ಏನನ್ನಾದರೂ ಅಪೇಕ್ಷಿಸುವುದು ತಪ್ಪಲ್ಲ. ಆದರೆ, ಹೇಗಾದರೂ ಮಾಡಿ ಅದನ್ನು ಪಡೆಯಬೇಕೆನ್ನುವುದು ತಪ್ಪು. ಋಗ್ವೇದ ನಿರೂಪಿಸುವಂತೆ; “ನ ಋತೇಶ್ರಾಂತಸ್ಯ ಸಖ್ಯಾಯ ದೇವಾಃ”-ಯಾರು ಶ್ರಮವಹಿಸುವುದಿಲ್ಲವೋ ಅವರೊಂದಿಗೆ ಭಗವಂತನೂ ಗೆಳೆತನ ಮಾಡುವುದಿಲ್ಲ. ಆದ್ದರಿಂದ ಶ್ರಮವೇ ಸಂಪತ್ತಿಗೂ ಒಳ್ಳೆಯ ಬಾಳ್ವೆಗೂ ಹೆಗ್ಗುರುತು. ಶ್ರಮದಿಂದಲೇ ಶ್ರೀರಾಮನೂ ಸಹ ಕಾಡಿನಲ್ಲಿ ಕಷ್ಟವನ್ನನುಭವಿಸಿ ರಾಕ್ಷಸರ ಸೈನ್ಯವನ್ನು ನಾಶಮಾಡುವಂತಾಯಿತು.
ಪ್ರತಿ ಹಗಲೂ ಮಾನವನನ್ನು ಪರೀಕ್ಷೆಗೊಳಗಾಗಿಸುತ್ತದೆ. ಸಂಜೆಯ ಹೊತ್ತಿಗೆ ನಿರ್ಣಯ ನೀಡುತ್ತದೆ. ಎಷ್ಟು ಸತ್ಯ! ಎಷ್ಟು ಜನಕ್ಕೆ ಈ ಜೀವನಪರೀಕ್ಷೆಯ ಅರಿವಿದೆ? ಈ ಸತ್ಯದ ಅರಿವಿಲ್ಲದವರಿಗೆ ಅವರಿಗೆ ತಿಳಿಯದೆಯೇ ಜೀವನವೆಲ್ಲವೂ ವ್ಯರ್ಥವಾಗುತ್ತದೆ. ಕ್ಷಮೆಯೆಂಬುದು ಮಾನವ ಏನು ಮಾಡಿದರೆಂಬುದರ ಬಗ್ಗೆ ಒಪ್ಪಿಕೊಳ್ಳುವುದಲ್ಲ; ಅದು ನೀವು ಘಾಸಿಗೊಳಿಸಿದವರ ಅಶಕ್ತತೆ ಸೂಚಿಸುತ್ತದೆ. ನೀವೂ ಅವರ ಸ್ಥಿತಿಯಲ್ಲಿದ್ದರೆ ಅದನ್ನೇ ಮಾಡುತ್ತಿದ್ದಿರಿ. ಮಾನವನಿಗೆ ಕೊಟ್ಟಿರುವಂತಹ ಅತ್ಯಂತ ಸೃಜನಾತ್ಮಕ ಕ್ರಿಯೆಯೆಂದರೆ ಹಿಂದಿನ ಗಾಯಗಳನ್ನು ಮರೆಯುವುದು, ಬೇರೆಯವರನ್ನು ಕ್ಷಮಿಸುವುದು. ಕ್ಷಮೆಯೆಂಬುದು ಭಗವಂತ ನೀಡಿರುವ ಕೊಡುಗೆ. ಅದು ಅನ್ಯಸಾಮರಸ್ಯಕ್ಕೆ ಒಂದಾಗಿ ನಾವು ಜೀವನದಲ್ಲಿ ನಡೆದ ಘಟನೆಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಕ್ಷಮೆಯೇ ಅಧ್ಯಾತ್ಮದ ಜೀವಾಳ. ಏಕೆಂದರೆ ಅದು ನಮ್ಮನ್ನು ನೋವಿನನುಭವದಿಂದ ಪಾರುಮಾಡುತ್ತದೆ.
