2024: ಹರ್ಷ ವಿಷಾದಗಳ ತೂಗುಯ್ಯಾಲೆ

ಈ ವರ್ಷ ಇನ್ನೇನು ಮುಗಿಯುತ್ತಲಿದೆ. ಹೊಸ ವರ್ಷ ೨೦೨೫ ಅದಾಗಲೇ ಹೊಸ್ತಿಲಾಚೆ ನಿಂತು ಬಾಗಿಲು ತಟ್ಟುತ್ತಿದೆ. ಗೋಡೆಯ ಮೇಲೆ ಹಳೆಯದರ ಜಾಗದಲ್ಲಿ ಬಂದು ಕುಳಿತುಕೊಳ್ಳಲು ಸಿದ್ಧವಾದ ಹೊಸ ಕ್ಯಾಲೆಂಡರ್ ಘಮಘಮಿಸುತ್ತಿದೆ. ಹೊಸ ಭರವಸೆ, ಆಸೆ, ಕನಸುಗಳನ್ನೆಲ್ಲ ಹೊತ್ತು ಮುಂದಕ್ಕೆ ನಡೆಯುವ ಉತ್ಸಾಹ, ಚೈತನ್ಯ ಎಲ್ಲರನ್ನೂ ಸದ್ದಿಲ್ಲದೆ ಆವರಿಸುತ್ತಿದೆ. ಈ ಸ್ಥಿತ್ಯಂತರದ ಸಂದರ್ಭದಲ್ಲಿ ಹಳೆಯ ವರ್ಷದ ಘಟನಾವಳಿಗಳನ್ನು ಅವಲೋಕಿಸುವುದು ಹೊಸ ವರ್ಷದ ಮುಂದಿನ ಪಯಣಕ್ಕೆ ಮಾರ್ಗದರ್ಶಕವಾಗಬಲ್ಲುದು. ಇದೇ ನಂಬಿಕೆಯಿಂದ ಸಾಹಿತ್ಯ, ಕಲೆ, ಸಂಸ್ಕöÈತಿ ಮುಂತಾದ ಕ್ಷೇತ್ರಗಳಲ್ಲಿನ ಪ್ರಮುಖ ವಿದ್ಯಮಾನಗಳು, ಈ ಕ್ಷೇತ್ರಗಳ ಪ್ರಶಸ್ತಿ ಪುರಸ್ಕೃತರು, ನಿಧನರಾದ ಪ್ರಮುಖರ ಪಕ್ಷಿನೋಟವನ್ನು ಸಾದರಪಡಿಸಲಾಗಿದೆ.

