ವಾಟ್ಸಪ್ ಯೂನಿವರ್ಸಿಟಿಗಳ ಅತೃಪ್ತ ಆತ್ಮಗಳು

ರಾಜಕೀಯದ ಪಡಸಾಲೆಗಳಲ್ಲಿ ಕೆಲವರಿರುತ್ತಾರೆ, ಅವರ ಕೆಲಸವೇನೆಂದು ಕೇಳಿದರೆ ನಾನು ಆ ವಿಭಾಗದ ಸಂಚಾಲಕ, ಈ ವಿಭಾಗದ ಮುಖ್ಯ ಕೊಂಡಿ ಹಾಗೂ ನಮ್ಮ ಕ್ಷೇತ್ರದ ಪ್ರತಿ ಸುದ್ದಿ ನನ್ನ ಬಳಿ ಫಿಲ್ಟರ್ ಆಗಿಯೇ ಸುದ್ದಿ ಮಾಧ್ಯಮದಲ್ಲಿ ರಾರಾಜಿಸುತ್ತದೆ ಎಂದು ಬಂಡಲ್ ಬಡಾಯಿ ಬಿಟ್ಟುಕೊಂಡು ಅಡ್ಡಾಡುತ್ತಿರುತ್ತಾರೆ. ಅಂತವರಿಗೆ ನಾವೇನು ಮಾಡುತ್ತಿದ್ದೇವೆ ಅಥವಾ ಮಾಡುತ್ತೇವೆ ಎಂಬ ನಿಖರತೆ ಇರುವುದಿಲ್ಲ. ಮೈ ಕೆಲಸಕ್ಕೆ ಬಗ್ಗುವುದಿಲ್ಲ ಬುದ್ಧಿ ಇತರರ ತೇಜೋವಧೆ ಹೇಗೆ ಮಾಡಬೇಕು ಎಂಬುದನ್ನು ಬಿಟ್ಟು ಬೇರೇನನ್ನು ಯೋಚಿಸುತ್ತಿರುವುದಿಲ್ಲ, ಬದುಕು ಇನ್ಯಾರದೋ ಮೆಹರ್ಬಾನಿಯಲ್ಲಿ ನಡೆಯುತ್ತಿರುತ್ತದೆ. ಹಾಗೆಂದು ಈ ಬಾರಿ ಇವನನ್ನು ಕೆಳಗಡೆ ಕೆಡವಲೇಬೇಕು ಎಂದು ನೀವೇನಾದರೂ ಅವರ ಮುಂದೆ ಕುಳಿತಿರೋ ಮುಗಿದೇ ಹೋಯಿತು, ಅವತ್ತು ಏನಾಯಿತು ಗೊತ್ತ ವಾಜಪೇಯಿ ಅವರಿಗೆ ಒಂದೇ ಮತ ಬೇಕಿತ್ತು ಆಗ ನಾನು ಸಂಸತ್ತಿನ ಪಡಸಾಲೆಯಲ್ಲೇ ಇದ್ದೆ, ಎರಡೇ ಎರಡು ನಿಮಿಷ ಇದ್ದಿದ್ದರೆ ಅಟಲ್ ಜಿಗೆ ಒಂದು ಮತವಲ್ಲ ೧೦ ಮತವನ್ನು ಹಾಕಿಸುತ್ತಿದ್ದೆ ಎಂಬ ಬೊಂಬಡಾ ಬಡಾಯಿ ಕೊಚ್ಚಿಕೊಂಡು ತಮ್ಮ ಸ್ವಕಥನಕ್ಕೆ ನಾಂದಿ ಹಾಡುತ್ತಾರೆ. ಆಗ ನೀವೇನಾದರೂ ಯಾವ ಇಸವಿಯಲ್ಲಿ, ಆ ಇಸವಿಯಲ್ಲಿ ದೆಹಲಿಯ ಸಂಸತ್ತಿನಲ್ಲಿ ಸಂಸದರನ್ನು ಬಿಟ್ಟು ಅವರ ಆಪ್ತ ಸಹಾಯಕರಿಗೂ ಕೂಡ ಸಂಸತ್ತಿನ ಪಡಸಾಲೆ ಇರಲಿ ಅಲ್ಲಿ ಹೊರಭಾಗದಲ್ಲಿರುವ ಶೌಚಾಲಯಕ್ಕೂ ಪ್ರವೇಶವಿರಲಿಲ್ಲ ಅಲ್ಲವೇ ಎಂದು ಕೇಳಿದರೆ ಮುಗಿಯಿತು. ನಿಮ್ಮನ್ನು ಹಾಗೂ ನಿಮ್ಮ ಹೆಸರನ್ನು ವಾಟ್ಸಪ್ ಯೂನಿವರ್ಸಿಟಿಯ ಟ್ರೋಲ್ ವಿಭಾಗಕ್ಕೆ ಸೇರಿಸಿ ಸಮಯ ಸಿಕ್ಕಾಗೆಲ್ಲ ನಿಮ್ಮ ನಿಲುವಿನ ಬಗ್ಗೆ, ನಿಮ್ಮ ವರ್ತನೆಯ ಬಗ್ಗೆ ಅನಾಮಧೇಯ ಹೆಸರಲ್ಲಿ ನೊಂದ ಕಾರ್ಯಕರ್ತ ಎಂದೋ ಅಥವಾ ಹೆಸರೇ ಇಲ್ಲದ ಮೂಕರ್ಜಿಗಳ ಸುರಿಮಳೆ ಮೂಲಕ ನಿಮ್ಮ ಮೇಲೆ ವಿನಾಕಾರಣ ಯುದ್ಧ ಘೋಷಿಸಿಬಿಟ್ಟಿರುತ್ತಾರೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೋ ಎಂದು ನೀವೇನು ಉದಾಸೀನ ಮಾಡಿದಿರಿ ಎಂದಿಟ್ಟುಕೊಳ್ಳಿ, ಮತ್ತೆ ಅದೇ ರೋದನೆ ವೇದನೆ, ಸಭ್ಯ ಸಮಾಜದ ಪರಿಧಿಯನ್ನು ದಾಟಿ ಬೈಗುಳವರೆಗೆ ತಲುಪುತ್ತದೆ ಹಾಗಾದರೆ ಇಂತಹವರನ್ನು ನಿಭಾಯಿಸುವುದು ಹೇಗೆ, ಇಂತಹವರನ್ನು ಹೀಗೆ ನಿಭಾಯಿಸಬೇಕು ಅಥವಾ ನಿಭಾಯಿಸಬಹುದು ಎಂಬ ಯಾವ ಸಿದ್ಧ ಸೂತ್ರವೂ ಇಲ್ಲ ಆದರೆ ಇವರನ್ನು ನಿಜವಾಗಿಯೂ ನಿಭಾಯಿಸಬಲ್ಲ ಕಲೆ ಯಾರಿಗಾದರೂ ಸಿದ್ಧವಾಗಿದ್ದರೆ ಅದು ರಾಜಕೀಯದ ಅ ಆ ಇ ಈ ಯನ್ನು ಕಲೆತು ರಾಜಕೀಯ ಜೀವನದ ಪ್ರಾರಂಭದಲ್ಲಿ ಇಂತಹ ಫೇಕ್ ಮಾಸ್ಟರ್‌ಗಳ ಸುಳ್ಳು ಸುದ್ದಿಗೆ ಬಲಿಯಾಗಿ ಪ್ರಮುಖ ಹುದ್ದೆಗಳನ್ನು ಕಳೆದುಕೊಂಡು ನಂತರ ಅದರ ಅರಿವಾಗಿ ಹಂತ ಹಂತವಾಗಿ ಮೇಲೇರುವ ನಾಯಕರುಗಳು ಇದೊಂದು ವಿಶಿಷ್ಟ ಸಿದ್ಧಿ ತಮ್ಮದಾಗಿಸಿಕೊಂಡಿರುತ್ತಾರೆ, ವಾಟ್ಸಪ್ ಶೂರರು, ಗಾಸಿಪ್ ವೀರರು ಅಕ್ಕಪಕ್ಕದಲ್ಲಿ ಇದ್ದಾರೆ ಎಂದರೆ ಮುಗಿಯಿತು ಇವರು ಸುತರಾಂ ಯಾರ ವಿರುದ್ಧವೂ ಮಾತನಾಡಲು ಹೋಗುವುದಿಲ್ಲ, ಬದಲಿಗೆ ಯಾರನ್ನು ದೂರಬೇಕೋ ಅವರ ಬಗ್ಗೆ ಒಂದೊಳ್ಳೆ ಮಾತು ಆಡುವುದು ಕೃತಕ ನಗೆ ಬೀರಿ ಹೇಗಿದ್ದೀರ ಅಣ್ಣ ಎಂದು ಮಾತನಾಡಿಸಿ ಪೀಡೆ ತೊಲಗಿದರೆ ಸಾಕು ಎಂದು ಭಗವಂತನಲ್ಲಿ ಬೇಡುತ್ತಿರುತ್ತಾರೆ. ಭಗವಂತ ನಾಯಕನ ಪ್ರಾರ್ಥನೆಗೆ ಓಗೊಟ್ಟು ಪೀಡೆಗೆ ಮೋಕ್ಷ ಕೊಡದೆ ಪೀಡೆಯಾಗಿಯೇ ಇನ್ನೊಬ್ಬ ನಾಯಕನ ಪಡಸಾಲೆಗೆ ವರ್ಗಾಯಿಸುತ್ತಾನೆ.
ಮೊದಲಾದರೆ ಇಂತಹವರಿಂದ ಅಲ್ಲಿ ಇಲ್ಲಿ ಒಂದಿಷ್ಟು ಗಾಸಿಪ್ ಆಗುತ್ತಿತ್ತೇ ಹೊರತು ಅದು ಅಕ್ಷರ ರೂಪದಲ್ಲಿ ವಾಟ್ಸಪ್ ಯೂನಿವರ್ಸಿಟಿಯ ವಸ್ತುವಾಗಿರುತ್ತಿರಲಿಲ್ಲ. ಆದರೆ ಇಂದು ವಾಟ್ಸಪ್ ಎಂಬ ಸರಳ ಅಪ್ಲಿಕೇಶನ್ ಮೂಲಕ ಸುಳ್ಳು ಸುದ್ದಿ ಮತ್ತು ದ್ವೇಷ ಸಂದೇಶಗಳು ಎಗ್ಗಿಲ್ಲದೆ ಪಸರಿಸುತ್ತಿವೆ. ಇತ್ತೀಚಿನ ನಾಗಪುರ ಗಲಭೆ, ಅಂದು ನಡೆದಿದ್ದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಇದೆಲ್ಲದಕ್ಕೂ ತಾಜಾ ಉದಾಹರಣೆ. ಹೀಗಿದ್ದಾಗ್ಯೂ ಕೆಲವೊಮ್ಮೆ ಆಳುವ ಪಕ್ಷಗಳು ಹಾಗೂ ನಾಯಕರು ಇದೆಲ್ಲದರ ಅರಿವಿದ್ದರೂ ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ ಕಾರಣ ರಾಜಕಾರಣ, ಒಂದು ಚುನಾವಣೆಯನ್ನು ಒಂದೇ ಒಂದು ವಾಟ್ಸಾಪ್ ಸಂದೇಶ ಬದಲಿಸಬಹುದು ಅಷ್ಟರಮಟ್ಟಿಗೆ ಸೋಷಿಯಲ್ ಮೀಡಿಯಾಗೆ ಸೋಷಿಯಲ್ ಮೀಡಿಯಾವೇ ಸಾಟಿ ಎಂಬಂತಾಗಿದೆ. ಹಾಗೆ ನೋಡಿದರೆ ವಾಟ್ಸಪ್ ಯೂನಿವರ್ಸಿಟಿ ಎಂಬ ಪದವನ್ನು ವಿಡಂಬನಾತ್ಮಕ ಪದವಾಗಿ ಬಳಸಿದ್ದು ರವೀಶ್ ಕುಮಾರ್ ಎಂಬ ಪ್ರಸಿದ್ಧ ಪತ್ರಕರ್ತ ಎಂಬ ನೆನಪು. ಮೊದಲಾದರೆ ಏನನ್ನು ಓದಬೇಕು ಎಂಬ ಆಯ್ಕೆ ಓದುಗನೇ ಮಾಡುತ್ತಿದ್ದ ಅಂದರೆ ಅವನ ಅಭಿರುಚಿಗೆ ತಕ್ಕಂತೆ ಓದುವ ವಸ್ತುವಿನ ಆಯ್ಕೆ ಆಗುತಿತ್ತು, ಆದರೆ ಇಂದು ಹಾಗಲ್ಲ ಬೆಳ್ಳಂಬೆಳಗ್ಗೆ ಮೊಬೈಲ್ ದರ್ಶನ ಮಾಡಿ ವಾಟ್ಸಪ್‌ನಲ್ಲಿ ಇಣುಕಿ ಗುಡ್ ಮಾರ್ನಿಂಗ್ ಮೆಸೇಜುಗಳಿಗೆ ಒಂದು ಸ್ಮೈಲಿ ಕೊಟ್ಟು ಅಪ್ಲಿಕೇಶನ್ ಡಬ್ಬದಲ್ಲಿ ಅದೇನೇನು ಬಂದು ಬೀಳುತ್ತದೋ ಅದೆಲ್ಲವನ್ನು ಓದಬೇಕು, ಅದು ಚಿತ್ರಗರ್ಭಿತ ಆಗಿದ್ದರೆ ಅದಕ್ಕೆ ಇನ್ನಷ್ಟು ಮಹತ್ವ ಅದು ಹೆಚ್ಚು ಜನರನ್ನು ಬಹಳ ಬೇಗ ತಲುಪುವ ಸರಕು. ಅದು ನಿಜಕ್ಕೂ ಅರ್ಥಗರ್ಭಿತವೋ ಅಥವಾ ಚಿತ್ರಗರ್ಭಿತವೋ ಅವರವರ ಭಕುತಿಗೆ ಅವರವರ ಭಾವಕ್ಕೆ ಬಿಟ್ಟು ಬಿಡಬೇಕು. ಹೆಚ್ಚು ವಿಮರ್ಶಿಸಿದರೆ ಮನೆ ಮನಗಳಲ್ಲಿ ಕಂದಕವೇ ಉಂಟಾದೀತು. ಒಟ್ಟಿನಲ್ಲಿ ವಾಟ್ಸಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳು ಯುವಕರ ರಾಜಕೀಯ ನಿಲುವನ್ನು ಪ್ರಭಾವಿಸುತ್ತಿದೆ. ಆದರೆ ಅದೇ ಸಮಯಕ್ಕೆ ಯುವಕರ ಹಾಗೂ ಮತದಾರರ ವಿಶ್ಲೇಷಣಾ ಸಾಮರ್ಥ್ಯವನ್ನೇ ಕುಗ್ಗಿಸುತ್ತಿದೆ. ಮೊದಲಾದರೆ ರಾಜಕೀಯ ಹಾಗೂ ಪ್ರಜಾಪ್ರಭುತ್ವ ಇದರ ಆದ್ಯತೆ ಹಾಗೂ ರಾಜಕೀಯ ಪಕ್ಷಗಳ ಸಿದ್ಧಾಂತಗಳ ಒಳ ಹರಿವನ್ನು ಶಿಕ್ಷಣ ಸಂಸ್ಥೆಗಳ ಮೂಲಕ ಯುವಕರ ಅರಿವಿಗೆ ಬರುತ್ತಿತ್ತು, ಆದರೆ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಓದುವುದು ಕೆಲಸ ಗಿಟ್ಟಿಸಲು ಆದರೆ ಪ್ರಸ್ತುತ ವಿಷಯಗಳ ಅರಿವನ್ನು ಪಡೆಯಲು ವಾಟ್ಸಪ್ ಒಳ ಹೊಕ್ಕು, ಹೊರಬರಬೇಕು ಎಂಬ ವಾತಾವರಣವಿದೆ, ಇದು ನಿಜಕ್ಕೂ ಶೋಚನೀಯ.
ಅದೇನೇ ಇರಲಿ ವಾಟ್ಸಪ್ ಯೂನಿವರ್ಸಿಟಿಯ ಉತ್ತರಕುಮಾರರ ಪುಂಡಾಟಕ್ಕೆ ತಕ್ಕ ಶಾಸ್ತಿ ಆಗಬೇಕು. ಈಗಿರುವ ಪೊಲೀಸ್ ವ್ಯವಸ್ಥೆಯಲ್ಲಿ ವಾಟ್ಸಪ್ ಯೂನಿವರ್ಸಿಟಿಯ ಕಿರಿಕ್ ಸಂದೇಶಗಳ ಜನಕರನ್ನು ಕಂಡುಹಿಡಿಯುವುದು ಅಷ್ಟು ಕಷ್ಟವಲ್ಲ ಆದರೆ ಕಂಡುಹಿಡಿದ ನಂತರದ ಹೆಜ್ಜೆಗಳಲ್ಲಿ ಇನ್ನಷ್ಟು ಸ್ಪಷ್ಟ ನಿಯಮಗಳ ಅನುಷ್ಠಾನವಾಗಬೇಕು ಇಲ್ಲದಿದ್ದರೆ ವಾಟ್ಸಪ್ ಯೂನಿವರ್ಸಿಟಿಯ ಅತೃಪ್ತ ಆತ್ಮಗಳು ಸಮಾಜದಲ್ಲಿ ಕಂದಕವನ್ನು ಸೃಷ್ಟಿಸುವಲ್ಲಿ ಸಫಲರಾಗುತ್ತಾ ಇರುತ್ತಾರೆ, ಅಲ್ಲದೆ ಒಂದು ಸುಳ್ಳನ್ನು ಸಾವಿರ ಸಲ ನಿಜ ಎಂಬುವಂತೆ ಸಾರುತ್ತಿದ್ದರೆ ಸುಳ್ಳೇ ನಿಜವೆಂದು ಪರಿಭಾವಿಸುವ ಸಂಭವವಿರುತ್ತದೆ, ಹಾಗಾಗಬಾರದು.