ಹಾವೇರಿ: ಶಾಲೆಗೆ ಪ್ರವೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಪಾಲಕರ ಕಡೆಯಿಂದ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಜಿಲ್ಲೆಯ ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸೋಮವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಸವಣೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಭಾರಿ ಮುಖ್ಯ ಶಿಕ್ಷಕ. ಸವಣೂರು ಖಾದರಭಾಗ ಓಣಿಯ ಅಕ್ಟರ್ ಅಬ್ದುಲ್ ಹಮೀದ ಕಂದಿಲವಾಲೆ ತಮ್ಮ ಎರಡನೇ ಮಗನ ಪ್ರವೇಶಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಶಾಲೆಯ ಪ್ರವೇಶಕ್ಕೆ ರೂ.50ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ ರೂ.10ಸಾವಿರಕ್ಕೆ ಒಪ್ಪಿಕೊಂಡು, ಮೇ 17 ರಂದು ರೂ.5 ಸಾವಿರಗಳನ್ನು ಮುಂಗಡವಾಗಿ ಪಡೆದು, ಬಾಕಿ 5 ಸಾವಿರ ರೂಗಳನ್ನು ಸೋಮವಾರ ಸವಣೂರು ನಗರದ ಹಾವಣಗಿ ಪ್ಲಾಟ್‌ನ ತಮ್ಮ ಮನೆಯಲ್ಲಿ ಪಡೆದು ಕೊಳ್ಳುತ್ತಿರುವಾಗಲೇ ಲೋಕಾಯುಕ್ತರು ರೆಡ್ ಹ್ಯಾಂಡಾಗಿ ಹಿಡಿದು ಬಂಧಿಸಿದ್ದಾರೆ.
ಪ್ರಕರಣದ ತನಿಖೆಯ ಮಾರ್ಗದರ್ಶನವನ್ನು ಲೋಕಾಯುಕ್ತ ಎಸ್ಪಿ ಎಮ್. ಎಸ್. ಕೌಲಾಪುರೆ, ವಹಿಸಿಕೊಂಡಿದ್ದರು. ಡಿವೈಎಸ್‌ಪಿ ಮಧುಸೂದನ ಸಿ. ನೇತೃತ್ವದಲ್ಲಿ ಮಂಜುನಾಥ ಪಂಡಿತ್, ಬಸವರಾಜ ಹಳಬಣ್ಣನವರ, ದಾದಾವಲಿ ಕೆ ಎಚ್. ಹಾಗೂ ಸಿಬ್ಬಂದಿಗಳಾದ ಸಿ.ಎಮ್. ಬಾರ್ಕಿ, ಎಮ್. ಕೆ. ನದಾಫ್, ಬಿ. ಎಮ್. ಕರ್ಜಗಿ, ಎಮ್. ಕೆ. ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್.ಎನ್. ಕಡಕೋಳ, ಮಂಜುನಾಥ ಬಿ.ಎಲ್., ರಮೇಶ ಗೆಜ್ಜಿಹಳ್ಳಿ, ಶಿವರಾಜ ಲಿಂಗಮ್ಮನವರ, ಆನಂದ ಸಂಕಣ್ಣನವರ, ಮಹಾಂತೇಶ ಕೊಂಬಳಿ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಭಾರ ಮುಖ್ಯೋಪಾದ್ಯಾಯ ಮಂಜುನಾಥ ಕಾಟೇನಹಳ್ಳಿ ಅವರನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ.