ಸ್ವಚ್ಛತೆ ವಿಕಸಿತ ಭಾರತಕ್ಕೆ ಭದ್ರಬುನಾದಿ

ಒಟ್ಟು ಸ್ವದೇಶಿ ಉತ್ಪಾದನೆಯಲ್ಲಿ ಭಾರತ ಜಗತ್ತಿನ ಐದನೇ ಅತಿದೊಡ್ಡ ದೇಶ. ಸಂಪೂರ್ಣ ಸ್ವಚ್ಛತೆ ಮತ್ತು ಜನರ ಸ್ವಾಸ್ಥ್ಯವನ್ನು ಸಾಧಿಸುವುದರ ಮೂಲಕ ೨೦೪೭ರ ಹೊತ್ತಿಗೆ ವಿಕಸಿತ ಭಾರತದ ಕನಸು ನನಸಾಗಬೇಕಿದೆ. ವಿಕಸಿತ ಭಾರತದಲ್ಲಿ ಕೇವಲ ರಾಷ್ಟ್ರೀಯ ಉತ್ಪಾದನೆಯ ಹೆಚ್ಚಳಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರ ಜೊತೆಗೆ ಉತ್ತಮವಾದ ಆರೋಗ್ಯ, ಶಿಕ್ಷಣ, ಯೋಗಕ್ಷೇಮ, ಸಂತೋಷಭರಿತ ಹೆಚ್ಚಳ ಮತ್ತು ಪರಿಸರ ಮಾಲಿನ್ಯ ಮುಕ್ತ ಜೀವನ ನಡೆಸುವುದಾಗಿದೆ. ಸ್ವಚ್ಛತೆ, ಆರೋಗ್ಯ, ಶಿಕ್ಷಣ ಮತ್ತು ರಾಷ್ಟ್ರೀಯ ಆದಾಯ ಇವುಗಳ ನಡುವೆ ಅವಿನಾಭಾವ ಸಂಬಂಧವಿದೆ. ಸ್ವಚ್ಛತೆಯಿಂದ ಆರೋಗ್ಯ, ಆರೋಗ್ಯದಿಂದ ಉತ್ತಮ ಜ್ಞಾನ ಸಂಪಾದನೆ ಸಾಧ್ಯ. ಇದು ಮಾನವ ಸಂಪತ್ತಿನ ಗುಣಮಟ್ಟದ ಅಭಿವೃದ್ಧಿಗೆ ಕಾರಣವಾಗಿ ಜನರ ಉತ್ಪಾದನಾ ಶಕ್ತಿ ಅಧಿಕಗೊಳ್ಳುತ್ತದೆ. ಆ ಮೂಲಕ ಜನರ ಆದಾಯ ಹೆಚ್ಚಾಗಿ ಸಂತೋಷಭರಿತವಾದ ಜೀವನ ನಡೆಸಲು ಸಾಧ್ಯವಿದೆ.
ಹೀಗಾಗಿ ಆರೋಗ್ಯವು ದೇಶದ ನಿಜವಾದ ಸಂಪತ್ತಾಗಿದ್ದರಿಂದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜನರ ಆರೋಗ್ಯ ಸುಧಾರಣೆಗೆ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮ, ಕೇಂದ್ರೀಯ ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮ, ಸಂಪೂರ್ಣ ನೈರ್ಮಲ್ಯ ಕಾರ್ಯಕ್ರಮ, ನಿರ್ಮಲ ಭಾರತ ಅಭಿಯಾನ ಮುಂತಾದ ಕಾರ್ಯಕ್ರಮಗಳು ತೃಪ್ತಿಕರ ಫಲಿತಾಂಶ ನೀಡಲಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ೭೫ನೇ ಸ್ವಾತಂತ್ರ್ಯ ದಿನದಂದು, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ೧೫೦ನೇ ಜನ್ಮದಿನದ ಸ್ಮರಣಾರ್ಥ ಅಕ್ಟೋಬರ್ ೨, ೨೦೧೯ರೊಳಗೆ `ಸ್ವಚ್ಛ ಮತ್ತು ಬರ್ಹಿದೆಶೆ ಮುಕ್ತ ಭಾರತ’ ಗುರಿ ಸಾಧನೆ ಮಾಡುವುದಾಗಿ ಘೋಷಿಸಿದರು.
