ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ 8 ವರ್ಷಗಳ ಬಳಿಕ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆಯನ್ನು ಮಾಡಲು ತೀರ್ಮಾನಿಸಿದ್ದು, ಸಾಂಕೇತಿಕವಾಗಿ ಇಂದು 51 ಚಾಲಕ ಕಂ ನಿರ್ವಾಹಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಣೆ ಮಾಡಲಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಚಾಲನಾ ಸಿಬ್ಬಂದಿಯ ನೇಮಕಾತಿಯು ಪಾರದರ್ಶಕವಾಗಿ ಮಾಡಿದ್ದು, ಮಾನವ ಹಸ್ತಕ್ಷೇಪವಿರುವುದಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆಗೊಳಿಸಲಾಗಿರುತ್ತದೆ.
ನಾಲ್ಕು ಸಾರಿಗೆ ನಿಗಮಗಳಿಂದ ಸುಮಾರು 1000ಕ್ಕೂ ಹೆಚ್ಚು ಮೃತರ ಅವಲಂಭಿತರಿಗೆ ನೌಕರಿಯನ್ನು ನೀಡಿದ್ದು, ಸುಮಾರು 9000 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈಗಾಗಲೇ 7500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿರುತ್ತದೆ.
ಅಪಘಾತದಿಂದ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬವನ್ನು ಆರ್ಥಿಕವಾಗಿ ಸಧೃಡಗೊಳಿಸುವ ಸಲುವಾಗಿ ₹1 ಕೋಟಿ ವಿಮಾ ಯೋಜನೆ, ಸ್ವಾಭಾವಿಕವಾಗಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬಕ್ಕೆ ₹10 ಲಕ್ಷಗಳ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರವನ್ನು ನೀಡಲಾಗುತ್ತಿದೆ ಎಂದಿದ್ದಾರೆ.