ತಾವಾಗಿಯೇ ಆಯ್ಕೆ ಮಾಡಿಕೊಂಡಿದ್ದೇವೆ ಎಂಬುದನ್ನು ಮರೆತು ತನ್ನ ಸ್ವಭಾವ ತಮ್ಮ ಸಂಸ್ಕಾರದ ದೆಸೆಯಿಂದ ಬಂದ ಗುರುತು ಎಂಬಂತೆ ನಡೆದುಕೊಳ್ಳುವವರೇ ಹೆಚ್ಚು. ಉದಾಹರಣೆಗೆ; ಆಗಾಗ್ಗೆ ಕ್ರೋಧದ ದಾಳಿಗೆ ಒಳಗಾಗುವ ವ್ಯಕ್ತಿಯನ್ನು ಗಮನಿಸಿ. ಇಂತಹವರಿಗೆ ಕೋಪದ ಪ್ರಚೋದನೆ ಎಂಬುದು ತಮಗರಿವಿಲ್ಲದಂತೆಯೇ ಎಲ್ಲಿಂದಲೋ ತಮ್ಮನ್ನು ನಿಯಂತ್ರಿಸುತ್ತಿರುವ ಒಂದು ಸ್ಥಿತಿ ಎಂದೇ ಭಾವಿಸುತ್ತಾರೆ. ಇವರಲ್ಲಿ ಇದು ಹಂತ ಹಂತಗಳಲ್ಲಿ ತೆರೆದುಕೊಳ್ಳುತ್ತದೆ: ಮೊದಲನೆಯದಾಗಿ, ಎದೆಯಲ್ಲಿ ಸಂಕೋಚನ; ತಲೆನೋವಿನ ಅನುಭವ; ತ್ವರಿತವಾಗುವ ಹೃದಯಬಡಿತ; ಉಸಿರಾಟದಲ್ಲಿ ಬಿಗಿತ ಮುಂತಾದ ದೈಹಿಕ ಲಕ್ಷಣಗಳ ಮೂಲಕ ವಿವಿಧ ಹಂತಗಳಲ್ಲಿ ಪ್ರಕಟವಾಗುತ್ತದೆ. ನಂತರದಲ್ಲಿ ಉದ್ವೇಗಕ್ಕೆ ಒಳಗಾಗುತ್ತಾರೆ. ಕೋಪದ ತೀವ್ರತೆ ಏರುತ್ತಾ ಹೋಗಿ ವ್ಯಕ್ತಿಯಲ್ಲಿ ದೈಹಿಕ ಮತ್ತು ಭಾವನಾತ್ಮಕವಾದ ಒತ್ತಡವನ್ನು ಸೃಷ್ಟಿಸಿದಾಗ ದೇಹವು ಈ ಅನಿರೀಕ್ಷಿತ ಅಸ್ವಸ್ಥತೆಯನ್ನು ದೇಹದಿಂದ ಹೊರಹಾಕಲು ಬಯಸುತ್ತದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಮನಸ್ಸು ಸುಪ್ತಭಾವನೆಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತದೆ. ಈ ಹಂತದಲ್ಲಿ ವ್ಯಕ್ತಿಯು ಪೂರ್ಣ ಪ್ರಮಾಣದ ದಾಳಿಯನ್ನು ಸಮರ್ಥಿಸಲು ಒಂದು ಕಾರಣವನ್ನು ಹುಡುಕುತ್ತಾನೆ. ಅಂತಿಮವಾಗಿ ಕ್ರೋಧವು ತನ್ನ ಪೂರ್ಣರೂಪದಲ್ಲಿ ಸ್ಫೋಟಗೊಳ್ಳುತ್ತದೆ. ಈ ಭಾವಾವೇಶದ ಪರಿಸ್ಥಿತಿ ಪೂರ್ಣವಾಗಿ ಶಾಂತಗೊಂಡ ನಂತರದಲ್ಲಿ ತನ್ನಿಂದ ಉಂಟಾದ ಹಾನಿಯನ್ನು ವ್ಯಕ್ತಿ ಅರಿತುಕೊಳ್ಳುತ್ತಾನೆ. ಈ ಘಟನಾಚಕ್ರ ಕೊನೆಗೆ ಪಶ್ಚಾತ್ತಾಪದಲ್ಲಿ ಮುಕ್ತಾಯಗೊಂಡ ನಂತರದಲ್ಲಿ ಅವಮಾನ ಮತ್ತು ಅಪರಾಧಿಪ್ರಜ್ಞೆ ಉಂಟಾಗಿ ಭವಿಷ್ಯದಲ್ಲಿ ಇನ್ನೆಂದೂ ಇದು ಸಂಭವಿಸುವುದಿಲ್ಲ ಎಂಬ ಸಂಕಲ್ಪವನ್ನು ಕೈಗೊಳ್ಳುತ್ತಾನೆ. ಇಂತಹ ಯಾವನೇ ವ್ಯಕ್ತಿಗೆ ಮುಕ್ತ ಆಯ್ಕೆಯನ್ನು ಮರುಪಡೆಯುವುದು ಕಷ್ಟಸಾಧ್ಯವೇ ಆಗಿರುತ್ತದೆ. ಪ್ರಚೋದನೆ ಉಲ್ಬಣಗೊಳ್ಳುತ್ತಿರುವ ಹಂತದಲ್ಲೇ ಒತ್ತಡವು ಬಿಡುಗಡೆಯ ದಾರಿಯನ್ನು ಕಂಡುಕೊಳ್ಳಬೇಕು. ಆ ದಾರಿಯೇ ಸಹಿಷ್ಣುತೆ.
