ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ

ಬೀದರ್: ರಾಜ್ಯದಲ್ಲಿಯ ಕಾಂಗ್ರೆಸ್‌ನವರು ಯಾರೇ ಆಗಿರಲಿ ತಿಪ್ಪರಲಾಗ ಹಾಕಿದರು ಕೂಡ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಎಂದು ಸಂಸದ ಮತ್ತು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಪಾದಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಷ್ಟರ ಒಳಗೆ ವಿಧಾನಸಭೆ ಚುನಾವಣೆ ನಡೆಯಬಹುದು, ಕಾದುನೋಡಿ ಎಂದರು.
ಡಿ.ಕೆ. ಶಿವಕುಮಾರ್ ಜ್ಯೋತಿಷ್ಯ ನಂಬುತ್ತಾರೆ. ನೀವು ಮುಖ್ಯಮಂತ್ರಿಯಾಗುತ್ತೀರಿ ಎಂದು ಅವರಿಗೆ ಜ್ಯೋತಿಷಿಗಳು ಹೇಳಿರಬಹುದು ಎಂದು ಕಾರಜೋಳ ವ್ಯಂಗ್ಯದ ದಾಟಿಯಲ್ಲಿ ಹೇಳಿದರು. ಈ ಹಿಂದೆ ದೇವರಾಜ್ ಅರಸ್ ಹಾಗೂ ವಿರೇಂದ್ರ ಪಾಟೀಲ್‌ರಿಗೆ ಆಗಿದ್ದ ಸ್ಥಿತಿ ಡಿ.ಕೆ.ಶಿವಕುಮಾರ್ ಅವರಿಗೂ ಕೂಡ ಆಗುತ್ತದೆ ಎಂದರು. ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ೨೦ ಸೀಟುಗಳು ಕೂಡ ಬರುವುದಿಲ್ಲ. ಲೋಕಸಭೆಗೆ ಈಗ ಚುನಾವಣೆ ನಡೆದರೆ ರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ೪೦ ಸೀಟುಗಳು ಕೂಡ ಬರುವುದಿಲ್ಲ ಎಂದು ಪ್ರತಿಪಾದಿಸಿದರು.