ಹುಬ್ಬಳ್ಳಿ: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಇಂದು (ಮಾ. 22ರಂದು) ನೀಡಿರುವ ಕರ್ನಾಟಕ ಬಂದ್‌ಗೆ ಕರೆಗೆ ಬಹುತೇಕ ಸಂಘ ಸಂಸ್ಥೆಗಳು, ಸಾರ್ವಜನಿಕರು ವಿರೋಧ ವ್ಯಕ್ತವಾಗಿದ್ದು, ಬಂದ್ ಸಾಧ್ಯತೆ ಕಡಿಮೆ. ಕೆಲ ಸಂಘಟನೆಗಳು ಸಾಂಕೇತಿಕ ಬಂದ್ ನಡೆಸಿ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
ಹೀಗಾಗಿ, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬಸ್, ಆಟೋ ಸಂಚಾರ ಎಂದಿನಂತೆಯೇ ಇರಲಿದ್ದು, ಮಾರುಕಟ್ಟೆ, ಹೊಟೇಲ್‌ನಲ್ಲಿ ದೈನಂದಿನ ವ್ಯವಹಾರ ಚಟುವಟಿಕೆ ನಡೆಯಲಿದೆ. ಆಟೋ ಚಾಲಕರ ಸಂಘ, ಲಾರಿ ಓನರ್ಸ್ ಅಸೋಸಿಯೇಶನ್, ಕಟ್ಟಡ ಕಾರ್ಮಿಕರು, ಟಾಟಾ ಎಸಿ ಚಾಲಕರ ಹಾಗೂ ಮಾಲೀಕರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲಿಸಿಲ್ಲ.
ಬಸ್, ಆಟೋ ಸಂಚಾರ ಎಂದಿನಂತೆ ಇರಲಿದೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರಕಾರದಿಂದ ನಮಗೆ ಯಾವುದೇ ಸೂಚನೆಗಳು ಬಂದಿಲ್ಲ. ನಾವು ಎಂದಿನಂತೆ ಕಾರ್ಯಾಚರಣೆ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಾಕರಸಾ ಸಂಸ್ಥೆಯಿಂದ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ. ಪೊಲೀಸ್ ಇಲಾಖೆ ಸಲಹೆ ಸೂಚನೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ವಾಕರಸಾ ಸಂಸ್ಥೆಯ ನಿರ್ದೇಶಕಿ ಪ್ರಿಯಾಂಗ್ ಎಂ. ತಿಳಿಸಿದ್ದಾರೆ.
ಅವಳಿನಗರದಲ್ಲಿ ೨೫ ಸಾವಿರ ಆಟೋಗಳಿವೆ. ನಾಳೆ ಎಂದಿನಂತೆ ಕಾರ್ಯಾಚರಣೆ ಮಾಡಲಿವೆ. ಮಕ್ಕಳ ಪರೀಕ್ಷೆ ಹಿನ್ನೆಲೆಯಲ್ಲಿ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಎಲ್ಲವೂ ಆಟೋಗಳು ಕಾರ್ಯಾಚರಣೆ ಮಾಡಲಿವೆ ಎಂದು ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದ್ದಾರೆ.
ಆಟೋ ಚಾಲಕರ ಸಂಘದ ಬೆಂಬಲವಿಲ್ಲ
ಕನ್ನಡ ಪರ ಸಂಘಟನೆಯ ನಾಯಕ ವಾಟಾಳ್ ನಾಗರಾಜ ಅವರ ನೇತೃತ್ವದಲ್ಲಿ ಮಾ. 22ರಂದು ಕರ್ನಾಟಕ ಬಂದ್ ಕರೆಗೆ ಧಾರವಾಡ ಜಿಲ್ಲಾ ಆಟೋ ಚಾಲಕರ ಸಂಘ, ಉತ್ತರ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್, ಕಟ್ಟಡ ಕಾರ್ಮಿಕ ಸಂಘ, ಹುಬ್ಬಳ್ಳಿ ಟಾಟಾ ಎಸಿ ಚಾಲಕರ ಹಾಗೂ ಮಾಲೀಕರ ಸಂಘ ಮತ್ತು ಇನ್ನಿತರ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೊಡಗಿದ್ದು, ಅವರುಗಳ ಭವಿಷ್ಯದ ಹಿತದೃಷ್ಠಿಯಿಂದ ಯಾವದೇ ತೊಂದರೆ ಆಗದಂತೆ ಮಾ. 22ರಂದು ಕರ್ನಾಟಕ ಬಂದಗೆ ಬೆಂಬಲ ನಿಡುವುದಿಲ್ಲ ಎಂದು ವಿವಿಧ ಸಂಘಟನೆ ಮುಖಂಡರಾದ ಬಾಬಾಜಾನ್ ಮುಧೋಳ, ಗೈಬುಸಾಬ್ ಹೊನ್ಯಾಳ, ರಾಜಶೇಖರ್ ಮೆಣಸಿನಕಾಯಿ, ಪೀರಸಾಬ್ ನದಾಫ, ಬಿ.ಎ.ಮುಧೋಳ್, ಮೊಹಮ್ಮದಆಸೀಫ್ ಸಯ್ಯದ್ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕೆಲ ಸಂಘಟನೆಗಳಿಂದ ಸಾಂಕೇತಿಕ ಬಂದ್
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕೆಲವು ಸಂಘಟನೆಗಳು ಸಾಂಕೇತಿಕವಾಗಿ ಬಂದ್ ನಡೆಸುವುದಾಗಿ ತಿಳಿಸಿವೆ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದ್ದಾರೆ.