ಮೂರು ತಲೆಮಾರು. ಸರಿಸಾವಿರ ಹತ್ತು ಸಾವಿರ ಕುಟುಂಬ. ಆರವತ್ತು ಸಾವಿರ ಮಂದಿ. ಆರೂವರೆ ದಶಕಗಳ ಕಾಲ ಬದುಕಿನ ಉದ್ದಕ್ಕೂ ಅನಿಶ್ಚಿತತೆ, ಆತಂಕ, ಅತಂತ್ರಗಳ ನಡುವೆ ಜೀವನ ಸಾಗಿಸಿದ ಒಂದು ಕಣ್ಣಿರ ಕಥೆ.
ಬಹುಶಃ ಸ್ವಾತಂತ್ರ್ಯ ನಂತರ ದೇಶದ ಅತಿ ಸುದೀರ್ಘ ಕಾಲ ಅಮಾನವೀಯ ಘಟನೆಗೆ ಶರಾವತಿ ತಪ್ಪಲಿನ ಮಕ್ಕಳು ಸಾಕ್ಷಿಯಾಗಿದ್ದಾರೆ.
ಆರೂವರೆ ದಶಕಗಳ ಹಿಂದೆ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಶತಮಾನಗಳ ಕಾಲದ ಪೂರ್ವಾರ್ಜಿತ ಭೂಮಿ, ತೋಟ, ಪಟ್ಟಿ, ಮನೆಗಳೆಲ್ಲವನ್ನೂ ತ್ಯಾಗ ಮಾಡಿದವರ ಬದುಕು ಇಂದು ಜೀವಚ್ಛವವಾಗಿದೆ. ಮೂರು ತಲೆಮಾರಿನವರೆಗೂ ಕಣ್ಣೀರು ಕಪಾಲಕ್ಕೆ ಇಳಿಯುವ ಸ್ಥಿತಿ. ಬಹುಶಃ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಮತ್ತು ಕಾರ್ಯಾಂಗದ ಇಚ್ಛಾಶಕ್ತಿ ಕೊರತೆಗೆ ಒಂದು ಉದಾಹರಣೆ ಬೇಕೆಂದರೆ ಶರಾವತಿ ಸಂತ್ರಸ್ತರ ಬದುಕು ಬವಣೆ!
ಮೊನ್ನೆ ಮೊನ್ನೆ ಮತ್ತೆ ಈ ಹತ್ತು ಸಾವಿರ ಕುಟುಂಬಗಳನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ದಳ್ಳುರಿಗೆ ನೂಕಿದೆ. ಅವರಿಗೆ ಈ ಹಿಂದೆ ನೀಡಲಾಗಿದ್ದ ಭೂಮಿ ಹಕ್ಕುಪತ್ರವನ್ನು ಕಸಿದುಕೊಂಡು ಅವರಿಗೆಲ್ಲ ತಾವು ಇರುವ ಭೂಮಿಯೇ ಬಾಯ್ದೆರೆದು ನುಂಗುವ ಸ್ಥಿತಿಗೆ ತಂದಿಟ್ಟಿದೆ.ನಿಮ್ಮೊಟ್ಟಿಗೆ ನಾವಿದ್ದೇವೆ. ನಿಮ್ಮ ತ್ಯಾಗಕ್ಕೆ ಬೆಲೆಯಿದೆ. ನಿಮ್ಮ ಸಂರಕ್ಷಣೆ ನಮ್ಮದು'. ಹೀಗೆಂದು ಆರು ದಶಕಗಳಿಂದ ಎಲ್ಲ ಸರ್ಕಾರಗಳು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೇಳುತ್ತಲೇ ಬಂದಿದ್ದಾರೆ. ಆ ಮುಗ್ಧ ಜನರು ನಂಬಿದರು. ಶರಾವತಿ ಯೋಜನೆಗೆ ಆಣೆಕಟ್ಟು ಕಟ್ಟುವಾಗ ಆ ಭಾಗದಲ್ಲಿ ನೆಲೆಸಿದ್ದ ಸುಮಾರು ಹತ್ತು ಸಾವಿರ ಕುಟುಂಬಗಳನ್ನು ಅದೇ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಪುನರ್ವಸತಿ ಕಲ್ಪಿಸಿ, ಅವರ ಬದುಕಿಗನುಗುಣವಾಗಿ ಕೃಷಿ ಯೋಗ್ಯ ಅರಣ್ಯ ಭೂಮಿಯನ್ನು ನೀಡಲಾಗಿತ್ತು.
ರಾಷ್ಟ್ರಕ್ಕಾಗಿ ತ್ಯಾಗ ಮಾಡಿ ‘ನಿಮ್ಮ ಬದುಕು ಇನ್ನಷ್ಟು ಉಜ್ವಲಗೊಳಿಸುವ ಜವಾಬ್ದಾರಿ ನಮ್ಮದು ಎಂದು ಎಂದು ಇಡೀ ಸರ್ಕಾರ, ಅಂದಿನ ಮುಖ್ಯಮಂತ್ರಿ ಸೇರಿ ಎಲ್ಲರೂ ಮನವಿ ಮಾಡಿಕೊಂಡರು. ಹಾಗಾಗಿ ನೆಲೆ ಬಿಟ್ಟವರು ಇವರು. ದುರಂತ ಇಂದಿಗೂ ನೆಲೆ ದೊರೆಯದಂತಾಗಿದೆ.
ಪ್ರಕರಣ ಇಷ್ಟೇ. ಎಲ್ಲ ಕುಟುಂಬಗಳಿಗೆ ಅರಣ್ಯ ಇಲಾಖೆ ವ್ಯಾಪ್ತಿಯ ಕೃಷಿ ಯೋಗ್ಯ ಭೂಮಿಯನ್ನು ಅವರ ಮೂಲ ಜಮೀನಿನ ಅನುಗುಣವಾಗಿ ನೀಡಲಾಗಿತ್ತು. ತೀರ್ಥಹಳ್ಳಿ, ಸಾಗರ, ಸಿದ್ದಾಪುರ, ಯಲ್ಲಾಪುರ, ಸೊರಬ ಇತ್ಯಾದಿ ಕಡೆ. ಭೂಮಿ ಅರಣ್ಯ ಇಲಾಖೆಯದ್ದು. ಅದನ್ನು ಸಂತ್ರಸ್ತರಿಗೆ ನೀಡಿದ್ದು ರಾಜ್ಯ ಸರ್ಕಾರ. ಅಂದು ನೋಟಿಫಿಕೇಷನ್ ಮಾಡಿ ಜಂಟಿ ಸರ್ವೇ ಮಾಡಿ ಇಲ್ಲಿ ನಿಮ್ಮ ಬದುಕು ಕಟ್ಟಿಕೊಳ್ಳಿ ಎಂದು ತೋರಿಸಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು.
ಅಂತೂ ಪರಿಹಾರ, ಪುನರ್ವಸತಿ ಜೊತೆ ತಮ್ಮ ರಟ್ಟೆ ಗಟ್ಟಿ ಇರುವುದರಿಂದ ಅಲ್ಲಿ ತೋಟ, ಹೊಲ, ಗದ್ದೆಗಳೊಂದಿಗೆ ಮರು ಬದುಕು ಸೃಷ್ಟಿಸಿಕೊಂಡಿದ್ದರಿವರು. ಒಕ್ಕಲೆಬ್ಬಿಸಿ ಬೇರೆಡೆ ಸ್ಥಳಾಂತರಿಸಿದ ಸರ್ಕಾರ ಅವರಿಗೆ ನೀಡಿದ ಭೂಮಿಯನ್ನು ಅವರವರ ಭೂದಾಖಲೆಗಳಲ್ಲಿ ಸೇರಿಸಿ ಅಂದೇ ಆರ್‌ಟಿಸಿ ಕೊಟ್ಟು ಮಂಜೂರಾತಿ ಮಾಡಿದ್ದರೆ ಬಹುಶಃ ಇವ್ಯಾವ ಗೊಂದಲಗಳೂ ಏಳುತ್ತಿರಲಿಲ್ಲ.
