ಸರ್ಕಾರಿ ಗೌರವದೊಂದಿಗೆ ಪ್ರೊ. ಅಯ್ಯಪ್ಪನ್ ಅಂತ್ಯಕ್ರಿಯೆ

ಮಂಡ್ಯ: ನಿಗೂಢವಾಗಿ ನಾಪತ್ತೆಯಾಗಿದ್ದ ಕೃಷಿ ವಿಜ್ಞಾನಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ನಿವೃತ್ತ ನಿರ್ದೇಶಕ, ‘ಪದ್ಮಶ್ರೀ’ ಪುರಸ್ಕೃತ ಪ್ರೊ. ಸುಬ್ಬಣ್ಣ ಅಯ್ಯಪ್ಪನ್(70) ಅವರ ಮೃತದೇಹ ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಯಲ್ಲಿ ಶನಿವಾರ ಮಧ್ಯಾಹ್ನ ಪತ್ತೆಯಾಗಿದ್ದು, ಅವರ ಅಂತ್ಯಕ್ರಿಯೆ ಇಲ್ಲಿನ ಬಂಬೂಬಜಾರ್ ಬಳಿಯ ಜೋಡಿ ತೆಂಗಿನಮರ ಮುಕ್ತಿಧಾಮದಲ್ಲಿ ಭಾನುವಾರ ಸಂಜೆ ನಡೆಯಿತು.
ತ್ರಿವರ್ಣಧ್ವಜವನ್ನು ಹೊದಿಸಿ, ರಾಷ್ಟ್ರಗೀತೆ ನುಡಿಸಿ, ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ಶ್ರೀರಂಗಪಟ್ಟಣ ಬಳಿಯ ಕಾವೇರಿ ನದಿಯಲ್ಲಿ ಮೃತದೇಹವು ಕೊಳೆಯುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈಸೂರಿನ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದ ಅಕ್ಕಮಹಾದೇವಿ ರಸ್ತೆಯ ಮನೆಯಲ್ಲಿ ವಾಸವಿದ್ದರು. ಶ್ರೀರಂಗಪಟ್ಟಣದ ಸಾಯಿಬಾಬಾ ಆಶ್ರಮದ ಸಮೀಪ ಮೂರು ದಿನದ ಹಿಂದೆ ಕಾವೇರಿ ನದಿಯ ದಡದಲ್ಲಿ ಅವರ ಸ್ಕೂಟರ್ ದೊರಕಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 7ರಂದು ಮನೆಯಿಂದ ಹೋದವರು ನಾಪತ್ತೆಯಾಗಿ, ಮೊಬೈಲ್ ಫೋನ್ ಮನೆಯಲ್ಲಿ ಬಿಟ್ಟಿದ್ದಾರೆ ಎಂದು ಕುಟುಂಬದವರು ಮೈಸೂರಿನ ವಿದ್ಯಾರಣ್ಯಪುರಂ ಠಾಣೆಗೆ ದೂರು ನೀಡಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೈಸೂರಿನ ರಾಮಕೃಷ್ಣ ಆಶ್ರಮ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿ ತಟಕ್ಕೆ ಅಯ್ಯಪ್ಪನ್ ಅವರು ಧ್ಯಾನ ಮಾಡಲು ಹೋಗುತ್ತಿದ್ದರು. ಅಲ್ಲಿಯೇ ಅವರ ಮೃತದೇಹ ದೊರಕಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.