ಹೊಸ ವರ್ಷದ ಮೊದಲ ದಿನವೇ ಬಾಣಂತಿ, ಮಗು ಸಾವು

ರಾಯಚೂರು: ಮಗು ಮೃತಪಟ್ಟ ಸುದ್ದಿಕೇಳಿ ಬಾಣಂತಿ ಸಾವನ್ನಪ್ಪಿದ ಘಟನೆ ದೇವದುರ್ಗ ತಾಲೂಕಿನ ಮಸೀದಾಪುರ ಗ್ರಾಮದಲ್ಲಿ ನಡೆದಿದೆ.
ಮಗುವಿನ ಸಾವಿನ ಸುದ್ದಿ ಕೇಳಿ ಸತತ ಎರಡು ಗಂಟೆ ಬಾಣಂತಿ ತಾಯಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಮಸೀದಾಪುರ ಗ್ರಾಮದ ಶಿವಲಿಂಗಮ್ಮ(21) ಎಂದು ಮೃತ ಬಾಣಂತಿ ಎಂದು ಗುರುತಿಸಲಾಗಿದೆ.
ಶುಕ್ರವಾರ ರಿಮ್ಸ್‌ನಲ್ಲಿ ಶಿವಲಿಂಗಮ್ಮ ಹೆರಿಗೆಯಾಗಿತ್ತು. ಹೆರಿಗೆ ಬಳಿಕ ಅತಿಯಾದ ರಕ್ತಸ್ರಾವ, ರಕ್ತದೊತ್ತಡದಿಂದ ಬಳಲಿದ್ದ ಬಾಣಂತಿ ಐದು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಿಗ್ಗೆ 2 ಗಂಟೆಗೆ ಮಗು ಸಾವನ್ನಪ್ಪಿದ ಎರಡು ಗಂಟೆಯಲ್ಲೇ ಬಾಣಂತಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಮುಂದುವರಿದ ಬಾಣಂತಿಯರ ಸರಣಿ ಸಾವುಗಳಿಂದಾಗಿ ಜಿಲ್ಲೆಯಲ್ಲಿ 11ನೇ ಬಾಣಂತಿ ಸಾವಾಗಿದೆ. ಬಾಣಂತಿ, ಮಗು ಸಾವಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದಿರುವುದೆ ಕಾರಣ ಎಂದು ಕುಟುಂಬಸ್ಥರ ಆರೋಪವಾಗಿದೆ.