ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಇಬ್ಬರು ಸಾವು

ದಾವಣಗೆರೆ: ಇಲ್ಲಿನ ಕಾಯಿಪೇಟೆಯಲ್ಲಿನ ದೇವನಗರಿ ಗ್ಯಾಸ್ ಏಜೆನ್ಸಿ ಮಾಲೀಕ ಬಿಜೆಪಿ ಮುಖಂಡ ಹೆಚ್.ಎಂ.ರುದ್ರಮುನಿ ಸ್ವಾಮಿ ಅವರ ಮನೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಬ್ಬರು ಮೃತಪಟ್ಟಿದ್ದಾರೆ.
ಕಾಯಿಪೇಟೆ ನಿವಾಸಿ ವಿಮಲಾ (೭೫) ಹಾಗೂ ಅವರ ಪುತ್ರ ಕುಮಾರ (೩೫) ಮೃತಪಟ್ಟವರು. ಕುಟುಂಬದ ಇನ್ನೂ ನಾಲ್ವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾನೆ ೪ ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಆಗ ಮನೆಯಲ್ಲಿ ಆರು ಜನರಿದ್ದು, ಅವರಲ್ಲಿ ನಾಲ್ಕು ಜನರು ಮನೆಯಿಂದ ಹೊರಬಂದಿದ್ದಾರೆ. ತಾಯಿ, ಮಗ ದಟ್ಟ ಹೊಗೆ ಆವರಿಸಿದ್ದರಿಂದ ಹೊರಬರಲು ಸಾಧ್ಯವಾಗಿಲ್ಲ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೊಠಡಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.