ಹಿಂದಿನ ವಿಷಕಾರಿ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಮಂದಿ ಕ್ರಮೇಣ ಇಂತಹ ಸ್ವಭಾವಕ್ಕೆ ಹೊಂದಿಕೊಳ್ಳುತ್ತಾರೆ ಮತ್ತು ಇದಕ್ಕೆ ಸಮರ್ಥನೆಯಾಗಿ ತಮ್ಮ ಅನಿಸಿಕೆಗಳನ್ನು ಒಂದರ ನಂತರ ಒಂದರಂತೆ ಸೇರಿಸುತ್ತಲೇ ಹೋಗುತ್ತಾರೆ. ಬಾಲ್ಯಕಾಲದ ಘಟನಾವಳಿಗಳ ಅನುಭವಗಳು ಪದರ ಪದರಗಳಾಗಿ ಮನಸ್ಸಿನಲ್ಲಿ ಆಳವಾಗಿ ಬೇರೂರಿ ತಮ್ಮ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತವೆ. ಈ ಕಾರಣದಿಂದಾಗಿಯೇ ಪ್ರೌಢಾವಸ್ಥೆ ತಲುಪಿದ ಬಳಿಕದಲ್ಲಿಯೂ ಕೆಲವೊಮ್ಮೆ ಬಾಲ್ಯದ ನೆನಪುಗಳಿಂದಾಗಿ ಇದ್ದಕ್ಕಿದ್ದಂತೆ ಮಕ್ಕಳಂತೆ ಭಯಭೀತರಾಗುವುದಿದೆ. ಇದು ಬಾಲ್ಯದ ಸಂಸ್ಕಾರಗಳು ಹಳೆಯ ಮತ್ತು ಹಳಸಿದ ಅನುಭವಗಳ ಜಂಜಾಟದ ಮೂಲಕ ವ್ಯಕ್ತಿಯ ಮನಸ್ಸನ್ನು ಆಳುವ ವಿಧಾನ. ಸಂಗ್ರಹಿತ ನೆನಪುಗಳು ಒಂದೇ ಸಂದೇಶವನ್ನು ಪದೇ ಪದೇ ಕಳಿಸುವ ಪ್ರೋಗ್ರಾಂ ಮಾಡಲಾದ ಮೈಕ್ರೋಚಿಪ್ನಂತೆ ಕೆಲಸ ಮಾಡುತ್ತದೆ. ವ್ಯಕ್ತಿಯು ಒಂದುವೇಳೆ ತನ್ನ ನಡವಳಿಕೆಯನ್ನು ಬದಲಿಸುವ ಪ್ರಯತ್ನದಲ್ಲಿ ತೊಡಗಿದಾಗಲೆಲ್ಲ “ಸಂದೇಶವನ್ನು ಬದಲಿಸಲು ಪ್ರಯತ್ನಿಸುವುದು ಒಳ್ಳೆಯದಲ್ಲ” ಎಂಬ ಸಿದ್ಧ ಸಂದೇಶವನ್ನು ರವಾನಿಸುತ್ತದೆ. ಮನಸ್ಸನ್ನು ಪಳಗಿಸಲು ಪ್ರಯತ್ನಿಸುವ ಬಹುಮಂದಿ ಇಂತಹ ಇಷ್ಟವಿಲ್ಲದ ಸಂದೇಶವನ್ನು ಸ್ವೀಕರಿಸಿ ಪರಿಸ್ಥಿತಿಯ ನಿರ್ವಹಣಾ ಕುಶಲತೆ (ಮ್ಯಾನಿಪ್ಯುಲೇಷನ್), ನಿಯಂತ್ರಣ ಅಥವಾ ನಿರಾಕರಣೆಯ ನಡವಳಿಕೆಯ ಮೂಲಕ ಪ್ರತಿಕ್ರಿಯಿಸುತ್ತಾನೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಮೂರೂ ನಡವಳಿಕೆಗಳು ವ್ಯಕ್ತಿಯಿಂದ ಮನಸ್ಸಿನ ಅಸ್ವಸ್ಥತೆಯನ್ನು ರೋಗಲಕ್ಷಣದ ಬದಲಾಗಿ ದುಃಖದ ಕಾರಣವೆಂದೇ ಪರಿಗಣಿಸಿದ ಕಾರಣವಾಗಿ ಹೊರಬಂದ ಪ್ರತಿಕ್ರಿಯೆಯಾಗಿರುತ್ತದೆ. ಇಂತಹ ಮನೋಭಾವನೆ ಪ್ರಚಂಡ ನಕಾರಾತ್ಮಕ ಪರಿಣಾಮಗಳನ್ನು ಹೊಂದಿರುತ್ತದೆ.
