ಸರ್ಕಾರ ಗಟ್ಟಿಯಾಗಿದೆ

ಕುಷ್ಟಗಿ: ಸಿದ್ದರಾಮಯ್ಯನವರ ಸರ್ಕಾರ ಗಟ್ಟಿಯಾಗಿದೆ. ಬಿಜೆಪಿಯದ್ದು ಮನೆಯೊಂದು 36 ಬಾಗಿಲು ಆಗಿವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.
ತಾಲ್ಲೂಕಿನ ಕೊರಡಕೇರಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಒಣ ಬಡದಾಟದಲ್ಲಿ ನಿರತರಾಗಿದ್ದಾರೆ. ಒಳಒಳಗೆ ಗೊಂದಲ ಸೃಷ್ಟಿಯಾಗಿದೆ. ಬಿಜೆಪಿಯಲ್ಲಿ ಏನು ಉಳಿದಿಲ್ಲ ಎಂದರು.
ಜನಾಕ್ರೋಶ ಯಾತ್ರೆಯಿಂದ ಏನು ಆಗುವುದಿಲ್ಲ. ಜನರು ಬೇಸತ್ತು ಬಿಜೆಪಿಯನ್ನು ಮನೆಗೆ ಕಳಿಸಿದ್ದಾರೆ. ಕಾಂಗ್ರೆಸ್ ಪರವಾಗಿ ಜನ ಇದ್ದಾರೆ. ಅದರಲ್ಲೂ ವಿಶೇಷವಾಗಿ ಸಿಎಂ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯಿಂದ ಜನರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಜನರಿಗೆ ಒಳಿತು ಮಾಡಿದೆ. ಸಾಕಷ್ಟು ಬಾರಿ ಬಜೆಟ್ ಮಂಡಿಸುವ ಮೂಲಕ, ಅನುದಾನ ಮೀಸಲಿಟ್ಟ ಬಗ್ಗೆ ಬಿಜೆಪಿಯವರು ತಿಳಿದುಕೊಂಡು ಮಾತನಾಡಬೇಕು. ಆದರೆ, ಇಲ್ಲಸಲ್ಲದ ಮಾತುಗಳಿಂದ ಏನು ಆಗುವುದಿಲ್ಲ ಎನ್ನುವುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮುಡಾ ಹಗರಣದಲ್ಲಿ ಸಿಎಂ ಪಾತ್ರ ಏನೂ ಇಲ್ಲ ಎಂಬುವುದರ ಬಗ್ಗೆ ಈಗಾಗಲೇ ಬಿ-ರಿಪೋರ್ಟ್ ಸಲ್ಲಿಕೆಯಾಗಿದೆ. ರಾಜ್ಯ ಸರ್ಕಾರದಿಂದ ಜಾತಿಗಣತಿ ಮಾಡಿಸಲು ಬರುವುದಿಲ್ಲ. ಬದಲಿಗೆ ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿಗಣತಿ ಮಾಡಿಸಿಲು ಅವಕಾಶ ಇರುತ್ತದೆ. ಸಿಎಂ ಹಾಗೂ ಉಪಮುಖ್ಯಮಂತ್ರಿ ಅವರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕತೆಯ ಸ್ಥಿತಿ-ಗತಿ ಕುರಿತು ರಾಜ್ಯಕ್ಕೆ ಗೊತ್ತು ಮಾಡಬೇಕೆಂಬ ಉದ್ದೇಶದಿಂದ ಮಾಡಿಸಿರುವ ಸರ್ವೇ ಆಗಿದೆಯೇ ಹೊರತು ಜಾತಿಗಣತಿ ಅಲ್ಲ ಎನ್ನುವುದನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಯೋಜನೆಗಳನ್ನು ಬಡವರಿಗೆ ಮುಟ್ಟಿಸಬೇಕೆಂಬ ಉದ್ದೇಶದಿಂದ ಸರ್ವೇ ಮಾಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.