ಯುನೆಸ್ಕೋ ಪಟ್ಟಿ ಸೇರಿದ ಕರ್ನಾಟಕ ಜಾನಪದ ಪರಿಷತ್
ಅಮೂರ್ತ ಸಾಂಸ್ಕತಿಕ ಪರಂಪರೆಯ ಸಂರಕ್ಷಣೆ ಉದ್ದೇಶಕ್ಕಾಗಿ ನಾಡೋಜ ಎದ್.ಎಲ್. ನಾಗೇಗೌಡರು ಸ್ಥಾಪಿಸಿದ ಕರ್ನಾಟಕ ಜಾನಪದ ಪರಿಷತ್ ಯುನೆಸ್ಕೊ ಮಾನ್ಯತೆ ಪಡೆದಿದೆ. ಇದರೊಂದಿಗೆ, ಯುನೆಸ್ಕೋ ಪಟ್ಟಿಯಲ್ಲಿರುವ ವಿಶ್ವದ ೫೮ ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಪರಿಷತ್ ಸಹ ಒಂದಾಗಿದೆ. ೧೯೭೯ರಲ್ಲಿ ರಾಮನಗರದಲ್ಲಿ ಸ್ಥಾಪನೆಯಾದ ಪರಿಷತ್ ೪೫ ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಅಮೂಲ್ಯ ಕೆಲಸ ಮಾಡುತ್ತಿದೆ. ಸುಮಾರು ೧೫ ಎಕರೆಯಲ್ಲಿ ಪರಿಷತ್ ನಿರ್ಮಿಸಿರುವ `ಜಾನಪದ ಲೋಕ’ ರಾಜ್ಯದಲ್ಲಷ್ಟೇ ಅಲ್ಲದೆ, ದೇಶದಲ್ಲೇ ಅಪರೂಪ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೆರೆಮನೆ ಯಕ್ಷಗಾನ ಮಂಡಳಿಗೆ ಯುನೆಸ್ಕೋ ಮಾನ್ಯತೆ
ಹಲವು ಪ್ರಥಮಗಳ ಗರಿಯನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ವಿಶ್ವಸಂಸ್ಥೆಯ ಮಾನ್ಯತೆ ಲಭಿಸಿದೆ. ಯಕ್ಷಗಾನ ಕ್ಷೇತ್ರದಲ್ಲಿ ಇಂಥ ಎತ್ತರಕ್ಕೆ ಏರಿದ ಮೊದಲ ಮೇಳ ಇದು. ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ಜೂನ್‌ನಲ್ಲಿ ನಡೆದ ಹತ್ತನೇ ಅಧಿವೇಶನದಲ್ಲಿ ಇದನ್ನು ಘೋಷಿಸಲಾಗಿದೆ. ಯಕ್ಷಗಾನ ಪರಂಪರೆ, ಯಕ್ಷಗಾನ ಕಲೆಯ ಪ್ರಸಾರ, ದಾಖಲಾತಿ, ಕಲಾಪ್ರಕಾರದ ಬೆಳವಣಿಗೆಗೆ ಮಂಡಳಿಯ ಕೊಡುಗೆ ಮುಂತಾದ ಅಂಶಗಳನ್ನು ಪರಿಗಣಿಸಿ ಮಾನ್ಯತೆ ನೀಡಲಾಗಿದೆ.

ವಿವಾದಗಳ ಕರಿಮೋಡ

ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಂಶ
ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ಬಾಲಾಜಿ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ. ಇದರಿಂದಾಗಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ÷್ಯತೆಗೆ ಧಕ್ಕೆಯಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ೧೯೩೨ರಿಂದ ಜನರ ಭಾವನಾತ್ಮಕ ಬದುಕಿನ ಅವಿಭಾಜ್ಯ ಅಂಗವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಲಡ್ಡು ಪ್ರಸಾದದ ವಿಷಯದಲ್ಲಿ ಈತನಕ ಅಪಸ್ವರದ ಮಾತು ಇರಲಿಲ್ಲ.

ಬೆಳಗಾವಿ ಕೇಂದ್ರಾಡಳಿತ ಪ್ರದೇಶ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳುವ ಸಂದರ್ಭದಲ್ಲೇ ಮಹಾರಾಷ್ಟçದ ಮಾಜಿ ಸಿಎಂ ಉದ್ದವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದರು. ಬೆಳಗಾವಿ ಗಡಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು.

ಸಮ್ಮೇಳನದಲ್ಲಿ ಬಾಡೂಟ
ಡಿಸೆಂಬರ್ ೨೦, ೨೧ ಮತ್ತು ೨೨ರಂದು ಮಂಡ್ಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಪ್ರಗತಿಪರರು ಧ್ವನಿ ಎತ್ತಿದ್ದರು. ಇದು ಸ್ವಲ್ಪಮಟ್ಟಿಗೆ ವಿವಾದವನ್ನು ಸೃಷ್ಟಿಸಿತು. ಕೆಲವು ಪ್ರಗತಿಪರರು ಸಮ್ಮೇಳನದಲ್ಲಿ ತಾವೇ ಮಾಂಸಾಹಾರವನ್ನು ತಂದು ಹಂಚಿದ್ದರು.

ಪ್ರಮುಖ ಸಾಂಸ್ಕೃತಿಕ ಘಟನಾವಳಿಗಳು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಹಿರಿಯ ಜನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ಡಿಸೆಂಬರ್ ೨೦ರಿಂದ ೨೨ರವರೆಗೆ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಇದರಲ್ಲಿ ಚನ್ನಬಸಪ್ಪನವರು ನೆಲ ಜಲ, ಕನ್ನಡ ಮಾಧ್ಯಮ, ವಲಸೆ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡಿದ್ದರು. ಉದ್ಯೋಗ ಮೀಸಲಾತಿ ಹಾಗೂ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಧ್ವನಿ ಎತ್ತಿದ್ದರು.