“ಈ ಕ್ಷಣದಲ್ಲಿ ಸಂಪೂರ್ಣವಾಗಿ ಬದುಕುವ” ಮೂಲಕ ಅನುಭವದಿಂದ ಹೆಚ್ಚಿನದನ್ನು ಸಾಧಿಸುವುದು ಸಾಧ್ಯ. ಜಾಹೀರಾತು ಮುಂತಾದ ಪ್ರಚಾರ ಮಾಧ್ಯಮಗಳಿಂದ ಬಾಹ್ಯಪ್ರಪಂಚದಲ್ಲಿ ಇಂದ್ರಿಯಗಳ ಮೂಲಕ ಕಾಣಸಿಗುವ ಕಲ್ಪಿತ ಸಂವೇದನೆಗಳು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಅವುಗಳ ವಾಸ್ತವ ಅರ್ಥ ಮತ್ತು ಭಾವನೆಯ ಮಟ್ಟವನ್ನು ಕಂಡುಕೊಂಡರೆ ಮತ್ತು ಆ ಕ್ಷಣವು ನಿಮಗೆ ನಿಜವಾಗಿಯೂ ಮುಖ್ಯವೆಂದು ಅನ್ನಿಸಿದರೆ ಅದನ್ನು ಸಂಪೂರ್ಣವಾಗಿ ಅನುಭವಿಸುವುದು ಗಮನಕ್ಕೆ ಬರುತ್ತದೆ. ನಿಮ್ಮ ಹೃದಯವನ್ನು ಸ್ಪರ್ಶಿಸುವ ಅನುಭವವು ಅರ್ಥವನ್ನು ಹೆಚ್ಚು ವೈಯಕ್ತಿಕವಾಗಿಸುತ್ತದೆ. ಈ ಕ್ಷಣ ಅಥವಾ ಯಾವುದೇ ಕ್ಷಣವನ್ನು ಅನುಭವಿಸುವುದು ಎಂದರೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು' ಎಂದರ್ಥ. ಅಪರಿಚಿತರ ಭೇಟಿ ಇದಕ್ಕೆ ಒಂದು ಒಳ್ಳೆಯ ಉದಾಹರಣೆ. ಪರಸ್ಪರರ ಜೀವನಕ್ಕೆ ಅರ್ಥಪೂರ್ಣವಾದ ಮತ್ತು ಕನಿಷ್ಠ ಒಂದು ನಿಜವಾದ ಭಾವನೆಯನ್ನು ವಿನಿಮಯ ಮಾಡಿಕೊಳ್ಳುವವರೆಗೆ ಪರಸ್ಪರರ ಮನೋಪ್ರಪಂಚವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಸ್ಪಂದನೆ ಎನ್ನುವುದು ಒಂದು ವೃತ್ತಾಕಾರದ ಚಲನೆಯಂತೆ. ನೀವು ಕಳುಹಿಸುವ ಭಾವನಾತರಂಗಗಳ ಸಂವೇದನಾಶೀಲತೆ ಮತ್ತು ಆಳಕ್ಕೆ ಅನುಗುಣವಾಗಿ ಎದುರಿರುವ ವ್ಯಕ್ತಿಯ ಪ್ರತಿಸ್ಪಂದನೆ ಅಥವಾ ಸ್ವೀಕೃತಿ ಇರುತ್ತದೆ. ಇದನ್ನು