ಸಾರಿಗೆ ಸಂಸ್ಥೆ ಬಸ್ ಪಲ್ಟಿ: ಹಲವರಿಗೆ ಗಾಯ

ಮಂಡ್ಯ: ಸಾರಿಗೆ ಸಂಸ್ಥೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ನಡೆದಿದೆ.
ನಗರದ ಹೊರವಲಯದ ಮೈಸೂರು-ಬೆಂಗಳೂರು ಹೆದ್ದಾರಿಯ ಸ್ಯಾಂಜೋ ಆಸ್ಪತ್ರೆ ಎದುರುಗಡೆ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ತುಮಕೂರಿನಿಂದ ಮದ್ದೂರು ಮಾರ್ಗವಾಗಿ ಮೈಸೂರಿಗೆ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಎದುರಿಗೆ ಬಂದ ಗೂಡ್ಸ್ ಟೆಂಪೋಗೆ ಢಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಸ್‌ ಉರುಳಿಬಿದ್ದ ಪರಿಣಾಮ 35ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ, ಗಾಯಾಳುಗಳನ್ನುಸಾರ್ವಜನಿಕರು ಬಸ್ಸಿನಿಂದ ಹೊರ ತೆಗೆದು ಹತ್ತಿರದಲ್ಲಿರುವ ಸ್ಯಾಂಜೋ ಆಸ್ಪತ್ರೆ ಮತ್ತು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೋಲೀಸರು ಆಗಮಿಸಿ ಪಲ್ಟಿಯಾಗಿದ್ದ ಬಸ್ ಅನ್ನು ಕ್ರೇನ್ ಮೂಲಕ ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.