ಹಸಿರುಕ್ರಾಂತಿ ಹರಿಕಾರನ ಪುಣ್ಯಸ್ಮರಣೆ

ಮಾಜಿ ಉಪ ಪ್ರಧಾನಿ, ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ೧೧೮ನೇ ಜನ್ಮ ದಿನೋತ್ಸವದ ಇಂದು. ೧೯೦೮ ಏಪ್ರಿಲ್ ೫ರಂದು ಜನಿಸಿದ ಅವರ ಜನ್ಮದಿನವನ್ನು ಭಾರತದಾದ್ಯಂತ ‘ಸಮತಾ ದಿವಸ್’ ಅಥವಾ ‘ಸಮಾನತೆ ದಿನ’ ಎಂದು ಆಚರಿಸಲಾಗುತ್ತಿದೆ.
ಜಗಜೀವನ್ ರಾಮ್ ಬಿಹಾರದ ಚಾಂದ್ವಾದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬ್ರಿಟಿಷ್ ಸೈನ್ಯದಲ್ಲಿದ್ದರು. ಶಾಲಾ ಶಿಕ್ಷಣವನ್ನು ಅರ‍್ರಾ ಪಟ್ಟಣದಲ್ಲಿ ಕಲಿತರು, ಅಲ್ಲಿ ಅವರು ಮೊದಲ ಬಾರಿಗೆ ತಾರತಮ್ಯವನ್ನು ಎದು ರಿಸಿದರು. ಅವರನ್ನು “ಅಸ್ಪೃಶ್ಯ” ಎಂದು ಪರಿಗಣಿಸಲಾಯಿತು ಎಲ್ಲವನ್ನೂ ಎದುರಿಸಿ ಬದುಕು ಕಟ್ಟಿಕೊಂಡರು. ೧೯೨೫ರಲ್ಲಿ, ವಿದ್ವಾಂಸ ಪಂಡಿತ್ ಮದನ್ ಮೋಹನ್ ಮಾಳವೀಯ ಅವರನ್ನು ಭೇಟಿಯಾದರು ಮತ್ತು ಅವರಿಂದ ಪ್ರೇರಿತರಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸೇರಿದರು. ವಿದ್ಯಾರ್ಥಿಯಾಗಿದ್ದಾಗಲೇ ಹಲವಾರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದ್ದರು. ಹರಿಜನರ ಮಕ್ಕಳನ್ನು ಶುಲ್ಕ ಪಾವತಿಸಿ ಶಾಲೆಗೆ ಸೇರಿಸುವುದು, ಅವರ ಪುಸ್ತಕ ಬಟ್ಟೆ ಕೊಂಡುಕೊಳ್ಳಲು ಧನ ಸಹಾಯ ಮಾಡುವುದು ಮತ್ತು ದಲಿತರನ್ನು ಜೀತ ವಿಮುಕ್ತರಾಗಿ ಮಾಡುವುದು. ರಾಜಕೀಯ ಕ್ಷೇತ್ರ ಪ್ರವೇಶಿಸಿದ ಮೇಲೆ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸುವುದರ ಜೊತೆಗೆ ಹರಿಜನ ಸೇವ ಸಂಘ, ರವಿದಾಸ್ ಮಹಾಸಭಾ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದರು ಹಾಗೂ ಭಾರತದಾದ್ಯಂತ ಸಂಚಾರ ಮಾಡಿ ಹರಿಜನರ ಸಂಘಟನೆ ಮಾಡಿದರು. “ಕೃಷಿ ಕಾರ್ಮಿಕರ ಕನಿಷ್ಠ ವೇತನ, ಉಳುವವನಿಗೆ ಭೂಮಿ, ಮದ್ಯಪಾನ ನಿಷೇಧ ಮತ್ತು ಅಸ್ಪೃಶ್ಯತಾ ನಿವಾರಣೆ” ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹೋರಾಟ ಮಾಡಿದರು.
ಸುಭಾಷ್ ಚಂದ್ರ ಬೋಸ್ ಅವರ ಸಂಘಟನಾ ಕೌಶಲ್ಯವನ್ನು ಗುರುತಿಸಿ, ೧೯೩೫ರಲ್ಲಿ, ಆಲ್ ಇಂಡಿಯಾ ಡಿಪ್ರೆಸ್ಡ್ ಕ್ಲಾಸಸ್ ಲೀಗ್‌ರಚನೆ ಮಾಡಲು ಜಗಜೀವನರಾಮ್ ರವರಿಗೆ ಸಹಾಯ ಮಾಡಿದರು. ೧೯೩೫ರಲ್ಲಿ, ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಕುಡಿಯುವ ನೀರಿನ ಬಾವಿಗಳು ಮತ್ತು ದೇವಾಲಯಗಳು ಅಸ್ಪೃಶ್ಯರಿಗೆ ಮುಕ್ತವಾಗಿರಬೇಕು ಎಂದು ಪ್ರಸ್ತಾಪಿಸಿದರು. ೧೯೪೦ರ ದಶಕದಲ್ಲಿ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎರಡು ಬಾರಿ ಸೆರೆವಾಸ ಅನುಭವಿಸಿದರು.
