ಹೆಜ್ಜೇನು ದಾಳಿ: ಹಲವರು ಅಸ್ವಸ್ಥ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಅಜಿಕುರಿಯಲ್ಲಿ ಹೆಜ್ಜೇನು ದಾಳಿ ನಡೆಸಿದ್ದು ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬುಧವಾರ ಬೆಳಗ್ಗೆ ೮ ಗಂಟೆಯ ವೇಳೆ ಹೆಜ್ಜೇನು ದಾಳಿ ಆರಂಭವಾಗಿದ್ದು, ಮನೆಗಳಲ್ಲಿ ಇದ್ದವರ ಮೇಲೂ ಹೆಜ್ಜೇನು ದಾಳಿ ನಡೆಸಿವೆ. ಸ್ಥಳೀಯರಾದ ಇಸ್ಮಾಯಿಲ್ (೭೦) ಶಹನಾಝ್( ೫೨) ಶಾಮಿಲ್ (೧೩), ಮುಸ್ತಫಾ (೨೯) ಶಾಹಿದಾ(೫೩), ಪದ್ಮಾವತಿ( ೬೨), ಶಿವಣ್ಣ (೫೫)ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಬೆಳಗ್ಗೆ ಒಂದು ಸುತ್ತು ದಾಳಿ ನಡೆಸಿದ ಹೆಜ್ಜೇನು ಬಳಿಕ ೧೦ ಗಂಟೆಯ ಸುಮಾರಿಗೆ ಮತ್ತೊಮ್ಮೆ ಗುಂಪಾಗಿ ಬಂದು ಸ್ಥಳೀಯರ ಮೇಲೆ ದಾಳಿ ನಡೆಸಿದವು. ಹೆಜ್ಜೇನುಗಳು ಪರಿಸರದಲ್ಲಿ ಹಾರಾಡುತ್ತಿದ್ದು,ಅಜಿಕುರಿಯ ಜನರು ಮನೆಯಿಂದ ಹೊರಗೆ ಬರಲು ಭಯಪಡುವ ಸ್ಥಿತಿ ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ.