ವಿದ್ಯುತ್ ರಂಗ ದಿವಾಳಿಗೆ ಕಾರಣಕರ್ತರು ಯಾರು?

ನಮ್ಮ ರಾಜ್ಯದ ವಿದ್ಯುತ್ ನಿಗಮಗಳಿಗೆ ದೊಡ್ಡ ಇತಿಹಾಸವಿದೆ. ೧೯೦೨ರಲ್ಲೇ ಇಡೀ ಏಷ್ಯಾದಲ್ಲೇ ಮೊದಲು ಜಲ ವಿದ್ಯುತ್ ಆರಂಭವಾಗಿದ್ದು ಶಿವನಸಮುದ್ರದಲ್ಲಿ. ಈಗಲೂ ಅದು ಕೆಲಸ ಮಾಡುತ್ತಿದೆ. ಕೆಜಿಎಫ್ ಚಿನ್ನದ ಗಣಿಗೆ ವಿದ್ಯುತ್ ಉತ್ಪಾದಿಸಿ ಕೊಡಲು ಈ ಯೋಜನೆ ಆರಂಭಿಸಲಾಯಿತು. ಇಡೀ ರಾಜ್ಯಕ್ಕೆ ಒಂದೇ ವಿತರಣ ಇಲಾಖೆ ಕೆಇಬಿ ೧೯೫೭ರಲ್ಲಿ ಆರಂಭವಾಯಿತು. ವಿದ್ಯುತ್ ಉತ್ಪಾದನೆಗೆ ಪ್ರತ್ಯೇಕ ನಿಗಮ ಕೆಪಿಸಿ ೧೯೭೦ರಲ್ಲಿ ಆರಂಭವಾಯಿತು. ೧೯೯೯ರಲ್ಲಿ ಕೆಪಿಟಿಸಿಎಲ್ ತಲೆ ಎತ್ತಿತು. ಅಂದರೆ ೧೨೨ ವರ್ಷಗಳ ಹಿಂದೆಯೇ ನಮ್ಮ ಹಿರಿಯರಿಗೆ ವಿದ್ಯುತ್ ಕಲ್ಪನೆ ಇತ್ತು. ಉತ್ತಮವಾಗಿದ್ದ ಈ ವ್ಯವಸ್ಥೆ ದಿವಾಳಿಯತ್ತ ಸಾಗಲು ಕಾರಣ ಯಾರು ಎಂಬುದು ಇನ್ನೂ ಗೊತ್ತಿಲ್ಲ.
ರಾಯರ ಕುದುರೆ
ಮೊದಲಿನಿಂದಲೂ ರಾಜ್ಯ ವಿದ್ಯುತ್ ರಂಗ `ರಾಯರ ಕುದುರೆ’ ಆಗಿತ್ತು. ಕಾಲ ಕ್ರಮೇಣ ಅದು ಕತ್ತೆಯಾಗಿದ್ದು ಇಂದಿನ ಕತೆ. ಇದರ ಆರಂಭ ಎಲ್ಲಿಂದ ಎಂಬುದನ್ನು ಹುಡುಕಬೇಕಿದೆ. ಮೊದಲು ಎಂಜಿನಿಯರ್‌ಗಳೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಚೀಫ್ ಎಂಜಿನಿಯರ್ ಒಬ್ಬರೇ ಇದ್ದರು. ಅವರು ತಾಂತ್ರಿಕವಾಗಿ ಉತ್ತಮವಾಗಿದ್ದರು. ಆಗ ಕಂಪ್ಯೂಟರ್ ಇನ್ನೂ ಬಂದಿರಲಿಲ್ಲ. ಸಾಕ್ಷರತೆ ಉತ್ತಮವಾಗಿತ್ತು. ಬ್ರಿಟಿಷರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದರು. ವಿಶ್ವೇಶ್ವರಯ್ಯ ಪ್ರಭಾವದಿಂದ ಎಂಜಿನಿಯರ್ ಶಿಕ್ಷಣಕ್ಕೆ ಮಹತ್ವ ಬಂದಿತ್ತು. ಆಗ ಚೆನ್ನೈ ಮತ್ತು ಪುಣೆ ಹೊರತುಪಡಿಸಿದರೆ ಬೇರೆ ಎಲ್ಲೂ ಎಂಜಿನಿಯರಿಂಗ್ ಶಿಕ್ಷಣ ಇರಲಿಲ್ಲ. ಕಾಲ ಕ್ರಮೇಣ ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ತಲೆ ಎತ್ತಿತು.