ತೃತೀಯ ವಿಶ್ವ ಹವ್ಯಕ ಸಮ್ಮೇಳನ
ಅಖಿಲ ಹವ್ಯಕ ಮಹಾಸಭೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೦೨೪ರ ಡಿಸೆಂಬರ್ ೨೭, ೨೮, ೨೯ರಂದು ಮೂರನೆಯ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಿತ್ತು. ಇದರಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹವ್ಯಕ ಸಮುದಾಯವು ಸರಿಸುಮಾರು ಒಂದೂವರೆ ಸಾವಿರ ವರ್ಷಗಳ ಪ್ರಾಚೀನ ಪರಂಪರೆಯುಳ್ಳದ್ದು. ರಾಜ್ಯದ ಜನಸಂಖ್ಯೆಯ ಶೇ. ೦.೫ರಷ್ಟಿರುವ ಈ ಸಮುದಾಯದ ಮಂದಿ ಶಿಕ್ಷಣ, ಐಟಿ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಪ್ರಶಸ್ತಿ ಪಡೆದ ಮಹನೀಯರು
ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ೨೦೨೪ನೇ ಸಾಲಿನ ಯುವ ಪುರಸ್ಕಾರ' ಶ್ರುತಿ ಬಿ.ಆರ್. ಅವರ ಕವನ ಸಂಕಲನಜೀರೋ ಬ್ಯಾಲೆನ್ಸ್’ಗೆ ಹಾಗೂ ಬಾಲ ಸಾಹಿತ್ಯ ಪುರಸ್ಕಾರ' ಕೃಷ್ಣಮೂರ್ತಿ ಬಿಳಿಗೆರೆ ಅವರಛೂಮಂತ್ರಯ್ಯನ ಕತೆಗಳು’ ಕೃತಿಗೆ ಲಭಿಸಿದೆ. ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರಗಳು ತಲಾ ೫೦ ಸಾವಿರ ರೂ. ನಗದು ಬಹುಮಾನ ಹಾಗೂ ತಾಮ್ರದ ಫಲಕ ಹೊಂದಿದೆ. ಭಾಷಾ ವಿಜ್ಞಾನಿ ಹಾಗೂ ಹಿರಿಯ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ ಅವರ `ನುಡಿಗಳ ಅಳಿವು- ಬೇರೆ ದಿಕ್ಕಿನ ನೋಟ’ ಎಂಬ ಬಹುಜ್ಞಾನ ಶಾಸ್ತ್ರೀಯ ವಿಮರ್ಶಾ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ರೂಪಾಯಿ ೧ ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಭಾರತ ರತ್ನ ೨೦೨೪
ಬಿಹಾರದ ೧೧ನೇ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಭಾರತದ ಐದನೇ ಪ್ರಧಾನಿ ಚರಣ್ ಸಿಂಗ್, ಭಾರತದ ೯ನೇ ಪ್ರಧಾನಿ ಪಿ.ವಿ. ನರಸಿಂಹ ರಾವ್, ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್. ಸ್ವಾಮಿನಾಥನ್, ಭಾರತದ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಈ ಐವರಿಗೆ ಭಾರತ ರತ್ನ ಪ್ರಶಸ್ತಿಗಳನ್ನು ನೀಡಲಾಗಿತ್ತು. ಇದು ಒಂದೇ ವರ್ಷದಲ್ಲಿ ಘೋಷಿಸಲ್ಪಟ್ಟ ಅತ್ಯಧಿಕ ಸಂಖ್ಯೆಯ ಭಾರತ ರತ್ನ ಪ್ರಶಸ್ತಿಯಾಗಿದೆ.

