ಸೂಲಿಬೆಲೆ ಸುಳ್ಳಿನ ಚಕ್ರವರ್ತಿ
ಉಡುಪಿ: ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ 15 ಶೇ. ಮೀಸಲಾತಿ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು, ಸಚಿವ ಸಂಪುಟದಲ್ಲಿ ಅನುಷ್ಠಾನಕ್ಕೆ ಅನುಮೋದನೆ ಪಡೆಯಲಾಗಿದೆಯಷ್ಟೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದನ್ನು ವಿರೋಧಿಸುವ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಟೀಕೆ ಮಾಡಲು ಬೇರೆ ವಿಚಾರಗಳಿಲ್ಲ. ಮೊದಲಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದರು, ಕಾಂಗ್ರೆಸ್ ಸರಕಾರ ಉಳಿಯುವುದಿಲ್ಲ ಅಂದರು. ಜನರ ಭಾವನೆಗಳೊಂದಿಗೆ ಆಟ ಆಡುವ ಬಿಜೆಪಿಯವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಸತಿಗೋಸ್ಕರ ಹಣ ಕೊಡಬೇಕಾಗಿದೆ ಎಂಬ ಸಚಿವ ಬಿ.ಆರ್.ಪಾಟೀಲ್ ಹೇಳಿಕೆ ಬಗ್ಗೆ ನಾನು ಗಮನಿಸಿಲ್ಲ ಎಂದರು.
ಸೂಲಿಬೆಲೆ ಸುಳ್ಳಿನ ಚಕ್ರವರ್ತಿ: ಇಂದಿನಿಂದ ಮೂರು ದಿನಗಳ ಕಾಲ ಕುಂದಾಪುರದಲ್ಲಿ ಆಯೋಜನೆಗೊಂಡಿರುವ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮ, ಅದಕ್ಕೆ ಎನ್ಎಸ್.ಯುಐ ಆಕ್ಷೇಪ ಹಾಗೂ ಪೊಲೀಸ್ ಇಲಾಖೆ ಹೇರಿರುವ ನಿಬಂಧನೆ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಹೆಬ್ಬಾಳ್ಕರ್, ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ರಾಮಾಯಣ ಭಗವದ್ಗೀತೆ ಮಹಾಭಾರತ ಎಂದೆಲ್ಲ ಹೇಳುತ್ತಾರೆ. ಆದರೆ, ಬಾಯಿ ತೆರೆದರೆ ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ಕಪ್ಪಗಿರುವುದನ್ನು ಬೆಳ್ಳಗೆ ಮಾಡುವುದರಲ್ಲಿ, ಬೆಳ್ಳಗೆ ಇರುವುದನ್ನು ಕಪ್ಪು ಮಾಡುವುದರಲ್ಲಿ ಅವರು ನಿಸ್ಸೀಮರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿದರು.
ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ತೆರನಾದ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಇಡೀ ದೇಶದ ಇತಿಹಾಸದಲ್ಲಿ ಸಂವಿಧಾನವನ್ನು ಎತ್ತಿಹಿಡಿದ ಪಕ್ಷ ಕಾಂಗ್ರೆಸ್. ನಾವು ಚಕ್ರವರ್ತಿ ಸೂಲಿಬೆಲೆಯಿಂದ ಪಾಠ ಕೇಳಬೇಕಾಗಿಲ್ಲ. ಮೂರು ದಿನ ಉಡುಪಿ ಜಿಲ್ಲೆಯಲ್ಲಿ ಸೂಲಿಬೆಲೆ ಇರುವ ವಿಚಾರ ಪೊಲೀಸ್ ವರಿಷ್ಠಾಧಿಕಾರಿಯಿಂದ ತಿಳಿಯಿತು. ಖಂಡಿತವಾಗಿ ಸೂಲಿಬೆಲೆ ತಮ್ಮ ಪ್ರವಾಸ ಮಾಡಬಹುದು. ಉಡುಪಿ ಶಾಂತಿಪ್ರಿಯರ ಜಿಲ್ಲೆ. ಹೀಗಾಗಿ ದ್ವೇಷದ ಭಾಷಣ, ಸುಳ್ಳು ಬಿತ್ತುವ ಕೆಲಸ, ವಿಷ ಬೀಜ ಬಿತ್ತುವ ಕೆಲಸ ಮಾಡದಿರಲಿ ಎಂದರು.
ಕರಾವಳಿಗೆ ಕೋಮು ನಿಗ್ರಹ ಪಡೆ ರಚನೆಗೆ ಬಿಜೆಪಿ ಶಾಸಕರ ವಿರೋಧ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಒಂದು ಕಡೆ ಬಿಜೆಪಿ ಕೋಮುವಾದವನ್ನು ಪ್ರಚೋದನೆ ಮಾಡುತ್ತದೆ. ಆದರೆ, ನಾವು ಕೋಮು ಪ್ರಚೋದನೆ ಮಾಡುತ್ತಿಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ಕೋಮು ನಿಗ್ರಹ ದಳಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಮನೋಭಾವನೆಯ ಬಿಜೆಪಿ ಶಾಸಕರನ್ನು ನೋಡಿದರೆ ಅವರ ಮನಃಸ್ಥಿತಿ ಏನು ಎನ್ನುವುದು ಉಡುಪಿಯ ಜನತೆಗೆ ಅರ್ಥವಾಗುತ್ತದೆ ಎಂದರು.