ಎಂಜಿನಿಯರ್-ಐಎಎಸ್
೧೯೯೯ವರೆಗೆ ಎಂಜಿನಿಯರ್‌ಗಳ ಸಲಹೆಗೆ ಬೆಲೆ ಇತ್ತು. ರಾಷ್ಟ್ರಮಟ್ಟದಲ್ಲಿ ವಿದ್ಯುತ್ ರಂಗದ ಸುಧಾರಣೆ ನಡೆಯಿತು. ಆಗ ೫ ವಿತರಣ ಕಂಪನಿಗಳು, ಕೆಪಿಟಿಸಿಎಲ್ ಮತ್ತು ಕೆಇಆರ್‌ಸಿ ತಲೆ ಎತ್ತಿತು. ಎಲ್ಲ ಕಡೆ ಐಎಎಸ್ ಅಧಿಕಾರಿಗಳು ವ್ಯವಸ್ಥಾಪಕರಾದರು. ಅಲ್ಲಿಂದ ವಿದ್ಯುತ್ ರಂಗದ ಅವನತಿ ಆರಂಭಗೊಂಡಿತು. ಇದಕ್ಕೆ ಮೂಲ ಕಾರಣ ಐಎಎಸ್‌ಗೆ ತಾಂತ್ರಿಕ ಜ್ಞಾನದ ಕೊರತೆ. ಈಗಲೂ ಇದೇ ಪ್ರಮುಖ ಸಮಸ್ಯೆ. ಎಂಜಿನಿಯರಿಂಗ್ ಸಮಸ್ಯೆಗಳಿಗೆ ಎಂಜಿನಿಯರ್‌ಗಳೇ ಪರಿಹಾರ ಸೂಚಿಸಬೇಕು. ಆ ಕೆಲಸ ಈಗಲೂ ನಡೆಯುತ್ತಿದೆ. ೧೩೨ ಕೆವಿ ವಿದ್ಯುತ್ ಮಾರ್ಗ ಬೇಕಾ ಬೇಡವಾ, ಶರಾವತಿ ಪಂಪ್‌ಡ್ ಸ್ಟೋರೇಜ್ ಸಿಸ್ಟಂ, ಛತ್ತೀಸಗಢ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಅಗತ್ಯವೇ ಇಲ್ಲವೆ ಎಂಬುದನ್ನು ಎಂಜಿನಿಯರ್‌ಗಳೇ ಹೊರತು ಐಎಎಸ್ ಅಧಿಕಾರಿಗಳು ಮತ್ತು ಸಚಿವರಲ್ಲ. ಈಗ ಎಂಜಿನಿಯರ್‌ಗಳ ಹಿತನುಡಿಗಳಿಗೆ ಸರ್ಕಾರದಲ್ಲಿ ಕವಡೆಕಾಸಿನ ಬೆಲೆ ಇಲ್ಲ.
ಎಂಜಿನಿಯರ್‌ಗಳು ಮೂಲೆಗುಂಪು
ಇದರಿಂದ ರಾಜ್ಯದಲ್ಲಿ ಎಂಜಿನಿಯರ್‌ಗಳು ಮೂಲೆಗುಂಪಾಗಿದ್ದಾರೆ. ಕೆಪಿಸಿಯಲ್ಲಿ ಅಚ್ಚ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಎಂಜಿನಿಯರ್‌ಗಳಿದ್ದರು. ಬಹುತೇಕರು ವಿಆರ್‌ಎಸ್ ತೆಗೆದುಕೊಂಡು ದೂರ ಸರಿದಿದ್ದಾರೆ. ಎಸ್ಕಾಂ ಮತ್ತು ಕೆಪಿಟಸಿಎಲ್‌ನಲ್ಲೂ ಇದೇ ಪರಿಸ್ಥಿತಿ. ದಕ್ಷರು, ಪ್ರಾಮಾಣಿಕರ ಸಂಖ್ಯೆ ಇಳಿಮುಖಗೊಂಡಿದೆ. ಮೊದಲಿನಿಂದಲೂ ವಿದ್ಯುತ್ ಇಲಾಖೆ ಮುಖ್ಯಮಂತ್ರಿಗಳ ಕೈಯಲ್ಲೇ ಇದೆ. ಪ್ರತ್ಯೇಕ ಸಚಿವರಿದ್ದರೂ ಮುಖ್ಯಮಂತ್ರಿಗಳ ನಿರ್ಧಾರ ಅಂತಿಮ. ಹೀಗಿದ್ದರೂ ಈ ಇಲಾಖೆ ಹಳ್ಳ ಹಿಡಿಯಲು ಸರ್ಕಾರದ ಅದಕ್ಷತೆಯೇ ಕಾರಣ.