ಹಾಗಂತ ಜನ ಕೇಳುತ್ತಲೇ ಇದ್ದರು. ನಮ್ಮ ಹೆಸರಿಗೆ ಭೂ ದಾಖಲೆ ಕೊಡಿ. ಅತಿಕ್ರಮಣದಾರರು' ಎಂಬ ಹಣೆಪಟ್ಟಿ ಬೇಡ ಎಂಬ ಕೋರಿಕೆ. ನಿಶ್ಚಿಂತೆಯಿಂದಿರಿ ಎಂದು ಮೂಗಿಗೆ ತುಪ್ಪ ಸವರಲಾಯಿತು. ಕಾನೂನು ಪ್ರಕಾರ ಒಂಬತ್ತು ವರ್ಷದ ನಂತರ ಭೂ ದಾಖಲೆಯಲ್ಲಿ ಸಂತ್ರಸ್ತರ ಹೆಸರು ಸೇರ್ಪಡೆ ಆಗಬೇಕಿತ್ತು. ಆದರೆ ಶಾನುಭೋಗನಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಬೆನ್ನು ಬಿದ್ದರೂ ಈ ನತದೃಷ್ಟರಿಗೆ ಪ್ರಯೋಜನವಾಗಲಿಲ್ಲ. ನಂತರ ಅಷ್ಟರಲ್ಲೇ ಬಂದದ್ದು ಅರಣ್ಯ ಸಂರಕ್ಷಣಾ ಕಾಯ್ದೆ. ೧೯೭೮ರ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ರಾಜ್ಯ- ಕೇಂದ್ರ ಸರ್ಕಾರಗಳು ಒಪ್ಪಿಕೊಂಡು, ಒಂದು ಎಕರೆ ಅರಣ್ಯ ಭೂಮಿಯನ್ನೂ ಪುನರ್ವಸತಿ, ಅತಿಕ್ರಮಣ ಸೇರಿದಂತೆ ಡಿನೋಟಿಫಿಕೇಷನ್ ಮಾಡದಿರಲು ತೀರ್ಮಾನಕ್ಕೆ ಬಂದವು. ಈಗ ಅದೇ ಇವರೆಲ್ಲರಿಗೂ ಕೂಡ ವಿಷಪ್ರಾಸನವಾದಂತಾಗಿದೆ. ೧೯೭೮ರ ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಒಪ್ಪಿಕೊಳ್ಳುವ ಪೂರ್ವ ಸಂತ್ರಸ್ತರಿಗೆ ಮತ್ತು ಕೃಷಿ ಅತಿಕ್ರಮಣದಾರರ ಭೂಮಿ ಭೂ ದಾಖಲೆಯಲ್ಲಿ ಅವರ ಹೆಸರು ನಮೂದಿಸಿ, ಕಾಯ್ದೆ ವ್ಯಾಪ್ತಿಗೆ ಬರದಂತೆ ದಾಖಲೆಗಳನ್ನು ಸೃಜಿಸಿ, ಅರಣ್ಯ-ಕಂದಾಯ ಸೆಟ್ಲ್ಮೆಂಟ್ ಮಾಡಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ ಎಂದು ಅರಣ್ಯ ಸಂರಕ್ಷಣೆ ಕಾಯ್ದೆ ಅಂಗೀಕಾರವಾಯಿತೋ ಅಂದೇ ಈ ಸಂತ್ರಸ್ತರನ್ನು ಬೆಂಕಿಗೆ ನೂಕಿದಂತಾಯಿತು. ಆ ನಂತರ ಬಂದ ಸರ್ಕಾರಗಳಿಗೆ ಸಂತ್ರಸ್ತರು ಗೋಗರೆದರೂ ಇದಕ್ಕೆ ಪರಿಹಾರ ದೊರೆಯಲಿಲ್ಲ. ಇಷ್ಟಿದ್ದೂ ತೀವ್ರ ಒತ್ತಡದ ನಂತರ ರಾಜ್ಯ ಸರ್ಕಾರ (೫೧) ನೋಟಿಫಿಕೇಷನ್ ಮುಖಾಂತರ ಸಂತ್ರಸ್ತರಿರುವ ಭೂಮಿಯನ್ನು ಡಿನೋಟಿಫೈ ಮಾಡಿದರೂ ಅದು ಈಗ ಹಸಿರು ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕೃತಗೊಂಡಿದೆ. ಇದರನ್ವಯ ರಾಜ್ಯ ಸರ್ಕಾರ ರಾಜ್ಯ ಗೆಜೆಟ್‌ನಲ್ಲಿ ಎಲ್ಲ ೫೧ ನೋಟಿಫಿಕೇಷನ್ ರದ್ದುಗೊಳಿಸಿಬಿಟ್ಟಿತು! ಮೊನ್ನೆ ಚುನಾವಣೆ ಪೂರ್ವ ರಾಜ್ಯ ಸರ್ಕಾರಕ್ಕೆ ಈ ಭೂಮಿಯನ್ನು ಮಂಜೂರು ಮಾಡುವ ಹಕ್ಕಿಲ್ಲ ಎಂದು ಘೋಷಣೆ ಬಂದ ಕ್ಷಣದಲ್ಲಿ ಸಂಸದರು, ಮುಖ್ಯಮಂತ್ರಿಗಳು, ಶಾಸಕರು ಸಂತ್ರಸ್ತರ ಮುಂದೆ ಮತ್ತೆ ಮಂಡಿಯೂರಿ ಕಣ್ಣೊರೆಸುವ ತಂತ್ರ ಮಾಡಿದರು. ಅದೇ ಸಂಸತ್ತಿನಲ್ಲೂ ಪ್ರತಿಧ್ವನಿಸಿತು. ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯಾಯಿತು. ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಹಿಂದಿನ ಇಂದಿನ ಸರ್ಕಾರಗಳ ವೈಫಲ್ಯಗಳನ್ನು, ಕಾನೂನು ತೊಡಕುಗಳನ್ನು ಬಿಚ್ಚಿಟ್ಟರು. ಪರಿಹಾರವನ್ನೂ ಸೂಚಿಸಿದರು. ಕೇಂದ್ರದಿಂದಲೇ ಡಿನೋಟಿಫೈ ಮಾಡಿಸಿ ಎಂದು ಸಲಹೆ ನೀಡಿದರು. ಸಂಸದರು ಸಂಸತ್ತಿನಲ್ಲಿ ಮತ್ತು ಕೇಂದ್ರ ಅರಣ್ಯ ಸಚಿವಾಲಯದ ಮುಂದೆ ಮನವಿ ಮಾಡಿಕೊಂಡರು. ಪ್ರಚಾರಕ್ಕೆ ಬಂದವರು
ಡಬಲ್ ಇಂಜಿನ್ ಸರ್ಕಾರ’ವಿದೆ. ಈ ಸಮಸ್ಯೆ ಬಗೆಹರಿಸುತ್ತೇವೆ ಎಂದು ಕೊಚ್ಚಿಕೊಂಡರು. ಕಡತ ತೆರೆಯಲೇ ಇಲ್ಲ. ಪರಿಹಾರ ಕಾಣಲಿಲ್ಲ. ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದ ಇಪ್ಪತ್ತು ದಿನಗಳ ನಂತರ ಕೇಂದ್ರ ಪರಿಸರ ಸಚಿವಾಲಯ ಸಂತ್ರಸ್ತರ ಮನವಿಯನ್ನು ತಿರಸ್ಕರಿಸಿದೆ!
ಅಂದರೆ ಪರಿಣಾಮ, ೧೯೬೯ರಲ್ಲಿ ಅಂದು ಮುತ್ತಜ್ಜ ಜಮೀನು ಕಳೆದುಕೊಂಡು ಸರ್ವಸ್ವ ತ್ಯಾಗ ಮಾಡಿ ಭೂಮಿ ನೆಲೆಯಿಲ್ಲದೆ ಹೇಗೆ ಹೊರ ಬಿದ್ದನೋ, ಇಂದು ಆತನ ಮೊಮ್ಮಗ ಕೂಡ ಅದೇ ಸ್ಥಿತಿಗೆ ಬಂದಂತಾಗಿದೆ.
ಸದ್ಯ ಸಿಗಂದೂರು ಕ್ಷೇತ್ರದ ದೇವಸ್ಥಾನದ ಧರ್ಮದರ್ಶಿಡಾ. ಎಸ್ ರಾಮಪ್ಪ ಅವರು ಈ ತ್ಯಾಗಿಗಳನ್ನು ಒಕ್ಕಲೆಬ್ಬಿಸಬೇಡಿ, ರಾಜ್ಯ ಸರ್ಕಾರ ೫೬ ನೋಟಿಫಿಕೇಷನ್ ರದ್ದುಗೊಳಿಸಿದ್ದು ಸಂತ್ರಸ್ತರನ್ನು ಸಂಕಷ್ಟಕ್ಕೀಡು ಮಾಡಿದಂತಾಗಿದೆ ಎಂದು ಹೈಕೋರ್ಟಿನಲ್ಲಿ ಪ್ರಶ್ನಿಸಿ ತಡೆಯಾಜ್ಙೆ ತಂದು ಇದ್ದ ನೆಲೆಯಲ್ಲಿ ಉಳಿಸಿದ್ದಾರೆ.