ಜ್ಞಾನಪೀಠ ಪ್ರಶಸ್ತಿ
ದೇಶದ ಸಾಹಿತ್ಯಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ `ಜ್ಞಾನಪೀಠ’ ಪ್ರಶಸ್ತಿಗೆ ಉರ್ದು ಕವಿ ಹಾಗೂ ಗೀತರಚನೆಕಾರ ಗುಲ್ಜಾರ್ ಹಾಗೂ ೨೨ ಭಾಷೆಗಳ ಕೋವಿದ, ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಪಾತ್ರರಾಗಿದ್ದರು. ಸಂಸ್ಕೃತ ಲೇಖಕರಿಗೆ ಈ ಪ್ರಶಸ್ತಿ ದೊರೆಯುತ್ತಿರುವುದು ಎರಡನೇ ಬಾರಿ. ಈ ಮಹೋನ್ನತ ಪ್ರಶಸ್ತಿ ಗಳಿಸುತ್ತಿರುವ ಉರ್ದು ಸಾಹಿತಿಗಳಲ್ಲಿ ಗುಲ್ಜಾರ್ ಐದನೆಯವರಾಗಿದ್ದಾರೆ.

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ
ವಿಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಲ್ಲಿ ಅನೇಕ ಆವಿಷ್ಕಾರಗಳನ್ನು ಮಾಡಿರುವ ಸಿಂಧೂರ ರಾಜ ಉಳ್ಳಾಲ್‌ಗೆ ಮಕ್ಕಳಿಗಾಗಿ ನೀಡುವ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ವನ್ನು ಡಿಸೆಂಬರ್ ೨೬ರಂದು ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸಿಂಧೂರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದಿಸುವ ಅವಕಾಶವನ್ನೂ ಪಡೆದುಕೊಂಡರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಸಾಹಸ, ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಏಳು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಈ ಪುರಸ್ಕಾರ ನೀಡುತ್ತದೆ. ದೇಶದ ೧೭ ಮಕ್ಕಳ (೧೦ ವಿದ್ಯಾರ್ಥಿಗಳು, ೭ ವಿದ್ಯಾರ್ಥಿನಿಯರು) ಪೈಕಿ ಕರ್ನಾಟಕದಿಂದ ಗೌರವ ಪಡೆದ ಏಕೈಕ ವಿದ್ಯಾರ್ಥಿನಿ ಸಿಂಧೂರ. ಪ್ರಥಮ ಪಿಯುಸಿ ಕಲಿಯುತ್ತಿರುವ ಅವರ ವೈಜ್ಞಾನಿಕ ಸಾಧನೆಗಾಗಿ ಅಮೆರಿಕದಿಂದ ವರ್ಲ್್ಡ ಸೈನ್ಸ್ ಸ್ಕಾಲರ್ ಪದವಿ ದೊರೆತಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಮತ್ತು ವೊಲ್ಪಾಮ್ ರಿಸರ್ಚ್ ಸೆಂಟರ್ ಜತೆ ಕ್ರಿಪ್ರೋಕಾಕಸ್ ನಿಯೋಫಾರ್ವನ್ಸ್ ಎಂಬ ಪ್ಯಾಥೊಜೆನಿಕ್ ಈಸ್ಟ್ ಮೇಲೆ ಪ್ರಯೋಗ ನಡೆಸುತ್ತಿದ್ದಾರೆ. ಈ ಸಂಶೋಧನೆಯು (ಐಆರ್‌ಐಎಸ್ – ಇನಿಷಿಯೇಟಿವ್ ಫಾರ್ ರಿಸರ್ಚ್ ಆಂಡ್ ಇನ್ನೋವೇಶನ್) ರಾಷ್ಟ್ರೀಯ ಮೇಳದಲ್ಲಿ ಗ್ರ್ಯಾಂಡ್ ಪ್ರಶಸ್ತಿ ಗೆದ್ದಿದ್ದು, ೨೦೨೫ರ ಮೇ ತಿಂಗಳಲ್ಲಿ ಅಮೆರಿಕದ ಕೊಲಂಬಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ ಆಫ್ ಸೈನ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಗ್ರ್ಯಾಮಿ ಪ್ರಶಸ್ತಿ
ಲಾಸ್ ಏಂಜಲೀಸ್‌ನಲ್ಲಿ ೨೦೨೪ರ ಫೆಬ್ರವರಿಯಲ್ಲಿ ನಡೆದ ೬೬ನೇ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್, ಭಾರತೀಯ ಗಾಯಕ ಶಂಕರ್ ಮಹಾದೇವನ್ ಸೇರಿದಂತೆ ನಾಲ್ವರು ಸಂಗೀತಗಾರರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದರು. ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್, ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ವಿಭಾಗಗಳಲ್ಲಿ ಜಾಕಿರ್ ಹುಸೇನ್ ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದರು.