ವಿಚಾರಣೆ ವರದಿಗಳು ಎಲ್ಲಿ
ಹಿಂದೆ ಪ್ರತಿ ಹಂತದಲ್ಲೂ ವಿಚಾರಣೆಗಳು ನಡೆದ ವರದಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ಈಗ ವರದಿಗಳಿಗೆ ಬೆಲೆ ಇಲ್ಲ. ವಿದ್ಯುತ್ ಇಲಾಖೆಯಲ್ಲಿ ಹಿರಿಯ ಎಂಜಿನಿಯರ್‌ಗಳ ಸಮಿತಿ ಇತ್ತು. ಅದು ಪ್ರತಿ ತಿಂಗಳೂ ಸಭೆ ಸೇರಿ ಪರಿಶೀಲನೆ ನಡೆಸುತ್ತಿತ್ತು. ಅದರಲ್ಲಿ ನಿವೃತ್ತ ಎಂಜಿನಿಯರ್‌ಗಳಿದ್ದರು. ಅವರು ಆಗಾಗ್ಗೆ ಇಲಾಖೆಗಳ ಹುಳುಕನ್ನು ತೆಗೆದು ಬಹಿರಂಗಪಡಿಸುತ್ತಿದ್ದರು. ಅದು ಸರ್ಕಾರಕ್ಕೆ ಬೇಕಿರಲಿಲ್ಲ. ಎಲ್ಲ ಹುಳುಕನ್ನು ಮುಚ್ಚಿಡುವುದು ಇಂದಿನ ಸರ್ಕಾರದ ನಿಲುವು. ಯಾವುದೇ ಸಲಹೆ ಸೂಚನೆ ಬಂದರೂ ಅದನ್ನು ಸರ್ಕಾರ ತನ್ನ ವಿರುದ್ಧ ಅಪಪ್ರಚಾರ ಎಂದು ತಿಳಿಯಿತು. ಅಧಿಕಾರಿಗಳಿಗೆ ಬಹಿರಂಗವಾಗಿ ಮಾತನಾಡಬಾರದು ಎಂದು ಬಾಯಿಗೆ ಬೀಗ ಹಾಕಿದ್ದರಿಂದ ಈಗ ದಿವಾಳಿ ಹಂತ ಬಂದಿದ್ದರೂ ಯಾರೂ ಮಾತನಾಡುತ್ತಿಲ್ಲ. ಇತ್ತೀಚೆಗೆ ಗುರುಚರಣ್ ಉತ್ತಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದನ್ನು ರಹಸ್ಯವಾಗಿಡಲಾಗಿದೆ. ಅದರಲ್ಲಿ ವಿದ್ಯುತ್ ರಂಗವನ್ನು ಹೇಗೆ ಸರಿಪಡಿಸಬೇಕು ಎಂಬ ವಿವರಗಳಿವೆ. ಸರ್ಕಾರ ಇದನ್ನು ಬಹಿರಂಗವಾಗಿ ಚರ್ಚಿಸಲು ಸಿದ್ಧವಿಲ್ಲ.
ಸೋಲಾರ್ ಪ್ರಚಾರ
ಈಗ ರಾಷ್ಟ್ರಮಟ್ಟದಲ್ಲಿ ಸೋಲಾರ್ ವಿದ್ಯುತ್ ಪ್ರಚಾರ ನಡೆಯುತ್ತಿದೆ. ಅದರಲ್ಲಿ ಕ್ರೆಡಿಲ್ ಸಂಸ್ಥೆ ಭಾಗವಹಿಸಿ ಪ್ರಶಸ್ತಿ ಪಡೆಯುತ್ತಿವೆ. ಪಂಪ್‌ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ದುಡ್ಡು ಕಟ್ಟಿಸಿಕೊಂಡು ವಿದ್ಯುತ್ ಸಂಪರ್ಕ ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಇದಕ್ಕೆ ಸೋಲಾರ್ ಅಳವಡಿಸುವ ಯೋಜನೆ ಇನ್ನೂ ಸಂಪೂರ್ಣ ಕಾರ್ಯಗತವಾಗಿಲ್ಲ. ಸೋಲಾರ್ ನೀಡಿದರೆ ೨೫ ವರ್ಷ ರೈತ ವಿದ್ಯುತ್ ಕಂಪನಿ ಕಡೆ ತಿರುಗಿ ನೋಡುವುದಿಲ್ಲ. ಹೀಗಾಗಿ ಅದರ ಬಗ್ಗೆಯೂ ಅನುಮಾನ. ಅಂತರ್ಜಲ ೫೦೦ ಅಡಿ ಒಳಗೆ ಇದ್ದಲ್ಲಿ ಅಂಥ ಬಾವಿಗಳಿಗೆ ಸೋಲಾರ್ ನೀಡಬಹುದು. ಒಮ್ಮೆ ಸೋಲಾರ್ ನೀಡಿದರೆ ಆ ರೈತ ವಿದ್ಯುತ್ ಗ್ರಿಡ್‌ನಿಂದ ದೂರ ಉಳಿಯುತ್ತಾನೆ. ಈ ಕೆಲಸಕ್ಕೆ ಸರ್ಕಾರ ಆದೇಶ ಬೇಕು.
ಸ್ಮಾರ್ಟ್ ಮೀಟರ್
ಎಲ್ಲ ಕಡೆ ಸ್ಮಾರ್ಟ್ ಮೀಟರ್ ಅಳವಡಿಕೆ ಅಧಿಕಗೊಂಡಿದೆ. ನಮ್ಮ ರಾಜ್ಯ ಇದರಲ್ಲಿ ಹಿಂದೆ ಬಿದ್ದಿದೆ. ಮೀಟರ್ ಇಲ್ಲ ಎಂದಲ್ಲ. ನಮಗೆ ಹೊಸ ತಂತ್ರಜ್ಞಾನ ಬೇಕಿಲ್ಲ. ಇದನ್ನು ಕೊಟ್ಟರೆ ಗ್ರಾಹಕರು ವಿದ್ಯುತ್ ಕಂಪನಿಯ ಕಚೇರಿಗೆ ಕಾಲಿಡುವುದಿಲ್ಲ. ಮೊಬೈಲ್ ಆಪ್‌ನಿಂದಲೇ ವಿದ್ಯುತ್ ಮೀಟರ್ ರಿಚಾರ್ಜ್ ಮಾಡಿಕೊಳ್ಳಬಹುದು. ಕೆಇಆರ್‌ಸಿ ಹೇಳಿದರೂ ಎಸ್ಕಾಂಗಳು ಕ್ಯಾರೆ ಎನ್ನುತ್ತಿಲ್ಲ. ಸರ್ಕಾರಕ್ಕೆ ಇದರ ಕಡೆ ಗಮನ ಇಲ್ಲ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಆಂದೋಲನ ನಡೆಯುತ್ತಿದೆ. ರೈತರ ಪಂಪ್‌ಸೆಟ್‌ಗೆ ಆಧಾರ್ ಕಾರ್ಡ್ ಜೋಡಣೆ ಸೇರಿದಂತೆ ಹಲವು ಕ್ರಮಗಳು ಜನಪರವಾಗಿಲ್ಲ.