ಈಗ ಎದ್ದಿರುವ ಪ್ರಶ್ನೆ ದೇಶಕ್ಕಾಗಿ, ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ಸಂತ್ರಸ್ತರ ಬವಣೆ ಹೀಗಾದರೆ ಯಾರಿಗಾಗಿ, ಏತಕ್ಕಾಗಿ ಸರ್ಕಾರಗಳ ಭರವಸೆ ಕುರಿತು ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎಂಬುದು. ಶರಾವತಿ ಸಂತ್ರಸ್ತರದ್ದೊಂದೇ ಅಲ್ಲ. ವಾರಾಹಿ, ಚಕ್ರಾ, ಕದ್ರಾ, ಕೊಡಸಳ್ಳಿ, ಕಾಳಿ, ಆಲಮಟ್ಟಿ ಎಲ್ಲ ಸಂತ್ರಸ್ತರ ಬದುಕೂ ಇದೇ ಸ್ಥಿತಿಯಲ್ಲಿದೆ. ಯಾರಿಗೆ ಸರ್ಕಾರ ಅರಣ್ಯ ಭೂಮಿಯನ್ನು ನೀವಿಲ್ಲಿ ಮನೆ ಕಟ್ಟಿಕೊಳ್ಳಿ, ಬದುಕು ಸಾಗಿಸಿ ಎಂದು ಕೊಟ್ಟಿತು, ಯಾವ ಪೂರ್ವಾನ್ವಯ ಇಲ್ಲದೇ, ಚಿಂತನೆ ಇಲ್ಲದೇ, ಪೂರ್ವಾಪರ ಚರ್ಚೆ ಇಲ್ಲದೇ, ಇಚ್ಛಾಶಕ್ತಿ ಇಲ್ಲದೇ ಬದುಕು ನೀಡೀತೋ ಅದೇ ಸರ್ಕಾರದ ಧೋರಣೆ ನಂಬಿ ಜನ ಈಗ ಅತಂತ್ರರಾಗಿದ್ದಾರೆ. ಭವಿಷ್ಯತ್ತಿನ ನಂಬಿಕೆ ಕಳೆದುಕೊಂಡಿದ್ದಾರೆ.
ನಿಜ. ೧೯೭೮ರ ಪೂರ್ವ ಅಂದೇ ಭೂದಾಖಲೆ ಸರಿಪಡಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆಯ್ತು. ಆ ನಂತರವಾದರೂ ನಮ್ಮದು ಪ್ರಜಾಪ್ರಭುತ್ವದ ಸರ್ಕಾರ. ಜನರ ಅಹವಾಲನ್ನು ಕೇಳಿ ಸರಿಪಡಿಸಬೇಕಾದದ್ದು ಆ ಕಾಲದಿಂದ ಈ ಕಾಲದವರೆಗಿನ ಸರ್ಕಾರಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿತ್ತಲ್ಲವೇ? ಹತ್ತು ಸಾವಿರ ಕುಟುಂಬಗಳ ಬದುಕಿನಲ್ಲಿ ಶರಾವತಿ ಆರು ದಶಕಗಳ ಕಾಲ ಕಣ್ಣೀರು ಹರಿಸಿದ್ದಾಳೆ.
