ಹುಬ್ಬಳ್ಳಿ ಭಕ್ತರ ಸೆಳೆದ ಕಾಶಿ ವಿಶ್ವನಾಥೇಶ್ವರ

ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಜ್ಯೋತಿರ್ಲಿಂಗಕ್ಕೆ ರುದ್ರಾಭಿಷೇಕ : ವಿಶೇಷ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಿದ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಮಹಾಶಿವರಾತ್ರಿ ಮಹೋತ್ಸವದ ಇಂದು ಭಕ್ತಿ ಕೇಂದ್ರವಾಗಿ ಗಮನ ಸೆಳೆಯಿತು. ದೇಶಪಾಂಡೆ ನಗರದ ಜಿಮಖಾನಾ ಮೈದಾನವಂತೂ ಥೇಟ್ ಶ್ರೀ ಕಾಶಿ ವಿಶ್ವನಾಥೇಶ್ವರ ಸನ್ನಿಧಿಯಂತೆ ಕಂಗೊಳಿಸುತ್ತಿತ್ತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾರಥ್ಯದಲ್ಲಿ ಅವರ ಆಶಯದಂತೆ ಕಾಶಿ ವಿಶ್ವನಾಥ ಮಾದರಿ ಶಿವಲಿಂಗ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ್ದು ಈ ಬಾರಿಯ ಶಿವರಾತ್ರಿ ಮಹೋತ್ಸವಕ್ಕೆ ವಿಶಿಷ್ಠ ಮೆರುಗು ನೀಡಿದೆ.

ಮಹಾಶಿವರಾತ್ರಿ ಪ್ರಯುಕ್ತ ಜಿಮಖಾನಾ ಮೈದಾನದಲ್ಲಿ ವಾರಣಾಸಿಯ ಗಂಗಾ ನದಿ ತಟದಲ್ಲಿರುವ ಶ್ರೀ ಕಾಶಿ ವಿಶ್ವೇಶ್ವರ ದೇಗುಲದ ಮಾದರಿಯಲ್ಲೇ ಜ್ಯೋತಿರ್ಲಿಂಗ ಪ್ರತಿಷ್ಠಾಪಿಸಿ ರುದ್ರಾಭಿಷೇಕ ನೆರವೇರಿಸುವುದರೊಂದಿಗೆ ಶಿವರಾತ್ರಿ ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.

ಸಚಿವ ಜೋಶಿ ಅವರಿಂದ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ: ಈ ಕಾಶಿ ವಿಶ್ವನಾಥೇಶ್ವರ ಜ್ಯೋತಿರ್ಲಿಂಗಕ್ಕೆ ಸಚಿವ ಪ್ರಲ್ಹಾದ ಜೋಶಿ ಅವರು ಬೆಳಗ್ಗೆಯೇ ರುದ್ರಾಭಿಷೇಕ ಪೂಜೆ ನೆರವೇರಿಸಿ ಮಹಾದೇವನಿಗೆ ನಮಿಸಿದರು. ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಬಿಲ್ವಪತ್ರೆ, ಹೂವಿನ ಹಾರ ಅರ್ಪಿಸಿ, ಕರ್ಪೂರದಾರತಿ ಬೆಳಗಿ ನಮಸ್ಕರಿಸಿದರು.

ಭಕ್ತರಿಗೆ ಖುದ್ದು ಪ್ರಸಾದ ವಿತರಿಸಿದ ಜೋಶಿ: ಕಾಶಿ ಮಾದರಿಯ ಈ ಜ್ಯೋತಿರ್ಲಿಂಗಕ್ಕೆ ಮುಂಡಗೋಡ ಹಿರೇಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಮಂತ್ರೋಪದೇಶ ಸಹಿತ ರುದ್ರಾಭಿಷೇಕ ನೆರವೇರಿಸಿದ ಬಳಿಕ ಸಚಿವ ಪ್ರಲ್ಹಾದ ಜೋಶಿ ಅವರೇ ಖುದ್ದು ಮುಂದೆ ನಿಂತು ಶಿವಸದ್ಭಕ್ತರಿಗೆ ಪ್ರಸಾದ ಮತ್ತು ಪಂಚಮುಖಿ ರುದ್ರಾಕ್ಷಿ ವಿತರಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಣ್ಣ ಬಡಿಗೇರ, ಕೆಎಲ್‌ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಪಾಲಿಕೆ ಹಿರಿಯ ಸದಸ್ಯ ವೀರಣ್ಣ ಸವಡಿ, ಮಾಜಿ ಶಾಸಕ ಅಶೋಕ ಕಾಟವೆ, ವಸಂತ ನಾಡಜೋಶಿ, ನಾರಾಯಣ ಜರತಾರಘರ ಹಾಗೂ ಕ್ಷಮತಾ ಸಂಸ್ಥೆ ಮತ್ತು ಬ
ಬಿಜೆಪಿ ಮುಖಂಡರು, ಪದಾಧಿಕಾರಿಗಳು ಸಚಿವರೊಂದಿಗೆ ಈ ವಿಶೇಷ ಧಾರ್ಮಿಕ ಕೈಂಕರ್ಯದಲ್ಲಿ ಸಾಥ್ ನೀಡಿದರು.

ಅಪಾರ ಭಕ್ತರನ್ನು ಸೆಳೆದ ಕಾಶಿ ವಿಶ್ವನಾಥ: ಹುಬ್ಬಳ್ಳಿಯ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಸಿದ್ಧಪಡಿಸಿದ್ದ ಕಾಶಿ ವಿಶ್ವನಾಥ ಮಾದರಿ ದೇವಾಲಯ ಮತ್ತು ಜ್ಯೋತಿರ್ಲಿಂಗ ಪ್ರತಿಷ್ಠಾಪನೆ ಸಂಖ್ಯಾತ ಭಕ್ತರನ್ನು ಸೆಳೆಯಿತು. ಶಿವರಾತ್ರಿಯ ಬೆಳಗಿನಿಂದಲೇ ಭಕ್ತರು ಸಾಲುಗಟ್ಟಿ ನಿಂತು ಕಾಶಿ ವಿಶ್ವನಾಥನನ್ನು ಕಣ್ತುಂಬಿಕೊಂಡು, ವಿಶೇಷ ಪೂಜೆ ನೆರವೇರಿಸಿ, ಹಣ್ಣುಕಾಯಿ ಸಮರ್ಪಿಸಿ ಮಹಾದೇವನ ಕೃಪೆಗೆ ಪಾತ್ರರಾದರು.