ನೊಬೆಲ್ ಪ್ರಶಸ್ತಿ

ಭೌತಶಾಸ್ತ್ರ
ಕೃತಕ ಬುದ್ಧಿಮತ್ತೆಗೆ ಪೂರಕವಾದ ಅನ್ವೇಷಣೆಗಾಗಿ ೨೦೨೪ರ ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಜಾನ್ ಹಾಪ್‌ಫೀಲ್ಡ್ ಮತ್ತು ಜಾಫ್ರಿ ಹಿಂಟನ್ ಅವರನ್ನು ಆಯ್ಕೆ ಮಾಡಲಾಗಿದೆ. ಕೃತಕ ಬುದ್ಧಿಮತ್ತೆಗೆ ಪೂರಕವಾಗಿ ಮಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಆಕರಕೋಶಗಳ ನಿರ್ಮಾಣದ ಕುರಿತ ಅನ್ವೇಷಣೆಗಾಗಿ ಇವರನ್ನು ಆಯ್ಕೆ ಮಾಡಲಾಗಿದೆ.

ರಸಾಯನಶಾಸ್ತ್ರ
ರಸಾಯನವಿಜ್ಞಾನದಲ್ಲಿ ಕೈಗೊಂಡ ಸಂಶೋಧನೆಗಾಗಿ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಈ ಮೂವರು ವಿಜ್ಞಾನಿಗಳನ್ನು ೨೦೨೪ರ ರಸಾಯನಶಾಸ್ತ್ರ ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಬಹುಮಾನದ ಒಟ್ಟು ಮೊತ್ತದಲ್ಲಿ ಅರ್ಧ ಭಾಗವನ್ನು ಡೇವಿಡ್ ಬೇಕರ್‌ಗೆ ನೀಡಲಾಗುತ್ತದೆ. ಉಳಿದರ್ದವನ್ನು ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ ಕೊಡಲಾಗುತ್ತದೆ.

ವೈದ್ಯಕೀಯ
ಕ್ಯಾನ್ಸರ್‌ಗೆ ಹೊಸ ವಿಧಾನದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಬಲ್ಲ ಮೈಕ್ರೋಆರ್‌ಎನ್‌ಎ ಆವಿಷ್ಕಾರಕ್ಕಾಗಿ ಅಮೆರಿಕದ ವಿಕ್ಟರ್ ಆ್ಯಂಬೊಸ್ ಮತ್ತು ಗ್ಯಾರಿ ರುಷ್ಕನ್ ಅವರಿಗೆ ೨೦೨೪ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ. ಇವರಿಬ್ಬರ ಹೊಸ ಅವಿಷ್ಕಾರವು ಜೀನ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಹೊಸ ಸಿದ್ಧಾಂತವನ್ನು ಜಗತ್ತಿನ ಮುಂದಿಟ್ಟಿದೆ ಎಂದು ಆಯ್ಕೆ ಸಮಿತಿ ತಿಳಿಸಿತ್ತು.

ಸಾಹಿತ್ಯ
ದಕ್ಷಿಣ ಕೊರಿಯಾದ ಬರಹಗಾರ್ತಿ ಹ್ಯಾನ್ ಕಾಂಗ್ ಅವರಿಗೆ ೨೦೨೪ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಸಣ್ಣ ಕಥೆಗಳು, ಕಾದಂಬರಿ ಮತ್ತು ಕಾವ್ಯರಚನೆಯಲ್ಲಿ ಸಕ್ರಿಯರಾಗಿರುವ ಅವರಿಗೆ ಈ ವರ್ಷದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ತಿಳಿಸಿದೆ.