ಶರಾವತಿ ಜನರ ಕಣ್ಣೀರ ಕಥೆಯನ್ನು ಹಿರಿಯ ಸಾಹಿತಿ, ವಿದ್ವಾಂಸ ನಾ.ಡಿಸೋಜ `ಮುಳುಗಡೆ’ ಕಾದಂಬರಿ ಕಟ್ಟಿಕೊಟ್ಟಿದೆ. ಅದು ಸಿನೆಮಾ ಆಗಿದೆ. ಸಿನೆಮಾ ನೋಡಿದವರೆಲ್ಲ ಅಬ್ಬಾ ಎಂತಹ ದಯನೀಯ ಸ್ಥಿತಿ, ಸಂಕಷ್ಟದ ಪರಿಸ್ಥಿತಿ ಎಂದು ಮರುಕಪಡುತ್ತಾರೆ. ಆದರೇನು? ಈ ಜನರ ತ್ಯಾಗದಿಂದ ವಿದ್ಯುತ್ ಬಳಸಿ, ಐಷಾರಾಮಿ ಜೀವನ ನಡೆಸುವ ಮಂದಿಗೆ ನಾವಿರುವುದು ಅವರ ತ್ಯಾಗದಿಂದ ಎನ್ನುವ ಪರಿಕಲ್ಪನೆ ಇದ್ದಿದ್ದರೆ ಬಹುಶಃ ಈ ಯಾವ ಸಮಸ್ಯೆಗಳೂ ಇರುತ್ತಿರಲಿಲ್ಲ. ಮೂರು ತಲೆಮಾರಿನ ಜನ ಈ ಸರ್ಕಾರದ ಭರವಸೆಯನ್ನು ನಂಬಿ ಬದುಕಿದರಲ್ಲ. ನ್ಯಾಯಾಂಗ, ಕಾರ್ಯಾಂಗ ಯಾವುವೂ ಅವರ ರಕ್ಷಣೆಗೆ ಬಂದಿಲ್ಲವಲ್ಲ, ಇದು ದೊಡ್ಡ ದುರಂತ. ವಿಧಾನಸೌಧದಲ್ಲಿ ಎ.ಸಿ, ಫ್ಯಾನ್ ತಿರುಗುತ್ತಿದ್ದರೆ, ಬೆಳಕು ನಿಚ್ಚಳವಾಗಿದ್ದರೆ ಅದಕ್ಕೆ ಕಾರಣ ಇಂತವರ ತ್ಯಾಗ.
ಶಿವಮೊಗ್ಗ ಶಾಂತವೇರಿ ಗೋಪಾಲಗೌಡರ ಊರು. ಸಮಾಜವಾದಿಗಳ ನೆಲೆ. ಹೋರಾಟದ ಭೂಮಿ. ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಅವರಂತಹ ಘಟಾನುಘಟಿ ರಾಜಕಾರಣಿಗಳು ನಾಲ್ಕು ದಶಕಗಳ ಕಾಲ ಇಡೀ ರಾಜ್ಯ ರಾಜಕಾರಣದ ಕೇಂದ್ರ ಬಿಂದುಗಳು. ಅಂತಹ ನೆಲದಲ್ಲಿ ಅಲ್ಲಿನ ಸಂತ್ರಸ್ತರ ಬದುಕು ಈ ಸ್ಥಿತಿಗೆ ಬಂದಿದೆ ಎಂದರೆ, ಧ್ವನಿ ಇಲ್ಲದವರ ಕಥೆ ಏನಾದೀತು?
ಈಗ ಚುನಾವಣೆ ಮುಗಿಯಿತು. ಬಹುಶಃ ಮುಂದಿನ ಚುನಾವಣೆಯವರೆಗೆ ಇದೇ ಸ್ಥಿತಿ ಮುಂದುವರಿದೀತು? ಆರವತ್ತು ವರ್ಷಗಳವರೆಗೆ ಜನ ಅನಿಶ್ಚಿತ ಬದುಕು ಸಾಗಿಸುತ್ತಿದ್ದರೆ, ಇನೈದು ವರ್ಷ ಹೀಗೆಯೇ ಮುಂದೂಡುತ್ತಾರೆ. ಮತ್ತೆ ಮತ್ತೆ ಚುನಾವಣೆ ಬಂದಾಗ ಇವರೆಲ್ಲ ನೆನಪಾಗುತ್ತಾರೆ. ಮತ್ತೆ ಅದೇ ಹಳೇ ಕಥೆ. ಇದು ಪ್ರಜಾಪ್ರಭುತ್ವದ, ಜನರಿಂದಲೇ,
ಜನರಿಗಾಗಿ, ಜನರಿಗೋಸ್ಕರ ಇರುವ ಸರ್ಕಾರದ ವೈಫಲ್ಯವೋ, ಅಣುಕವೋ, ಅಪಹಾಸ್ಯವೋ, ಒಟ್ಟಲ್ಲಿ ಸಂತ್ರಸ್ತರ ತ್ಯಾಗಕ್ಕೆಲ್ಲಿದೆ ಬೆಲೆ?