21ರಂದು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ ಪ್ರಶಸ್ತಿ ಪ್ರದಾನ

ತುಮಕೂರು: ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ ಪ್ರಶಸ್ತಿಗೆ ಪತ್ರಕರ್ತ ರಘುನಾಥ ಚ.ಹ. ಹಾಗೂ ಕವಯಿತ್ರಿ ರೂಪ ಹಾಸನ ಪುರಸ್ಕೃತರಾಗಿದ್ದಾರೆ.
ತುಮಕೂರು ಜಿಲ್ಲೆ ದಿ. ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯ ಲಲಿತ ಪ್ರಬಂಧ, ವಿಮರ್ಶೆ ಮತ್ತು ಕಾವ್ಯ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ತುಮಕೂರು ವಲಯದಲ್ಲಿ ಪ್ರಗತಿಪರ ವಿಚಾರಧಾರೆಯ ವಿಸ್ತರಣೆಗೆ ಕಾರಣರಾಗಿದ್ದಾರೆ. ಅವರ ಹೆಸರಿನಲ್ಲಿ ಸ್ಥಾಪಿತವಾದ ಪ್ರತಿಷ್ಠಾನವು ಕಳೆದ ಎರಡು ವರ್ಷಗಳಿಂದ ಲಲಿತಪ್ರಬಂಧ, ಗದ್ಯ ಮತ್ತು ಕಾವ್ಯಕ್ಷೇತ್ರದ ತಲಾ ಒಬ್ಬರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿಯನ್ನು ಲಲಿತ ಪ್ರಬಂಧವನ್ನೂ ಒಳಗೊಂಡಂತೆ ಗದ್ಯ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ರಘುನಾಥ ಚ.ಹ. ಹಾಗೂ ಕಾವ್ಯಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ರೂಪ ಹಾಸನ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಫಲಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಫೆ. 21ರಂದು ನಡೆಯುವ ಕಾರ್ಯಕ್ರಮದಲ್ಲಿ ವಿಮರ್ಶಕರಾದ ಡಾ.ಎಚ್.ಎಸ್. ರಾಘವೇಂದ್ರರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಧ್ಯಕ್ಷತೆ ವಹಿಸುವರು. ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಆಶಯ ನುಡಿ ಆಡಲಿದ್ದಾರೆ. ಪ್ರೊ. ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಸವಯ್ಯ, ಎಸ್. ನಾಗಣ್ಣ, ಶಾಂತಾ ಸಣ್ಣಗುಡ್ಡಯ್ಯ, ಡಾ. ಪ್ರಕಾಶ್ ಎಂ ಶೇಠ್, ಡಾ.ರೇಣುಕಪ್ರಸಾದ್ ಉಪಸ್ಥಿತರಿರುವರು.