ನಿರ್ಮಲ ಭಾರತ ಅಭಿಯಾನದ ಮೊದಲ ಹಂತದಲ್ಲಿ (೨೦೧೨-೨೦೧೯) ಬಯಲುಶೌಚ ಮುಕ್ತ ಭಾರತಕ್ಕೆ ಹೆಚ್ಚು ಒತ್ತು ನೀಡಿದರೆ, ಎರಡನೆಯ ಹಂತದಲ್ಲಿ (೨೦೨೦-೨೦೨೫) ಬಹಿರ್ದೆಶೆ ಮುಕ್ತ ಪ್ಲಸ್ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಅಂದರೆ ಶೌಚಾಲಯಗಳ ನಿರ್ಮಾಣ ಮತ್ತು ಅವುಗಳ ಸಂಪೂರ್ಣ ಬಳಕೆಯನ್ನು ಮೀರಿ (ಸ್ವಚ್ಛ ಭಾರತ್ ಮಿಷನ್-ಮೊದಲನೆ ಹಂತ) ಬಯಲು ಮಲವಿಸರ್ಜನೆ ಮುಕ್ತ ಸ್ಥಿತಿ, ಘನ, ಪ್ಲಾಸ್ಟಿಕ್, ದ್ರವ ತ್ಯಾಜ್ಯ, ಮಲದ ಕೆಸರು ನಿರ್ವಹಣೆ, ತಿಳುವಳಿಕೆ ನೀಡುವುದು, ಶಿಕ್ಷಣ, ನಡವಳಿಕೆಯ ಬದಲಾವಣೆ ಮುಂತಾದ ಕ್ರಮಗಳು ಇದರಲ್ಲಿ ಒಳಗೊಂಡಿವೆ. ಇದು ದೇಶಾದ್ಯಂತ ಲಕ್ಷಾಂತರ ಜನರ ಆರೋಗ್ಯ ಮತ್ತು ಯೋಗಕ್ಷೇಮ ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಯೋಜನೆ ಸುಮಾರು ೩ ಲಕ್ಷ ಅಂದರೆ ಶೇ. ೫೦ರಷ್ಟು ಗ್ರಾಮಗಳಲ್ಲಿ ಇದು ಸಂಪೂರ್ಣವಾಗಿ ಯಶಸ್ಸು ಕಂಡಿದೆ. ೨೦೨೪-೨೫ರೊಳಗೆ ಇನ್ನುಳಿದ ಎಲ್ಲ ಗ್ರಾಮಗಳಲ್ಲಿ ಈ ಯೋಜನೆ ಜಾರಿಗೊಳಿಸಿ ಸ್ವಚ್ಛ ಭಾರತ ಮಿಷನ್ ಪ್ಲಸ್ ಹಂತ-೨ ಸಾಧಿಸುವ ಗುರಿ ಹೊಂದಿದೆ.
ಜಾಗತಿಕ ಬ್ಯಾಂಕಿನ ಪ್ರಕಾರ, ೨೦೧೪ರಲ್ಲಿ ಶೇ. ೩೩ರಷ್ಟು ಜನರು ಬಯಲು ಮಲವಿಸರ್ಜನೆ ಮಾಡುತ್ತಿದ್ದರೆ, ೨೦೨೨ರಲ್ಲಿ ಅದು ಶೇ. ೧೧ರಷ್ಟಕ್ಕೆ ಕಡಿಮೆಯಾಗಿರುವುದು ಸ್ವಾಗತಾರ್ಹ. ಆದರೆ ಬಹಿರ್ದೆಶೆ ಮುಕ್ತ ಭಾರತ ಗುರಿ ಸಾಧಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರೂ, ಇವತ್ತಿಗೂ ವಾಸ್ತವಿಕವಾಗಿ ಬಹಿರ್ದೆಶೆ ಮುಕ್ತ ಭಾರತದ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಜಂಟಿ ಮೇಲ್ವಿಚಾರಣೆಯ ಕಾರ್ಯಕ್ರಮದ ಪ್ರಕಾರ, ೨೦೨೨ರಲ್ಲಿ ಶೇ. ೧೭ರಷ್ಟು ಗಾಮೀಣ ಪ್ರದೇಶದ ಜನರು ಬಯಲು ಮಲ ವಿಸರ್ಜನೆ ಮಾಡುತ್ತಿದ್ದರೆ, ಶೇ. ೪೧ರಷ್ಟು ಗ್ರಾಮೀಣ ಕುಟುಂಬಗಳು ವೈಯಕ್ತಿಕ ಶೌಚಾಲಯ ಸವಲತ್ತು ಹೊಂದಿವೆ. ಇದು ಸರ್ಕಾರಿ ವರದಿಗಳಲ್ಲಿ ಮಹತ್ತರ ಸಾಧನೆಯಾದರೂ ವಾಸ್ತವಿಕ ಸಂಗತಿ ಬೇರೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿದ್ದರೂ, ಅವುಗಳನ್ನು ಮಲವಿಸರ್ಜನೆಗೆ ಬಳಸುತ್ತಿಲ್ಲ ಎಂಬುದು ದುರದೃಷ್ಟಕರ.
