ಚಳ್ಳಕೆರೆ(ಚಿತ್ರದುರ್ಗ): ಸುಮಾರು ಆರವತ್ತು ವರ್ಷಗಳ ಹಿಂದೆ ಕಳವಾಗಿದ್ದ ದೇವರ ಒಂದೂವರೆ ಕೆಜಿ ಚಿನ್ನಾಭರಣ ಭೂ ಗರ್ಭದಲ್ಲಿ ಪತ್ತೆಯಾಗಿವೆ. ಚಳ್ಳಕೆರೆ ತಾಲ್ಲೂಕು ನನ್ನಿವಾಳ ಗ್ರಾಮದಲ್ಲಿ ಸೋಮವಾರ ಜೆಸಿಬಿಯಿಂದ ನೆಲ ಹಗೆಯುವಾಗ ಹಳೆಯ ತುಕ್ಕು ಹಿಡಿದ ಸ್ಥಿತಿಯಲ್ಲಿದ್ದ ತಿಜೋರಿ ಪತ್ತೆಯಾಯಿತು. ತಿಜೋರಿ ಯಾವುದೋ ಹಳೆಯದ್ದೆಂದು ನಿರ್ಲಕ್ಷ್ಯ ಮಾಡಿದ್ದ ಜನರು ಕೊನೆಗೆ ಪರೀಕ್ಷೆಗೆ ಮುಂದಾಗಿದ್ದಾರೆ.
ಈ ವೇಳೆ ತಿಜೋರಿಯಲ್ಲಿ ಚಿನ್ನದ ನಾಗರಹಾವು, ದೇವರ ವಿಗ್ರಹ, ದೀಪ ಕಂಬಗಳು, ಪೂಜಾ ಸಾಮಗ್ರಿ, ನಾಗರ ಹೆಡೆ ಸಿಕ್ಕಿವೆ. ಸುಮಾರು ೬೦ ವರ್ಷದ ಹಿಂದೆ ಎರಡು ಗುಂಪುಗಳ ನಡುವೆ ಮಾರಾಮಾರಿ ಆದಾಗ ದೇವರ ಮೇಲಿನ ಒಡವೆ ಏಕಾಏಕಿ ಕಳವಾಗಿದ್ದವು. ಈ ವೇಳೆ ದೇವಸ್ಥಾನದ ಪೂಜಾರಿ ಕುಟುಂಬ ಸಮೇತ ಊರು ಬಿಟ್ಟು ಹೋಗಿದ್ದರು. ಗ್ರಾಮಸ್ಥರು ಪೂಜಾರಿಯೇ ದೇವರ ಒಡವೆ ಕದ್ದಿರಬೇಕು ಎಂದುಕೊಂಡು ಸುಮ್ಮನಾಗಿದ್ದರು. ಆದರೆ, ಇದೀಗ ಅವು ದೊರೆತಿವೆ. ಮುಚ್ಚಿಟ್ಟಿದ್ದು ಯಾರು ಎಂಬುದು ತಿಳಿಯಬೇಕಿದೆ.