ಹುಬ್ಬಳ್ಳಿ: ಮಳೆಗಾಲದ ಪ್ರಯುಕ್ತ ವಿಶ್ವವಿಖ್ಯಾತ ಪ್ರವಾಸಿ ತಾಣ ಜೋಗ ಜಲಪಾತದ ವೀಕ್ಷಣೆಗೆ ರವಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾ.ಕ.ರ.ಸಾ. ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಇತ್ತೀಚೆಗೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಎಲ್ಲಾ ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಕೊಂಡಿದೆ. ಮಳೆ ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುವ ಸುತ್ತಲಿನ ಪ್ರಕೃತಿ ಸೌಂದರ್ಯ ಅನನ್ಯ. “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ” ಎನ್ನುವಂತೆ ಕಣ್ಮನ ಸೆಳೆಯುವ ಜಲಪಾತದ ದೃಶ್ಯ ವೈಭವ ಸವಿಯಲು ಇದು ಅತ್ಯಂತ ಸೂಕ್ತ ಕಾಲ.
ಸಾರ್ವಜನಿಕರ ಬೇಡಿಕೆಯ ಮೇರೆಗೆ ಜೋಗ ಜಲಪಾತ ವೀಕ್ಷಿಸಲು ಕುಟುಂಬದವರೊಂದಿಗೆ ಹೋಗಿ ಬರಲು ಅನುಕೂಲವಾಗುವಂತೆ ರವಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ರಾಜಹಂಸ ಹಾಗೂ ಮಲ್ಟಿ ಅಕ್ಸೆಲ್ ವೋಲ್ವೋ ಎಸಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಮಾರ್ಗ ಮಧ್ಯದಲ್ಲಿ ಶಿರಸಿ ಮಾರಿಕಾಂಬ ದೇವಸ್ಥಾನದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗದಲ್ಲಿ ಜಲಪಾತ ವೀಕ್ಷಣೆ ಹಾಗೂ ಪ್ರಕೃತಿ ಸೌಂದರ್ಯ ಸೊಬಗು ಆನಂದಿಸಲು ಸಾಕಷ್ಟು ಸಮಯಾವಕಾಶ ಕಲ್ಪಿಸಲಾಗಿದೆ.
ಹೊರಡುವ ಮತ್ತು ಬರುವ ವೇಳೆ
ರಾಜಹಂಸ ಬಸ್: ಹುಬ್ಬಳ್ಳಿಯಿಂದ ಬೆಳಿಗ್ಗೆ ೭-೩೦ಕ್ಕೆ ಹೊರಡುತ್ತದೆ.೧೧-೪೫ಕ್ಕೆ ಜೋಗ ಜಲಪಾತ ತಲುತ್ತದೆ. ಜೋಗ ಜಲಪಾತದಿಂದ ಸಂಜೆ ೫-೦೦ಕ್ಕೆ ಹೊಡುತ್ತದೆ. ಹುಬ್ಬಳ್ಳಿಗೆ ರಾತ್ರಿ ೯-೩೦ಕ್ಕೆ ಆಗಮಿಸುತ್ತದೆ. ಪ್ರಯಾಣ ದರ ರೂ. ೪೩೦ ನಿಗದಿಪಡಿಸಲಾಗಿದೆ.
ವೋಲ್ವೊ ಎಸಿ ಬಸ್ : ಹುಬ್ಬಳ್ಳಿಯಿಂದ ಬೆಳಿಗ್ಗೆ ೮-೦೦ಕ್ಕೆ ಹೊರಡುತ್ತದೆ.೧೨ ಕ್ಕೆ ಜೋಗ ಜಲಪಾತ ತಲುತ್ತದೆ. ಜೋಗ ಜಲಪಾತದಿಂದ ಸಂಜೆ ೫-೦೦ಕ್ಕೆ ಹೊಡುತ್ತದೆ. ಹುಬ್ಬಳ್ಳಿಗೆ ರಾತ್ರಿ ೯-೦೦ಕ್ಕೆ ಆಗಮಿಸುತ್ತದೆ. ಪ್ರಯಾಣ ದರ ರೂ. ೬೦೦ ನಿಗದಿಪಡಿಸಲಾಗಿದೆ.
ಮುಂಗಡ ಬುಕ್ಕಿಂಗ್
ಈ ವಿಶೇಷ ಬಸ್ ಗಳಿಗೆ ಆನ್ ಲೈನ್ ನಲ್ಲಿ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣದಲ್ಲಿ ಮುಂಗಡ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ೭೭೬೦೯೯೧೬೮೨ ಅಥವಾ ೭೭೬೦೯೯೧೬೭೪ ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗಿಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.