ಭಾರತ ಸಂವಿಧಾನ ರಚನಾ ಕಾರ್ಯವಿಧಾನ ನಿಯಮಗಳ ಸಮಿತಿಗೆ ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷರು. ಎರಡನೇ ಹೆಸರೇ ಬಾಬೂಜಿ ಅವರದ್ದು. ಭಾರತ ಒಕ್ಕೂಟ ಸಂವಿಧಾನ ಸಮಿತಿಗೆ ಪಂಡಿತ್ ಜವಾಹರಲಾಲ್ ನೆಹರೂ ಅಧ್ಯಕ್ಷರು. ಬಾಬು ಜಗಜೀವನ ರಾಮ್ ಅವರ ಜೊತೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಅಬ್ದುಲ್ ಕಲಾಂ ಆಜಾದ್, ಶ್ಯಾಮ್ ಪ್ರಸಾದ್ ಮುಖರ್ಜಿ, ಗೋವಿಂದ ವಲ್ಲಭಪಂತ್, ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಕೆ.ಟಿ. ಷಾ. ಕೆ.ಎಂ.ಪಣಿಕರ್. ಎನ್. ಜಿ. ಅಯ್ಯಂಗಾರ್, ಪಿ. ಜಿ. ಮೆನನ್, ಎಂ. ಎ. ಶ್ರೀನಿವಾಸನ್ ಮತ್ತು ಬಿ. ಎಚ್. ಜೈದಿ, ಮುಂತಾದವರು ಸದಸ್ಯರು. ಜವಾಹರಲಾಲ್ ನೆಹರು ತಾತ್ಕಾಲಿಕ ಸರ್ಕಾರವನ್ನು ರಚಿಸಿದಾಗ, ಜಗಜೀವನ್ ರಾಮ್ ಅದರ ಅತ್ಯಂತ ಕಿರಿಯ ಸಚಿವರಾದರು. ಸ್ವಾತಂತ್ರ‍್ಯದ ನಂತರ, ಅವರನ್ನು ದೇಶದ ಮೊದಲ ಕಾರ್ಮಿಕ ಸಚಿವರನ್ನಾಗಿ ನೇಮಿಸಲಾಯಿತು. ರೈಲ್ವೆ, ಆಹಾರ ಮತ್ತು ಕೃಷಿ, ಸಾರಿಗೆ ಮತ್ತು ಸಂವಹನ, ನೀರಾವರಿ ಮತ್ತು ರಕ್ಷಣೆ ಸೇರಿದಂತೆ ವಿವಿಧ ಖಾತೆಗಳನ್ನು ಸಹ ಹೊಂದಿದ್ದರು. ಅವರು ರಕ್ಷಣಾ ಸಚಿವರಾಗಿದ್ದಾಗ ೧೯೭೧ರ ಭಾರತ-ಪಾಕಿಸ್ತಾನ ಯುದ್ಧ ನಡೆಯಿತು. ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರು ಭಾರತದ ಉಪ ಪ್ರಧಾನಿಯೂ ಆದರು.
ಜಗಜೀವನ್ ರಾಮ್ ೧೯೩೬ ರಿಂದ ೧೯೮೬ ರವರೆಗೆ ನಿರಂತರವಾಗಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಇದು ವಿಶ್ವ ದಾಖಲೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಾಲ (೩೦ ವರ್ಷಗಳು) ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತೊಂದು ದಾಖಲೆಯನ್ನೂ ಅವರು ಹೊಂದಿದ್ದಾರೆ. ಬಾಬೂಜಿ ಸಾಮಾಜಿಕ ಸಮಾನತೆ ಮತ್ತು ಶೋಷಿತ ವರ್ಗಗಳಿಗೆ ಸಮಾನ ಹಕ್ಕುಗಳ ಪ್ರತಿಪಾದಕರಾಗಿದ್ದರು.
ಜಗಜೀವನರಾಮ್ ಜುಲೈ ೬, ೧೯೮೬ರಂದು ನಿಧನರಾದರು. ಅವರ ಸಮಾಧಿ ಸ್ಥಳದಲ್ಲಿ ಅವರ ಸ್ಮಾರಕಕ್ಕೆ ‘ಸಮತಾ ಸ್ಥಳ’ ಎಂದು ಹೆಸರಿಸಲಾಗಿದೆ.