ಸಂ.ಕ. ಸಮಾಚಾರ, ಉಡುಪಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯ ತನಿಖೆಯನ್ನು ಎನ್ಐಎ ತನಿಖೆಗೆ ವರ್ಗಾಯಿಸಿದ ಕೇಂದ್ರ ಸರಕಾರದ ಗೃಹ ಇಲಾಖೆ ನಿರ್ಧಾರವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿ ಮತಾಂಧ ಶಕ್ತಿಗಳು ಅಮಾನುಷವಾಗಿ ಬಜ್ಪೆ ಪೇಟೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಮಾಡಿ ಕರಾವಳಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೇ ಸವಾಲು ಹಾಕಿದ ಘಟನೆ ಬಗ್ಗೆ ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಈ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡುವಂತೆ ಮಾಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸುವ ಮೂಲಕ ಸುಹಾಸ್ ಶೆಟ್ಟಿ ತಂದೆ ತಾಯಿಯ ಬೇಡಿಕೆ ಈಡೇರಿಸಿದೆ.
ಈ ತನಿಖೆಯ ಮೂಲಕ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪಾಲ್ಗೊಂಡ ಮತಾಂಧ ಶಕ್ತಿಗಳು, ಆರ್ಥಿಕ ಸಹಕಾರ ನೀಡಿರುವ ಕಾಣದ ಕೈಗಳು ಹಾಗೂ ಕರಾವಳಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ನಿಷೇಧಿತ ಮತೀಯ ಸಂಘಟನೆಗಳ ಕೈವಾಡ ಬಯಲಾಗುವ ವಿಶ್ವಾಸವಿದೆ.
ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕರಾವಳಿ ಜಿಲ್ಲೆಯ ಸಂಸದರು ಹಾಗೂ ಶಾಸಕರಿಗೆ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಯಶಪಾಲ್ ಸುವರ್ಣ ತಿಳಿಸಿದ್ದಾರೆ.