ಮೂರು ಮಂದಿ ಒಂದೇ ಸೂರ್ಯಾಸ್ತವನ್ನು ವೀಕ್ಷಿಸುವ ವಿಧಾನದಲ್ಲಿ ಅರ್ಥೈಸಿಕೊಳ್ಳಬಹುದು: ಮೊದಲ ವ್ಯಕ್ತಿ ವ್ಯವಹಾರಸ್ಥನಾಗಿದ್ದು ಅವನ ಕಣ್ಣುಗಳು ತಮ್ಮ ರೆಟಿನಾ ಮೇಲೆ ಬೀಳುವ ಫೋಟಾನ್ಗಳನ್ನು ದಾಖಲಿಸುತ್ತಿದ್ದರೂ ಆತ ಸೂರ್ಯಾಸ್ತವನ್ನು ವೀಕ್ಷಿಸಿರುವುದಿಲ್ಲ. ಎರಡನೇ ವ್ಯಕ್ತಿ “ಒಳ್ಳೆಯ ಸೂರ್ಯಾಸ್ತ. ಈ ಹಿಂದೆ ಇಂತಹುದನ್ನು ನೋಡಿರಲಿಲ್ಲ” ಎಂದು ಯೋಚಿಸುತ್ತಾನೆ. ಮೂರನೆಯ ವ್ಯಕ್ತಿ ಸೂರ್ಯಾಸ್ತವನ್ನು ಕಂಡ ತಕ್ಷಣ ಆ ದೃಶ್ಯವನ್ನು ಭಿತ್ತಿಪತ್ರದಲ್ಲಿ ರಚಿಸಲು ಪ್ರಾರಂಭಿಸುತ್ತಾನೆ. ಏಕೆಂದರೆ, ಆತ ಚಿತ್ರಕಲಾವಿದನಾಗಿರುತ್ತಾನೆ. ಈ ಮೂವರ ನಡುವಿನ ವ್ಯತ್ಯಾಸವೆಂದರೆ; ಮೊದಲ ವ್ಯಕ್ತಿ ತನ್ನಿಂದ ಏನನ್ನೂ ರವಾನಿಸಲಿಲ್ಲ ಪ್ರತಿಯಾಗಿ ಏನನ್ನೂ ಹಿಂತಿರುಗಿ ಪಡೆಯಲಿಲ್ಲ. ಎರಡನೆಯ ವ್ಯಕ್ತಿಗೆ ಸೂರ್ಯಾಸ್ತವನ್ನು ಸ್ವೀಕರಿಸುವ ಅವಕಾಶ ಸಿಕ್ಕಿತು ಆದರೆ, ಪ್ರತಿಕ್ರಿಯೆ ಕೇವಲ ಮೌಖಿಕವಾಗಿತ್ತಷ್ಟೇ. ಅದಕ್ಕೆ ಪ್ರತಿಯಾಗಿ ಏನನ್ನೂ ಹಿಂತಿರುಗಿಸುವ ಅರಿವು ಸಾಧ್ಯವಾಗಲಿಲ್ಲ. ಮೂರನೇ ವ್ಯಕ್ತಿ
ಘಟನೆಯ ವೃತ್ತ’ವನ್ನು ಪೂರ್ಣಗೊಳಿಸಿದ.
ಸೂರ್ಯಾಸ್ತವನ್ನು ಸ್ವೀಕರಿಸಿ ಅದನ್ನು ಸೃಜನಶೀಲ ಪ್ರತಿಕ್ರಿಯೆಯನ್ನಾಗಿಸಿ ಚಿತ್ರದ ಮೂಲಕ ಜಗತ್ತಿಗೆ ಒಂದು ಕೊಡುಗೆಯನ್ನು ನೀಡುವಂತೆ ಪ್ರೇರೇಪಿಸಿತು. ನೀವು ಜೀವನವನ್ನು ಸಂಪೂರ್ಣವಾಗಿ ಅನುಭವಿಸಲು ಬಯಸಿದರೆ `ಘಟನಾ ವೃತ್ತ’ವನ್ನು ಪೂರ್ಣಗೊಳಿಸಬೇಕು.