ಸರ್ಕಾರದ ನೆರವು
ರಾಜ್ಯ ಸರ್ಕಾರ ಮೊದಲಿನಿಂದಲೂ ವಿದ್ಯುತ್ ರಂಗಕ್ಕೆ ಸಾಕಷ್ಟು ನೆರವು ನೀಡುತ್ತ ಬಂದಿದೆ. ಈಗಲೂ ಭಾಗ್ಯಜ್ಯೋತಿಗೆ ಬಜೆಟ್‌ನಿಂದಲೇ ಹಣನೀಡಲಾಗಿದೆ. ಒಟ್ಟು ೧೫ ಸಾವಿರ ಕೋಟಿ ರೂ. ಹೋಗುತ್ತಿದೆ. ೨೦೦೦ ರಿಂದಲೂ ಜನ ಪ್ರತಿ ವರ್ಷ ವಿದ್ಯುತ್ ಬಿಲ್‌ಗೆ ಸಕಾಲದಲ್ಲಿ ಹಣ ನೀಡುತ್ತ ಬಂದಿದ್ದಾರೆ. ಆಗ ಪ್ರತಿ ಯೂನಿಟ್‌ಗೆ ೧.೨೦ ರೂ ಇತ್ತು. ಈಗ ಅದೇ ಯೂನಿಟ್‌ಗೆ ೫.೯೦ ರೂ. ಗ್ರಾಹಕರು ನೀಡುತ್ತಿದ್ದಾರೆ. ಅಂದರೆ ಸರ್ಕಾರ-ಗ್ರಾಹಕರು ನೀಡುತ್ತಿರುವ ಹಣ ಎಲ್ಲಿ ಹೋಗುತ್ತಿದೆ. ಇದರ ಬಗ್ಗೆ ಕೇಂದ್ರ ವಿದ್ಯುತ್ ಸಚಿವಾಲಯ, ರಾಜ್ಯ ಆರ್ಥಿಕ ಸಮೀಕ್ಷೆ, ಸಿಎಜಿ ವರದಿಗಳು ಬೆಳಕು ಚೆಲ್ಲಿವೆ. ಅದನ್ನು ಓದಿ ಕ್ರಮ ಕೈಗೊಳ್ಳುವ ವ್ಯವಧಾನ ಸರ್ಕಾರಕ್ಕಿಲ್ಲ. ಪ್ರತಿ ಸರ್ಕಾರ ಬಂದಾಗಲೂ ಹೊಸ ಯೋಜನೆ ಮೇಲೆ ಕಣ್ಣು. ಅದಕ್ಕೆ ಟೆಂಡರ್ ಕರೆದು ಕಮಿಷನ್ ಪಡೆದರೆ ಸರ್ಕಾರದ ಕೆಲಸ ಮುಗಿಯಿತು.
ಕೊನೆಯ ಸ್ಥಾನ
ದೇಶದಲ್ಲಿ ಪ್ರತಿ ವರ್ಷ ಎಲ್ಲ ವಿದ್ಯುತ್ ಕಂಪನಿಗಳ ಸಾಧನೆಯ ಪರಿಶೀಲನೆ ನಡೆಯುತ್ತದೆ. ಕೇಂದ್ರ ಸರ್ಕಾರದ ವಿದ್ಯುತ್ ಸಚಿವಾಲಯವೇ ಪ್ರಕಟಿಸುತ್ತದೆ. ಅದನ್ನು ನೋಡಿದರೆ ನಮ್ಮ ರಾಜ್ಯದ ಪರಿಸ್ಥಿತಿ ಎಲ್ಲಿದೆ ಎಂಬುದು ತಿಳಿಯುತ್ತದೆ. ಮೆಸ್ಕಾಂ ಕಂಪನಿ ಹೊರತುಪಡಿಸಿದರೆ ಉಳಿದ ಎಲ್ಲ ಕಂಪನಿಗಳ ಆರ್ಥಿಕ ಪರಿಸ್ಥಿತಿ ಹೀನಾಯ. ಹಿಂದೆ ಇಡೀ ದೇಶದಲ್ಲಿ ಮುಂಬೈ ನಗರ ಹೊರತುಪಡಿಸಿದರೆ ಬೆಂಗಳೂರು ನಗರ ಅತಿ ಕಡಿಮೆ ವಿದ್ಯುತ್ ನಷ್ಟ ಹೊಂದಿತ್ತು. ಈಗ ಏನಾಗಿದೆ.
ಬ್ಯಾಂಕ್‌ಗಳೂ ಈ ಕಂಪನಿಗಳಿಗೆ ಸಾಲ ಕೊಡಲು ಹಿಂಜರಿಯುವ ಕಾಲ ಬಂದಿದೆ. ಸರ್ಕಾರದ ಗ್ಯಾರಂಟಿಯಿಂದ ಕಂಪನಿಗಳು ಬದುಕಿವೆ. ೨೪ ವರ್ಷಗಳಲ್ಲಿ ವಿದ್ಯುತ್ ನಷ್ಟ ಇಳಿದಿರುವುದು ಶೇ. ೧೫ ಅದರಿಂದ ಉಳಿತಾಯವಾದ ಹಣ ಎಲ್ಲಿ ಹೋಯಿತು?