ಗದಗ: ತಾಲೂಕಿನ ಮುಳಗುಂದದ ಮಸೀದಿಗೆ ಅನುದಾನ ಬಿಡುಗಡೆ ಮಾಡಲು ಅಕ್ರಮ ಸಂಭಾವನೆ ಸ್ವೀಕರಿಸುತ್ತಿದ್ದರೆನ್ನಲಾದ ಗದಗ ಜಿಲ್ಲಾ ವಕ್ಫ್ ಅಧಿಕಾರಿ ರೆಹತ್‌ಉಲ್ಲಾ ಪೆಂಡಾರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದು ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಸೀದೆಗೆ ಅನುದಾನಕ್ಕಾಗಿ ಶಿಫಾರಸು ಪತ್ರ ನೀಡಲು ಗದಗ ಜಿಲ್ಲಾ ವಕ್ಫ್ ಅಧಿಕಾರಿ ಪೆಂಡಾರಿ ಅವರು ಎಸ್.ಎ. ಮಕಾನದಾರ ಎಂಬುವವರಿಗೆ ಹಣ ನೀಡುವಂತೆ ಕೇಳಿದ್ದರೆನ್ನಲಾಗಿದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಎಸ್.ಎ. ಮಕಾನದಾರ ದೂರು ನೀಡಿದ್ದರು.
ಶನಿವಾರ ಸಂಜೆ ಕಚೇರಿಯಲ್ಲಿ ಮಕಾನದಾರರಿಂದ ಒಂದು ಸಾವಿರ ರೂಪಾಯಿ ಹಣ ಪಡೆಯುತ್ತಿರುವಾಗಲೇ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಡಿಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡ ವಶಕ್ಕೆ ಪಡೆದಿದೆ.