್ರೋತ್ಸಾಹಿಸದಿರುವ ಸರ್ಕಾರ ಬೇಕಾಗಿದೆ. ಬಂಡವಾಳಶಾಹಿಗಳ, ಮಾಫಿಯಾಗಳ, ಬಡ ಜನರ ಬದುಕಿನೊಂದಿಗೆ ಅಟ್ಟಹಾಸಗೈಯುವ, ದುಷ್ಚಟಗಳ ದಾಸರಾಗಿಸುವವರಿಂದ ಮುಕ್ತಿ ಬೇಕಾಗಿದೆ. ನಾಶಗೊಂಡ ವ್ಯವಸ್ಥೆಯ ಪುನುತ್ಥಾನವಾಗಬೇಕಾಗಿದೆ. ವಿಧಾನಸೌಧ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಗ್ರಾಮಕ್ಕೆ ಬರಬೇಕಾಗಿದೆ. ಒಂದು ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಆಡಳಿತ ವ್ಯವಸ್ಥೆ ಪುನರುತ್ಥಾನವಾಗಬೇಕಾಗಿದೆ (ಚುನಾವಣೆ ನಡೆಸದೇ ನಾಲ್ಕು ವರ್ಷಗಳಾದವು !).
ಟ್ರಿಬಲ್ ಮಿಲಿಯನ್ ಸರ್ಕಾರ, ಮೂರು ಲಕ್ಷ ಕೋಟಿ ರೂಪಾಯಿ ಬಜೆಟ್ ಎಂದೆಲ್ಲ ಬಿಂಬಿಸುವ ಸರ್ಕಾg ಹಾಗು ಆಳುವ ಪ್ರಭುಗಳಿಗೆ ಜನಸಾಮಾನ್ಯರ ಜೇಬಲ್ಲಿ ರೊಕ್ಕವಿಲ್ಲ; ಉತ್ಪಾದನೆಗೆ ಬೆಲೆಯಿಲ್ಲ; ಬೆವರಿಗೆ ಮೌಲ್ಯವಿಲ್ಲ ಎನ್ನುವುದು ಅರ್ಥವಾಗಬೇಕಾಗಿದೆ.
ಇಂತಹ ಸ್ಥಿತಿಯಲ್ಲಿ ಎಲ್ಲರ ಬದುಕಿಗೆ ಘನತೆ- ಗೌರವ ನೀಡುವ ಸರ್ಕಾರ ಬೇಕಾಗಿದೆ. ಇನ್ನೇನು ಎರಡು ದಿನಗಳಲ್ಲಿ ನಮ್ಮ ಹೊಸ ಪ್ರತಿನಿಧಿಗಳು ಆಯ್ಕೆಯಾಗಲಿದ್ದಾರೆ. ನೀಡಬಲ್ಲಿರಾ ಇವೆಲ್ಲವನ್ನು?
ಯಾರಿಗೆ ಬಂತು ಸ್ವಾತಂತ್ರ್ಯ ಎನ್ನುವಂತೆ ಯಾರಿಗೆ ಬೇಕು ಸರ್ಕಾರ ಎನ್ನುವ ಮನೋಭಾವ ಹೋಗಲಾಡಿಸುವ ಆಡಳಿತ ನೀಡುವ ಸರ್ಕಾರವೊಂದು ಬೇಕಾಗಿದೆ.

Previous article‘ಎಕ್ಸಿಟ್ ಪೋಲ್’ ಲೆಕ್ಕಾಚಾರ ಉಲ್ಟಾ ಬಿಜೆಪಿಗೆ ಸ್ಪಷ್ಟ ಬಹುಮತ: ಸಿಎಂ ವಿಶ್ವಾಸ
Next articleವೇಷಕ್ಕೆ ಯಾರೂ ಮರುಳಾಗದಿರಿ