ಶಾಂತಿ
ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿನ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರನ್ನು ಪ್ರತಿನಿಧಿಸುವ, ಪರಮಾಣು ಶಸ್ತಾçಸ್ತçಗಳ ವಿರುದ್ಧ ಹೋರಾಟ ನಡೆಸುತ್ತಿರುವ ಜಪಾನ್‌ನ ನಿಹಾನ್ ಹಿಡಾಂಕ್ಯೋ ಸಂಸ್ಥೆಯನ್ನು ೨೦೨೪ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಅರ್ಥಶಾಸ್ತ್ರ
ಅರ್ಥಶಾಸ್ತ್ರ ವಿಭಾಗದಲ್ಲಿ ನೀಡುವ ಈ ಬಾರಿಯ ನೊಬೆಲ್ ಪುರಸ್ಕಾರಕ್ಕೆ ಡೆರಾನ್ ಆಶಿಮೊಗ್ಲೆ (೫೭), ಸೈಮನ್ಸ್ ಜಾನ್ಸನ್ (೬೧), ಜೇಮ್ಸ್ ಎ. ರಾಬಿನ್ಸನ್ (೬೪) ಅವರನ್ನು ಆಯ್ಕೆ ಮಾಡಲಾಗಿದೆ. ಕೆಲವು ದೇಶಗಳು ಶ್ರೀಮಂತವಾಗಿಯೇ ಇರುವುದು ಮತ್ತು ಕೆಲವರು ಬಡವರಾಗಿಯೇ ಉಳಿಯುತ್ತಿರುವ ಕುರಿತು ಈ ಮೂವರು ಸಂಶೋಧನೆ ನಡೆಸಿದ್ದರು.

ಮರಳಿಬಂದ ಕಲಾಕೃತಿಗಳು
ದಕ್ಷಿಣ ಮತ್ತು ಆಗ್ನೇಯ ಏಷ್ಯಾ ದೇಶಗಳಿಂದ ಕಳ್ಳಸಾಗಣೆಯ ಮೂಲಕ ಹೋಗಿದ್ದ ಪುರಾತನ ವಿಗ್ರಹಗಳನ್ನು ವಾಪಸು ಕಳುಹಿಸುವ ಮಹತ್ವದ ನಿರ್ಧಾರವನ್ನು ಅಮೆರಿಕ ಕೈಗೊಂಡಿದೆ. ಸುಮಾರು ೮೩ ಕೋಟಿ ರೂ. ಮೌಲ್ಯದ ೧,೪೦೦ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಾಗಿದೆ ಎಂದು ೨೦೨೪ರ ನವೆಂಬರ್‌ನಲ್ಲಿ ಅಮೆರಿಕ ಘೋಷಿಸಿತ್ತು. ಈ ವಸ್ತುಗಳು ಕಳ್ಳಸಾಗಣೆ ಮತ್ತು ಕಾನೂನುಬಾಹಿರವಾಗಿ ವಿದೇಶಕ್ಕೆ ತಲುಪಿದ್ದವು. ೪೬ನೇ ವಿಶ್ವ ಪರಂಪರೆ ಸಮಿತಿಯ ಕಾರ್ಯಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಸಾಂಸ್ಕೃತಿಕ ಆಸ್ತಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಮ್ಯಾನ್ ಬೂಕರ್ ಪ್ರಶಸ್ತಿ
೨೦೨೪ರ ಪ್ರತಿಷ್ಠಿತ ಮ್ಯಾನ್ ಬೂಕರ್ ಸಾಹಿತ್ಯ ಪ್ರಶಸ್ತಿಯನ್ನು ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆ ಅವರ ಕಾದಂಬರಿ ಆರ್ಬಿಟಲ್‌ಗೆ ನೀಡಲಾಯಿತು. ಇದು ಭೂಮಿಯೊಂದಿಗಿನ ಮಾನವೀಯ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಶಸ್ತಿಯನ್ನು ಇಂಗ್ಲಿಷಿನಲ್ಲಿ ಬರೆದ ಅತ್ಯುತ್ತಮ ಮೂಲ ಕಾದಂಬರಿಗೆ ನೀಡಲಾಗುತ್ತದೆ.