ಬಯಲು ಮಲವಿಸರ್ಜನೆಯಿಂದ ನದಿಗಳು, ಕೆರೆಗಳು ಮತ್ತು ಅಂತರ್ಜಲ ಕಲುಷಿತಗೊಳ್ಳುತ್ತವೆ. ಆ ಮೂಲಕ ಕುಡಿಯುವ ನೀರಿನ ಮೂಲಗಳೂ ಕೂಡ ಕಲುಷಿತಗೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಮಹಿಳೆಯರ ಆತ್ಮಗೌರವ ಮತ್ತು ಘನತೆ ಹಾಳಾಗುವುದಲ್ಲದೆ, ಲೈಂಗಿಕ ಹಲ್ಲೆ ಮತ್ತು ಹಿಂಸಾಚಾರಕ್ಕೆ ತುತ್ತಾಗುವ ಅಪಾಯ ವಿರುತ್ತದೆ. ಬಯಲು ಮಲವಿಸರ್ಜನೆಯಿಂದ ಉಂಟಾಗುವ ರೋಗಗಳ ನಿವಾರಣೆಗಾಗಿ ಆರೋಗ್ಯ ಸೇವೆಗಳ ಮೇಲೆ ಅಧಿಕ ವೆಚ್ಚ ಮಾಡಬೇಕಾಗುತ್ತದೆ. ಇದು ಸಾಮಾಜಿಕ ಕಳಂಕವನ್ನುಂಟು ಮಾಡಿ ಸಾಮಾಜಿಕ ಅಭ್ಯೋದಯಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಶೌಚಾಲಯದ ಕೊರತೆಯಿಂದ ಶಾಲೆಯ ಮಕ್ಕಳ ಕಲಿಕೆ ಮತ್ತು ಆರೋಗ್ಯದ ಮೇಲೂ ಕೆಟ್ಟ ಪರಿಣಾಮವಿದೆ.
ಇಲ್ಲಿ ದೇಶದ ಜನರು ದೈಹಿಕ ಮತ್ತು ಮಾನಸಿಕ ಆರೋಗ್ಯವಂತರಾಗಿ, ಸಂತೋಷಭರಿತ ಜೀವನ ನಡೆಸುವಂತಾಗಬೇಕು. ಅದಕ್ಕಾಗಿ ಜನರಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳನ್ನು ಸಂಪೂರ್ಣವಾಗಿ ಬಳಸುವಂತೆ ಶಿಕ್ಷಣ ಮತ್ತು ತಿಳುವಳಿಕೆ ನೀಡಬೇಕಿದೆ. ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ತರಬೇಕಿದೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಪ್ರಯತ್ನದ ಜೊತೆಗೆ, ಸರ್ಕಾರೇತರ ಸಂಘಗಳು, ಶಿಕ್ಷಣ ಸಂಸ್ಥೆಗಳು, ಮಹಿಳಾ ಮಂಡಳಿ, ಯುವಕ ಮಂಡಳಿ, ನಾಗರಿಕ ಸಮಾಜ ನಿಜವಾದ ಅರ್ಥದಲ್ಲಿ ಸಂಪೂರ್ಣ ಬಯಲುಶೌಚಮುಕ್ತ ಪ್ಲಸ್ ಗುರಿ ಸಾಧನೆಯಲ್ಲಿ ಕೈಜೋಡಿಸಬೇಕು. ಇದರಿಂದ ಸ್ವಚ್ಛ, ವಿಕಸಿತ, ಶ್ರೇಷ್ಠ ಭಾರತದ ಕನಸು ನನಸಾಗಲು ಸಾಧ್ಯ.